

ಬೆಂಗಳೂರು: ಶಿವಾಜಿನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿರುವ ರಸೆಲ್ ಮಾರುಕಟ್ಟೆಯನ್ನು ಆಧುನಿಕ ಸ್ಪರ್ಶದೊಂದಿಗೆ ಪುನರ್ ಅಭಿವೃದ್ಧಿಪಡಿಸುವಂತೆ ಅಧಿಕಾರಿಗಳಿಗೆ ಗ್ರೇಟರ್ ಬೆಂಗಳೂರು ಅಥಾರಿಟಿ (ಜಿಬಿಎ) ಸೂಚನೆ ನೀಡಿದೆ.
ಶಿವಾಜಿನಗರ ಕ್ಷೇತ್ರದ ವಿವಿಧ ಪ್ರದೇಶಗಳಲ್ಲಿ ಪರಿಶೀಲನೆ ನಡೆಸಿದ ಗ್ರೇಟರ್ ಬೆಂಗಳೂರು ಅಥಾರಿಟಿ (ಜಿಬಿಎ) ಮುಖ್ಯ ಆಯುಕ್ತ ಮಹೇಶ್ವರ ರಾವ್ ಅವರು, ರಸೆಲ್ ಮಾರುಕಟ್ಟೆಯ ಪುನರ್ ಅಭಿವೃದ್ಧಿಗಾಗಿ ತಕ್ಷಣವೇ ಟೆಂಡರ್ ಆಹ್ವಾನಿಸುವಂತೆ ನಿರ್ದೇಶನ ನೀಡಿದರು.
ರಸೆಲ್ ಮಾರುಕಟ್ಟೆ ಪುನರ್ ಅಭಿವೃದ್ಧಿಗೆ ಸಂಬಂಧಿಸಿದ ವಿವರವಾದ ಯೋಜನಾ ವರದಿ (ಡಿಪಿಆರ್) ಈಗಾಗಲೇ ಸಿದ್ಧವಾಗಿದ್ದು, ಯೋಜನೆಯನ್ನು ಶೀಘ್ರವಾಗಿ ಜಾರಿಗೆ ತರಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು.
ರಸೆಲ್ ಮಾರುಕಟ್ಟೆ ಒಂದು ಐತಿಹಾಸಿಕ ಕಟ್ಟಡವಾಗಿದೆ. ಇದರ ಪರಂಪರೆಯನ್ನು ಕಾಪಾಡಿಕೊಂಡು, ಆಧುನಿಕ ಸ್ಪರ್ಶದೊಂದಿಗೆ ಪುನರ್ ಅಭಿವೃದ್ಧಿಪಡಿಸಿ, ಬೆಂಗಳೂರು ನಗರಕ್ಕೆ ದೀರ್ಘಕಾಲಿಕ ಹಾಗೂ ಜನಸ್ನೇಹಿ ಮಾರುಕಟ್ಟೆಯಾಗಿ ರೂಪಿಸಬೇಕು ಎಂದು ಹೇಳಿದರು.
ಪುನರ್ ಅಭಿವೃದ್ಧಿ ಕಾಮಗಾರಿಯ ವೇಳೆ ವ್ಯಾಪಾರಿಗಳಿಗೆ ಯಾವುದೇ ಅಡಚಣೆ ಉಂಟಾಗಬಾರದು. ಕಾಮಗಾರಿ ಆರಂಭಿಸುವ ಮುನ್ನ ತಾತ್ಕಾಲಿಕ ವ್ಯವಸ್ಥೆಗಳನ್ನು ಕಲ್ಪಿಸಬೇಕೆಂದು ನಿರ್ದೇಶನ ನೀಡಿದರು.
ಮಾರುಕಟ್ಟೆ ಅಭಿವೃದ್ಧಿ ಸಂದರ್ಭದಲ್ಲಿ ಸಮರ್ಪಕ ಒಳಚರಂಡಿ ವ್ಯವಸ್ಥೆ ಕಲ್ಪಿಸಬೇಕು. ವಾಹನ ನಿಲುಗಡೆ ಪ್ರದೇಶಗಳಲ್ಲಿ ನೀರು ನಿಲ್ಲದಂತೆ ಸೂಕ್ತ ವ್ಯವಸ್ಥೆ ಮಾಡಬೇಕು. ಮಾರುಕಟ್ಟೆಯನ್ನು ಸದಾ ಸ್ವಚ್ಛವಾಗಿರಿಸಲು ಕಸ ವಿಂಗಡಣೆ ಮತ್ತು ಕಾಂಪೋಸ್ಟಿಂಗ್ ವ್ಯವಸ್ಥೆಯನ್ನು ಸಮಗ್ರವಾಗಿ ಅಳವಡಿಸಬೇಕು. ಅಗ್ನಿ ಸುರಕ್ಷತಾ ವ್ಯವಸ್ಥೆ, ಶೌಚಾಲಯ ಸೌಲಭ್ಯ, ಪಾದಚಾರಿಗಳ ಪ್ರದೇಶಗಳಲ್ಲಿ ಗ್ರಾನೈಟ್ ನೆಲಹಾಸು, ಗಡಿಯಾರ ಗೋಪುರ ವಿನ್ಯಾಸ ಸೇರಿದಂತೆ ಎಲ್ಲಾ ಮೂಲಸೌಕರ್ಯ ಕಾಮಗಾರಿಗಳನ್ನು ಉನ್ನತ ಗುಣಮಟ್ಟದಲ್ಲಿ ನಿರ್ವಹಿಸಬೇಕೆಂದು ಸೂಚಿಸಿದರು.
ಜೊತೆಗೆ, ರಸೆಲ್ ಮಾರುಕಟ್ಟೆ ಸುತ್ತಮುತ್ತಲ ಪ್ರದೇಶಗಳ ಅಭಿವೃದ್ಧಿಗೆ ಸಮಗ್ರ ಯೋಜನೆ ರೂಪಿಸುವಂತೆಯೂ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಇದೇ ವೇಳೆ, ರಸೆಲ್ ಮಾರುಕಟ್ಟೆ ಹಾಗೂ ಅದರ ಸುತ್ತಮುತ್ತಲ ಪ್ರದೇಶಗಳಲ್ಲಿ ಆಸ್ತಿ ತೆರಿಗೆ ಮರುಪರಿಶೀಲನೆ ನಡೆಸಿದ ಅವರು, ತೆರಿಗೆ ಸಂಗ್ರಹ ಹೆಚ್ಚಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಪರಿಶೀಲನಾ ಸಂದರ್ಭದಲ್ಲಿ ಹೆಚ್ಚುವರಿ ಆಯುಕ್ತ (ಅಭಿವೃದ್ಧಿ) ದಲ್ಜಿತ್ ಕುಮಾರ್, ಜಂಟಿ ಆಯುಕ್ತ ಹೇಮಂತ್ ಶರಣ್, ಮುಖ್ಯ ಎಂಜಿನಿಯರ್ ವಿಜಯ್ ಕುಮಾರ್ ಹರಿದಾಸ್, ಕಾರ್ಯನಿರ್ವಾಹಕ ಎಂಜಿನಿಯರ್‌ಗಳು ಹಾಗೂ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.
Advertisement