

ಬೆಂಗಳೂರು: ವಿಮಾನದಲ್ಲಿ ತೀವ್ರ ಅಸ್ವಸ್ಥಗೊಂಡ ಯುವತಿಗೆ ಸಕಾಲಕ್ಕೆ ಚಿಕಿತ್ಸೆ ನೀಡಿ, ಮಾನವೀಯತೆ ಮೆರೆದ ಖಾನಾಪುರದ ಮಾಜಿ ಶಾಸಕಿ ಡಾ. ಅಂಜಲಿ ನಿಂಬಾಳ್ಕರ್ ಅವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೊಂಡಾಡಿದ್ದಾರೆ.
ಗೋವಾ ರಾಜ್ಯದ ಎಐಸಿಸಿ ಕಾರ್ಯದರ್ಶಿಯೂ ಆಗಿರುವ ಡಾ. ಅಂಜಲಿ ನಿಂಬಾಳ್ಕರ್ ಅವರು ವಿಮಾನದ ಮೂಲಕ ದಿಲ್ಲಿಗೆ ಪ್ರಯಾಣಿಸುತ್ತಿದ್ದರು. ವಿಮಾನ ಟೇಕ್ ಆಫ್ ಆದ ಕೆಲವೇ ನಿಮಿಷಗಳಲ್ಲಿ, ಸಹಪ್ರಯಾಣಿಕರಾಗಿದ್ದ ಅಮೆರಿಕ ಮೂಲದ ಯುವತಿಯೊಬ್ಬರು ವಿಪರೀತ ನಡುಕ ಉಂಟಾಗಿ, ಆಕೆ ಸ್ಥಳದಲ್ಲೇ ಪ್ರಜ್ಞಾಹೀನರಾಗಿ ಕುಸಿದುಬಿದ್ದಿದ್ದರು.
ಈ ವೇಳೆ ವಿಮಾನದಲ್ಲಿದ್ದ ಸಿಬ್ಬಂದಿ ಮತ್ತು ಪ್ರಯಾಣಿಕರು ಗಾಬರಿಗೊಂಡಿದ್ದ ಸಂದರ್ಭದಲ್ಲಿ, ಪರಿಸ್ಥಿತಿಯ ಗಂಭೀರತೆಯನ್ನು ಅರಿತ ಡಾ. ಅಂಜಲಿ ಅವರು ತಕ್ಷಣವೇ ಆಕೆಯ ನೆರವಿಗೆ ಧಾವಿಸಿದ್ದರು.
ನಾಡಿಮಿಡಿತವೂ ಸಿಗದೇ ಯುವತಿ ಸ್ಥಿತಿ ಚಿಂತಾಜನಕವಾಗಿತ್ತು. ಈ ವೇಳೆ ಎದೆಗುಂದದ ಅಂಜಲಿ ಅವರು, ತಮ್ಮ ವೈದ್ಯಕೀಯ ಅನುಭವವನ್ನು ಬಳಸಿ ಕೂಡಲೇ 'ಕಾರ್ಡಿಯೋ–ಪಲ್ಮನರಿ ರಿಸಸ್ಸಿಟೇಷನ್' (ಸಿಪಿಆರ್) ಚಿಕಿತ್ಸೆ ನೀಡಲು ಆರಂಭಿಸಿದರು. ಅವರ ಸತತ ಪ್ರಯತ್ನದ ಫಲವಾಗಿ ಯುವತಿಯ ಉಸಿರಾಟ ಮರುಕಳಿಸಿತು.
ಚಿಕಿತ್ಸೆಯ ನಂತರ ಚೇತರಿಸಿಕೊಂಡಂತೆ ಕಂಡ ಯುವತಿ, ಸುಮಾರು ಅರ್ಧ ಗಂಟೆಯ ಬಳಿಕ ಮತ್ತೆ ಪ್ರಜ್ಞೆ ತಪ್ಪಿ ಬಿದ್ದರು. ಈ ಹಂತದಲ್ಲಿ ವಿಮಾನದಲ್ಲಿ ಇದ್ದವರ ಆತಂಕ ಮತ್ತಷ್ಟು ಹೆಚ್ಚಾಯಿತು. ಆದರೆ, ಧೈರ್ಯ ಕಳೆದುಕೊಳ್ಳದ ಡಾ. ಅಂಜಲಿ ಅವರು ಮತ್ತೆ ತುರ್ತು ಚಿಕಿತ್ಸೆ ನೀಡಿ ಆಕೆಯ ಪ್ರಾಣದ ರಕ್ಷಣೆ ಮಾಡಿದರು.
ಕೇವಲ ಚಿಕಿತ್ಸೆ ನೀಡುವುದಷ್ಟೇ ಅಲ್ಲದೆ, ದೆಹಲಿ ತಲುಪುವವರೆಗೂ ಆ ಯುವತಿಯ ಪಕ್ಕದಲ್ಲೇ ನಿಂತು, ನಿರಂತರವಾಗಿ ಆರೋಗ್ಯದ ಮೇಲ್ವಿಚಾರಣೆ ನಡೆಸಿದರು.
ಅಷ್ಟೇ ಅಲ್ಲದೆ, ತಮ್ಮ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿಭಾಯಿಸಿದ ಡಾ. ಅಂಜಲಿ ನಿಂಬಾಳ್ಕರ್ ಅವರು, ವಿಮಾನ ದೆಹಲಿಯಲ್ಲಿ ಲ್ಯಾಂಡ್ ಆಗುವ ಮುನ್ನವೇ ಅಧಿಕಾರಿಗಳನ್ನು ಸಂಪರ್ಕಿಸಿ ತುರ್ತು ಆಂಬ್ಯುಲೆನ್ಸ್ ವ್ಯವಸ್ಥೆ ಮಾಡಿಸಿದ್ದರು. ವಿಮಾನ ನಿಲ್ದಾಣ ತಲುಪಿದ ಕೂಡಲೇ ರೋಗಿಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ರವಾನಿಸುವ ವ್ಯವಸ್ಥೆಯನ್ನು ಖುದ್ದಾಗಿ ನಿಂತು ಮಾಡಿಸಿದರು. ಡಾ. ಅಂಜಲಿ ಅವರ ಕಾರ್ಯವೈಖರಿಯನ್ನು ವಿಮಾನದ ಪೈಲಟ್ ಹಾಗೂ ಸಿಬ್ಬಂದಿ ಮುಕ್ತ ಕಂಠದಿಂದ ಶ್ಲಾಘಿಸಿದರು. ಸಹಪ್ರಯಾಣಿಕರು ಈ ಘಟನೆಯನ್ನು ಕಂಡು, ಅಂಜಲಿ ಅವರ ಸಮಯಪ್ರಜ್ಞೆಗೆ ಧನ್ಯವಾದ ಅರ್ಪಿಸಿದರು.
ಈ ನಡುವೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೂಡ ಅಂಜಲಿಯವರನ್ನು ಕೊಂಡಾಡಿದ್ದಾರೆ. ಗೋವಾ-ಹೊಸದಿಲ್ಲಿ ನಡುವಿನ ವಿಮಾನ ಪ್ರಯಾಣದ ವೇಳೆ ಖಾನಾಪುರದ ಮಾಜಿ ಶಾಸಕಿಯಾದ ಡಾ.ಅಂಜಲಿ ನಿಂಬಾಳ್ಕರ್ ಅವರು ಅಮೇರಿಕಾದ ಮಹಿಳೆಯೊಬ್ಬರಿಗೆ ತುರ್ತು ವೈದ್ಯಕೀಯ ನೆರವಿನ ಅಗತ್ಯತೆಯನ್ನು ಅರಿತು, ತಕ್ಷಣವೇ ಸಿಪಿಆರ್ ನೀಡಿ ಮಹಿಳೆಯ ಪ್ರಾಣ ಉಳಿಸಿದ ವಿಚಾರ ಕೇಳಿ ಹೆಮ್ಮೆಯೆನಿಸಿತು. ವೈದ್ಯ ವೃತ್ತಿ ತೊರೆದು ಸಕ್ರಿಯ ರಾಜಕೀಯದಲ್ಲಿದ್ದರೂ ಸಕಾಲದಲ್ಲಿ ರೋಗಿಯೊಬ್ಬರ ನೆರವಿಗೆ ಧಾವಿಸಿದ ಅಂಜಲಿಯವರ ಸೇವಾ ಮನೋಭಾವ ಮತ್ತು ಸಮಯಪ್ರಜ್ಞೆ ಅತ್ಯಂತ ಶ್ಲಾಘನೀಯ ಎಂದು ಹೇಳಿದ್ದಾರೆ.
ಅಧಿಕಾರವಿರಲಿ, ಇಲ್ಲದಿರಲಿ ಜನಸೇವೆ ಎಂದು ಬಂದಾಗ ಪ್ರತಿಫಲಾಪೇಕ್ಷೆ ಇಲ್ಲದೆ ತನ್ನ ಕೈಲಾದ ಸಹಾಯಕ್ಕೆ ನಿಲ್ಲುವ ಅಂಜಲಿಯಂತವರು ಸಮಾಜಕ್ಕೆ ಮಾದರಿ. ನೂರುಕಾಲ ಅಂಜಲಿಯವರಿಗೆ ಆಯಸ್ಸು ಆರೋಗ್ಯ ನೀಡಿ, ಕಷ್ಟದಲ್ಲಿರುವ ಜೀವಗಳಿಗೆ ಅವರಿಂದ ಇನ್ನಷ್ಟು ನೆರವು ಸಿಗುವಂತಾಗಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆಂದು ತಿಳಿಸಿದ್ದಾರೆ.
Advertisement