

ಬೆಂಗಳೂರು: ಗ್ಯಾರಂಟಿ ಯೋಜನೆಗಳ ನಿಲ್ಲಿಸಿ, ರಸ್ತೆ-ಚರಂಡಿ ನಿರ್ಮಿಸಿದರೆ ಬಡವರ ಉದ್ಧಾರ ಆಗುತ್ತಾರಾ ಎಂದು ಸಚಿವ ಡಾ.ಜಿ.ಪರಮೇಶ್ವರ್ ಅವರು ಪ್ರಶ್ನಿಸಿದ್ದಾರೆ.
ತುಮಕೂರಿನಲ್ಲಿ ಭಾನುವಾರ ನಡೆದ ಬಂಜಾರ ಸಮುದಾಯದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಸ್ತೆ ಮತ್ತು ಚರಂಡಿಗಳ ನಿರ್ಮಾಣದಿಂದ ಜನಸಮೂಹ ನಿಜವಾಗಿಯೂ ಉದ್ದಾರವಾಗುತ್ತದೆಯೇ? ಬಡವರ ಜೀವನ ಉದ್ದಾರವಾಗುತ್ತದೆಯೇ ಎಂದು ಪ್ರಶ್ನಿಸಿದ್ದಾರೆ.
ರಸ್ತೆ, ಚರಂಡಿ ಅಥವಾ ಇನ್ನಿತರ ಕಾರ್ಯಕ್ರಮಗಳಿಂದ ಮಾತ್ರ ಬಡವರ ಜೀವನದಲ್ಲಿ ಬದಲಾವಣೆ ಬರುವುದಿಲ್ಲ. ಸಾವಿರಾರು ವರ್ಷಗಳ ಶೋಷಣೆಯನ್ನು ಕೊನೆಗಾಣಿಸುವುದು ಮತ್ತು ಜನರ ಜೀವನವನ್ನು ಸುಧಾರಿಸುವುದೇ ಗ್ಯಾರಂಟಿ ಯೋಜನೆಗಳ ಮುಖ್ಯ ಉದ್ದೇಶ. ನಾವು ರಸ್ತೆ, ಮನೆ ನಿರ್ಮಾಣ ಅಥವಾ ನೀರಾವರಿ ಯೋಜನೆಗಳನ್ನು ನಿಲ್ಲಿಸಿಲ್ಲ, ನಿರ್ಮಾಣ ಕಾಮಗಾರಿ ನಿಧಾನವಾಗಿರಬಹುದು. ಆದರೆ, ಅವು ಎಂದಿಗೂ ನಿಲ್ಲುವುದಿಲ್ಲ. ಜನರ ಜೀವನ ಉತ್ತಮಗೊಳ್ಳಬೇಕು ಮತ್ತು ಸುಧಾರಣೆಯಾಗಬೇಕು ಎಂಬ ದೃಷ್ಟಿಯಿಂದಲೇ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರಲಾಗಿದೆ ಎಂದು ಹೇಳಿದರು.
ನಾವು ಕೊಡುವ 2000 ರೂ.ಗಳನ್ನು ಸಂಗ್ರಹಿಸಿ ಮಗನ ಶಿಕ್ಷಣಕ್ಕೆ ಮಹಿಳೆ ಲ್ಯಾಪ್‌ಟಾಪ್ ಕೊಡಿಸಿದ ಹತ್ತಾರು ನಿದರ್ಶನಗಳಿವೆ. ಗ್ಯಾರಂಟಿ ಯೋಜನೆಯಿಂದ ಕೂಲಿ ಮಾಡುವ ಹಳ್ಳಿಯ ಪ್ರತಿಯೊಬ್ಬರಿಗೂ ಅನುಕೂಲವಾಗಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ದ್ವನಿ ಇಲ್ಲದವರಿಗೆ ದ್ವನಿ ನೀಡುವಂತಹ ಅನೇಕ ಜನಪರ ಯೋಜನೆಗಳನ್ನು ಜಾರಿಗೆ ತಂದಿದೆ. ಗ್ಯಾರಂಟಿ ಯೋಜನೆಗಳಿಂದ ಬಡವರ ಬದುಕು ಹಸನಾಗಿದೆ. ವಿರೋಧ ಪಕ್ಷಗಳು ಒತ್ತಾಯಿಸುತ್ತಿರುವಂತೆ ನಾವು ಗ್ಯಾರಂಟಿ ಯೋಜನೆ ನಿಲ್ಲಿಸಿದರೆ, ಜನರ ಜೀವನ ಏನಾಗುತ್ತದೆ? ನಮ್ಮ ಸರ್ಕಾರ ರಸ್ತೆಗಳು, ಚರಂಡಿಗಳು, ನೀರಾವರಿ ಯೋಜನೆಗಳು ಮತ್ತು ವಸತಿ ಯೋಜನೆಗಳಂತಹ ಅಭಿವೃದ್ಧಿ ಕಾರ್ಯಗಳನ್ನು ನಿಲ್ಲಿಸಿಲ್ಲ. ಕೆಲಸವು ಸ್ವಲ್ಪ ನಿಧಾನವಾಗಬಹುದು ಎಂದು ತಿಳಿಸಿದರು.
Advertisement