ರಾಜಕೀಯವೇ ಬೇರೆ-ಸ್ನೇಹವೇ ಬೇರೆ, ಹೊರಟ್ಟಿ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸುವುದು ಖಚಿತ: ಸಿಎಂ

ಎಲ್ಲಾ ಪಕ್ಷದವರೊಂದಿಗೆ ಉತ್ತಮ ಬಾಂಧವ್ಯ ಹೊಂದಿರುವ ಹೊರಟ್ಟಿಯವರು ಅಜಾತಶತ್ರು. ನೇರ ನುಡಿಯ ದಿಟ್ಟ ವ್ಯಕ್ತಿತ್ವದ ರಾಜಕಾರಣಿಯಾಗಿದ್ದಾರೆ.
CM Siddaramaiah
ಸಿಎಂ ಸಿದ್ದರಾಮಯ್ಯ
Updated on

ಹುಬ್ಬಳ್ಳಿ: ವಿಧಾನ ಪರಿಷತ್‌ನಲ್ಲಿ ಸದ್ಯಕ್ಕೆ ಕಾಂಗ್ರೆಸ್ ಪಕ್ಷಕ್ಕೆ ಮೆಜಾರಿಟಿ ಇಲ್ಲ. ಹೀಗಾಗಿ, ಸಭಾಪತಿ ಸ್ಥಾನಕ್ಕೆ ಧಕ್ಕೆಯಿಲ್ಲ. ಒಂದು ವೇಳೆ, ಮೆಜಾರಿಟಿ ಬಂದರೆ ಆ ಸ್ಥಾನದಿಂದ ಹೊರಟ್ಟಿ ಅವರನ್ನು ಕೆಳಕ್ಕೆ ಇಳಿಸುವುದು ಖಚಿತ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸ್ಪಷ್ಟಪಡಿಸಿದ್ದಾರೆ.

ವಿಧಾನ ಪರಿಷತ್‌ ಸದಸ್ಯರಾಗಿ 45 ವರ್ಷ ಪೂರೈಸಿದ ಹಿನ್ನೆಲೆ ಸಭಾಪತಿ ಬಸವ ರಾಜ ಹೊರಟ್ಟಿ ಅವರನ್ನು ಇಲ್ಲಿನ ನೆಹರು ಮೈದಾನದಲ್ಲಿ ಹೊರಟ್ಟಿ ಅಭಿಮಾನಿ ಬಳಗದಿಂದ ಅಭಿನಂದಿಸಲಾಯಿತು,

ಈ ವೇಳೆ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಎಲ್ಲಾ ಪಕ್ಷದವರೊಂದಿಗೆ ಉತ್ತಮ ಬಾಂಧವ್ಯ ಹೊಂದಿರುವ ಹೊರಟ್ಟಿಯವರು ಅಜಾತಶತ್ರು. ನೇರ ನುಡಿಯ ದಿಟ್ಟ ವ್ಯಕ್ತಿತ್ವದ ರಾಜಕಾರಣಿಯಾಗಿದ್ದಾರೆ. 1980 ರಲ್ಲಿ ವಿಧಾನಪರಿಷತ್ತಿನ ಶಾಸಕರಾಗಿದ್ದ ಇವರೊಂದಿನ ನನ್ನ ಸ್ನೇಹ ನಾಲ್ಕು ದಶಕಗಳದ್ದು. ಆಡಂಬರವಿಲ್ಲದ ಸ್ನೇಹಜೀವಿಯಾಗಿರುವ ಹೊರಟ್ಟಿಯವರು ಶಿಕ್ಷಕರ ಕ್ಷೇತ್ರದಿಂದ ಎಂಟು ಬಾರಿ ಶಾಸಕರಾಗಿದ್ದು, ಶಿಕ್ಷಕರ ಸಮಸ್ಯೆಗಳಿಗೆ ಧ್ವನಿಯಾಗಿದ್ದಾರೆಂದು ಹೇಳಿದ್ದಾರೆ.

1983ರಲ್ಲಿ ಶಾಸಕರಾದ ನಂತರ ಹೊರಟ್ಟಿಯವರೊಂದಿಗೆ ಸ್ನೇಹ ಬೆಳೆಯಿತು. ಹಳ್ಳಿಗಾಡಿನ ನಂಟಿರುವ ಇಬ್ಬರೂ ಸಾಮಾನ್ಯಕುಟುಂಬದಿಂದ ಬಂದವರು. ಅಧಿಕಾರ ಮತ್ತು ಹುದ್ದೆಯೊಂದಿಗೆ ವ್ಯಕ್ತಿತ್ವದ ನಂಟು ಹೊಂದುವ ವರ್ಗ ಒಂದಾದರೆ, ಅಧಿಕಾರದ ಹಿರಿಮೆಯನ್ನು ಕಾಯ್ದುಕೊಳ್ಳುವ ವರ್ಗವಿದ್ದು ಹೊರಟ್ಟಿಯವರದು ಎರಡನೇ ವರ್ಗವಾಗಿದೆ. 45 ವರ್ಷಗಳ ರಾಜಕೀಯ ಬದುಕಿನಲ್ಲಿ ಅವರೆಂದಿಗೂ ಅಹಂಕಾರ ತೋರಿದವರಲ್ಲ. ನಾವು ಒಂದೇ ಪಕ್ಷದಲ್ಲಿದ್ದಾಗ ಜೆಡಿಯು ಮತ್ತು ಜೆಡಿಎಸ್ ಪಕ್ಷಗಳನ್ನು ಒಂದುಗೂಡಿಸಲು ಬಹುವಾಗಿ ಪ್ರಯತ್ನಿಸಿದರು, ಆದರೆ ಹಿರಿಯ ನಾಯಕರು ಒಪ್ಪದಿದ್ದ ಕಾರಣ, ಅವರ ಈ ಪ್ರಯತ್ನಕ್ಕೆ ಫಲ ದೊರೆಯಲಿಲ್ಲ.

ನನಗೂ ಅವರಿಗೂ ಆತ್ಮೀಯತೆ ಇದ್ದರೂ ಸಭಾಪತಿ ಕುರ್ಚಿಯಲ್ಲಿ ಕುಳಿತಾಗ ಅದಕ್ಕೆ ನ್ಯಾಯ ಒದಗಿಸುತ್ತಾರೆ. ನನಗೆ ಸ್ನೇಹವಿದೆ ಎಂದು ಹೆಚ್ಚು ಉತ್ತೇಜನ ನೀಡುವುದಾಗಲಿ, ನನ್ನ ಪರವಾಗಿ ಮಾತನಾಡುವುದಾಗಲಿ ಮಾಡಿಲ್ಲ. ಮುಂದೆಯೂ ಮಾಡುವುದಿಲ್ಲ. ನಮಗೆ ಬಹುಮತ ಕಡಿಮೆಯಿದ್ದು ಮುಂದಿನ ಚುನಾವಣೆಯಲ್ಲಿ ಬಹುಮತ ಬರಬಹುದು. ಅಲ್ಲಿಯವರೆಗೆ ಇವರೇ ಮುಂದುವರೆಯುತ್ತಾರೆ. ಸದನ ಉತ್ತಮವಾಗಿ ನಡೆಯುತ್ತಿದೆ. ಸರ್ಕಾರಕ್ಕೆ ಮುಜುಗರವನ್ನುಂಟು ಮಾಡುವ ಕೆಲಸವನ್ನು ಅವರು ಯಾವತ್ತೂ ಮಾಡಿಲ್ಲ ಎಂದು ತಿಳಿಸಿದರು.

CM Siddaramaiah
ಹೊರಟ್ಟಿ ವಿರುದ್ಧ ಭ್ರಷ್ಟಾಚಾರ ಆರೋಪ: ಯಾದವ್ ಹೇಳಿಕೆ ಬಗ್ಗೆ ತನಿಖೆಗೆ ಒತ್ತಾಯಿಸಲು ಒಗ್ಗಟ್ಟಾದ ಪರಿಷತ್ ಸದಸ್ಯರು!

ಸತತವಾಗಿ ಎಂಟು ಬಾರಿ ವಿಧಾನ ಪರಿಷತ್ ಸದಸ್ಯರಾಗಿರುವುದು ವಿಶ್ವದಾಖಲೆಯಾಗಿದೆ. ಅವರ ವಿಜಯಪಥ ಸದಾ ಮುಂದುವರೆಯಲಿ ಎಂದು ಹಾರೈಸುತ್ತೇನೆ. ಆದರೆ ಬಸವರಾಜ ಹೊರಟ್ಟಿಯವರು ಕಾಂಗ್ರೆಸ್ ಹೊರತುಪಡಿಸಿ, ಬೇರೆ ಯಾವುದೇ ಪಕ್ಷವನ್ನು ಪ್ರತಿನಿಧಿಸಿದರೆ, ಅವರ ವಿರುದ್ಧವೇ ಪ್ರಚಾರ ನಡೆಸುವುದು ಗ್ಯಾರಂಟಿ. ಆದಾಗ್ಯೂ ಹೊರಟ್ಟಿಯವರು ಗೆಲ್ಲಲಿ ಎಂದು ವೈಯಕ್ತಿಕವಾಗಿ ಆಶಿಸುತ್ತೇನೆ. ಸರ್ಕಾರಕ್ಕೆ, ವಿಧಾನಮಂಡಲಕ್ಕೆ ಅವರ ಮಾರ್ಗದರ್ಶನ ಮತ್ತಷ್ಟು ದೊರೆಯಲಿ ಎಂದು ಹಾರೈಸುತ್ತೇನೆ.

ಹೊರಟ್ಟಿ ಅವರು ತಮ್ಮ ಹಳ್ಳಿಯಲ್ಲಿ ಒಂದು ಶಾಲೆಯನ್ನು ಮಾದರಿ ಶಾಲೆಯನ್ನಾಗಿಸಿದ್ದಾರೆ. ಯಾವುದೇ ಖಾಸಗಿ ಶಾಲೆಗಿಂತಲೂ ಅದು ಕಡಿಮೆ ಇಲ್ಲ. ಅವರು ಕಲಿತ ಶಾಲೆಯನ್ನು ಅಭಿವೃದ್ಧಿಪಡಿಸಿದ್ದಾರೆ. ಪ್ರತಿಯೊಬ್ಬರೂ ಅವರು ಕಲಿತ ಶಾಲೆಯನ್ನು ಅಭಿವೃದ್ಧಿಪಡಿಸಿದರೆ ಅದರಿಂದ ಹೆಚ್ಚು ಅನುಕೂಲವಾಗಲಿದೆ ಎಂದರು.

ಬಸವರಾಜ ಹೊರಟ್ಟಿ ಅವರನ್ನು ಹೋರಾಟದ ಹೊರಟ್ಟಿ ಎಂದು ಕರೆಯುತ್ತಾರೆ. ಈಗಾಗಲೇ ದಾಖಲೆ ನಿರ್ಮಾಣ ಮಾಡಿದ್ದು ಮತ್ತೊಬ್ಬರು ಶಿಕ್ಷಕರ ಕ್ಷೇತ್ರದಿಂದ ಈ ದಾಖಲೆಯನ್ನು ಮುರಿಯಲು ಸಾಧ್ಯವಿಲ್ಲ. ನಮ್ಮ ಪಕ್ಷದ ಅಭ್ಯರ್ಥಿಯ ಪರ ಪ್ರಚಾರಕ್ಕಾಗಿ ಒಮ್ಮೆ ಹೋಗಿದ್ದರೂ ನಮ್ಮ ಅಭ್ಯರ್ಥಿ ಗೆಲ್ಲಲಿಲ್ಲ. ನಮ್ಮ ಮಧ್ಯೆ ಸ್ನೇಹವಿದ್ದರೂ ಅವರನ್ನು ಸೋಲಿಸಲು ಹೋಗಿದ್ದೆ. ರಾಜಕಾರಣ ಬೇರೆ, ಸ್ನೇಹ ಬೇರೆ. ಬಸವರಾಜ್ ಬೊಮ್ಮಾಯಿ ಹಾಗೂ ಅವರ ತಂದೆ ನನಗೆ ಬಹಳ ಆತ್ಮೀಯರು. ಆದರೆ ಅವರ ಮಗನನ್ನು ಚುನಾವಣೆಯಲ್ಲಿ ಸೋಲಿಸಬೇಕಾಯಿತು.

ಸಭಾಪತಿಯಾಗಿ ಹೊರಟ್ಟಿಯವರು ನಿಷ್ಪಕ್ಷಪಾತವಾಗಿ ಸದನ ನಡೆಸುತ್ತಾರೆ. ಅಲ್ಲಿ ಕುಳಿತಾಗ ಕಾನೂನಿನ ಪ್ರಕಾರ ಸಭೆ ನಡೆಸುವ ವ್ಯಕ್ತಿತ್ವವನ್ನು ರೂಪಿಸಿಕೊಂಡಿದ್ದಾರೆ. ಪರಿಷತ್ತಿನಲ್ಲಿರುವ ಮೂರೂ ಪಕ್ಷದವರೂ ಅವರನ್ನು ಗೌರವದಿಂದ ಕಾಣುತ್ತಾರೆ. ಕೆಲವೊಮ್ಮೆ ಏಕವಚನ ಬಳಸಿದರು ಯಾರೂ ಕೋಪಿಸಿಕೊಳ್ಳುವುದಿಲ್ಲ. ಅಷ್ಟರಮಟ್ಟಿನ ವ್ಯಕ್ತಿತ್ವ ಅವರದ್ದು. ಅವರ ಅನುಭವದ ಆಧಾರದ ಮೇಲೆ ಸದನಕ್ಕೆ ಮಾರ್ಗದರ್ಶನ ಮಾಡುತ್ತಾರೆ. ಸಂಸದೀಯ ಪಟು ಆಗಿರುವುದರಿಂದ ಯಾವುದಕ್ಕೆ ಎಷ್ಟು ಒತ್ತು ಕೊಡಬೇಕೆಂದು ಅವರಿಗೆ ಗೊತ್ತಿದೆ, ಯಾವುದೇ ಪಕ್ಷದವರನ್ನಾಗಲಿ ಬೆದರಿಸಿ ಸುಮ್ಮನೆ ಕೂರಿಸುತ್ತಾರೆ. ಇವರಲ್ಲದೇ ಬೇರೆ ಯಾರೇ ಆಗಿದ್ದರೂ ಅದನ್ನು ಒಪ್ಪುತ್ತಿದ್ದುದ್ದು ಕಷ್ಟ ಎಂದು ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com