

ಚಿಕ್ಕಮಗಳೂರು: ಸಿನಿಮಾಗಳಲ್ಲಿ ನೋಡುತ್ತಿದ್ದ ದೃಶ್ಯಗಳು ಇತ್ತೀಚೆಗೆ ನಿಜಜೀವನದಲ್ಲಿ ನಡೆಯುತ್ತಿವೆ. ಲವರ್ಗೆ ಕೈಕೊಟ್ಟು ಬೇರೆ ಯುವತಿ ಜೊತೆಗೆ ಮದುವೆಯಾದ ಯುವಕನಿಂದ ಮೋಸ ಹೋದ ಅಶ್ವಿನಿ ಎಂಬ ಯುವತಿ ಮದುವೆ ಮಂಟಪಕ್ಕೆ ನೇರವಾಗಿ ಹೋಗಿ ರಂಪಾಟ ನಡೆಸಿರುವ ಘಟನೆ ಚಿಕ್ಕಮಗಳೂರಿನ ದೊಡ್ಡೇಗೌಡ ಕಲ್ಯಾಣ ಮಂಟಪದಲ್ಲಿ ನಡೆದಿದೆ.
ಕಳೆದ 10 ವರ್ಷದಿಂದ ಶರತ್ ಎಂಬಾತನನ್ನು ಯುವತಿ ಪ್ರೀತಿಸುತ್ತಿದ್ದು, ಮದುವೆಯಾಗುವುದಾಗಿ ನಂಬಿಸಿ ಕೊನೆಗೆ ಮೋಸ ಮಾಡಿದ್ದಾನೆ ಎಂದು ಯುವತಿ ಆರೋಪಿಸಿದ್ದಾಳೆ.
ನೇರವಾಗಿ ಮದುವೆ ಮಂಟಪಕ್ಕೆ ಬಂದ ಹಾಸನ ಜಿಲ್ಲೆ ಬೇಲೂರು ಮೂಲದ ಯುವತಿ ನೀನು ಮೋಸ ಮಾಡಿದ್ದೀಯಾ, ಈಗ ನನ್ನನ್ನು ಮದುವೆಯಾಗುತ್ತೀಯಾ ಇಲ್ಲವಾ ಎಂದು ರಂಪಾಟ ಮಾಡಿದ್ದಾಳೆ.
ಶರತ್ ಮೋಸ ಮಾಡಿರುವ ವಿಚಾರವಾಗಿ 8 ತಿಂಗಳ ಹಿಂದೆಯೇ ಆಲ್ದೂರು ಪೊಲೀಸ್ ಠಾಣೆಗೆ ಯುವತಿ ದೂರು ನೀಡಿದ್ದಳು. ನಿನ್ನೆ ಶರತ್ ಮನೆಯ ಮುಂದೆ ಏಕಾಂಗಿ ಹೋರಾಟ ಕೂಡ ಮಾಡಿದ್ದಳು. ಅದರ ಮುಂದುವರಿದ ಭಾಗವಾಗಿ ಇಂದು ಮದುವೆ ಮಂಟಪಕ್ಕೆ ಬಂದು ನೊಂದ ಯುವತಿ ರಂಪಾಟ ನಡೆಸಿದ್ದಾಳೆ. ಮದುವೆ ಮಂಟಪದೊಳಗೆ ಧರಣಿ ಕುಳಿತಿದ್ದಾಳೆ. ಕೊನೆಗೆ ಪೊಲೀಸರು ಮಧ್ಯೆ ಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದ್ದಾರೆ.
ನನಗೆ ಹಣ ಬೇಡ ಅವನು ಬೇಕು
ಮಾಧ್ಯಮಗಳ ಜೊತೆ ಮಾತಾಡಿದ ನೊಂದ ಯುವತಿ, ಇದೇ ಮಂಟಪದಲ್ಲಿ ನನ್ನ ಮದುವೆಯಾಗಬೇಕು. ಅಲ್ಲಿಯವರೆಗೂ ನಾನು ಹೋರಾಟ ಮಾಡುತ್ತೇನೆ. ನಾನು ಬರುವ ಮೊದಲೇ ಮದುವೆಯಾಗಿದೆ. ಈಗ ನನ್ನನ್ನು ಶರತ್ ಮದುವೆಯಾಗಬೇಕು. ಶರತ್ ಮನೆಯವರು ಹಣ ಕೊಡ್ತೀವಿ ಇಲ್ಲಿಂದ ಹೋಗು ಅಂದ್ರು. ನನಗೆ ಯಾವುದೇ ಹಣ ಬೇಡ, ಅವನೇ ನನ್ನನ್ನ ಮದುವೆ ಆಗಬೇಕು ಅಷ್ಟೇ ಎಂದು ಅಶ್ವಿನಿ ಹೇಳಿದ್ದಾರೆ.
ಹಲ್ಲೆ ಆರೋಪ, ಮಂಟಪ ಖಾಲಿ
ಅಶ್ವಿನಿ ಮಂಟಪದೊಳಗೆ ಪ್ರವೇಶಿಸುತ್ತಿದ್ದಂತೆ, ಹುಡುಗನ ಕಡೆಯವರು ಬಾಗಿಲು ಹಾಕಿಕೊಂಡರು. 'ಹುಡುಗನ ಕಡೆಯವರು ನನ್ನ ಮೇಲೆ ಹಲ್ಲೆ ಮಾಡಿ, ಎಳೆದಾಡಿದ್ದಾರೆ' ಎಂದು ಅಶ್ವಿನಿ ಆರೋಪಿಸಿದ್ದಾಳೆ. ಅಲ್ಲದೆ, ಸ್ಥಳದಲ್ಲಿದ್ದವರು ವಿಡಿಯೋ ಮಾಡದಂತೆ ಶರತ್ ಕುಟುಂಬದವರು ಕ್ಯಾಮರಾಗಳಿಗೆ ಅಡ್ಡ ಬಂದಿದ್ದಾರೆ. ಗಲಾಟೆ ತೀವ್ರವಾದ ಕಾರಣ, ಮದುವೆ ಮನೆಯವರು ದಿಢೀರನೆ ಕಲ್ಯಾಣ ಮಂಟಪವನ್ನು ಖಾಲಿ ಮಾಡಿ ಸ್ಥಳದಿಂದ ನಿರ್ಗಮಿಸಿದ್ದಾರೆ. ನ್ಯಾಯಕ್ಕಾಗಿ ಅಶ್ವಿನಿಯ ಹೋರಾಟ ಮುಂದುವರಿದಿದೆ.
Advertisement