TNIE ವರದಿ ಫಲಶ್ರುತಿ: ಸ್ಥಳೀಯವಾಗಿ ಸ್ಯಾನಿಟರಿ ಪ್ಯಾಡ್ ಖರೀದಿಗೆ ರಾಜ್ಯ ಸರ್ಕಾರ ಒಪ್ಪಿಗೆ..!
ಬೆಂಗಳೂರು: ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಯ (The New Indian express newspaper) ಬೆಂಗಳೂರು ಆವೃತ್ತಿಯಲ್ಲಿ ವರದಿ ಬಳಿಕ ವಿದ್ಯಾರ್ಥಿನಿಯರಿಗೆ ಸ್ಥಳೀಯವಾಗಿ ಸ್ಯಾನಿಟರಿ ಪ್ಯಾಡ್ ಖರೀದಿ ಮಾಡಲು ರಾಜ್ಯ ಸರ್ಕಾರ ಅನುಮೋದನೆ ನೀಡಿದೆ.
ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ಡಿಸೆಂಬರ್ 16, 2025 ರಂದು ‘No Shuchi kits yet, girl students skip classes’, ಶೀರ್ಷಿಕೆಯಡಿ ವರದಿಯನ್ನು ಪ್ರಕಟಿಸಿತ್ತು.
ವರದಿ ಬೆನ್ನಲ್ಲೇ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು, ಸ್ಥಳೀಯವಾಗಿ ಸ್ಯಾನಿಟರಿ ಪ್ಯಾಡ್ ಖರೀದಿಸಿ, ವಿತರಿಸಲು 10 ಕೋಟಿಯನ್ನು ಜಿಲ್ಲೆಗಳಿಗೆ ಬಿಡುಗಡೆ ಮಾಡಿದೆ.
ಸ್ಥಳೀಯ ಖರೀದಿಯ ಮೂಲಕ 10 ಕೋಟಿ ರೂ. ವೆಚ್ಚದಲ್ಲಿ ಆಯಾ ಜಿಲ್ಲಾ ಮಟ್ಟದಲ್ಲಿ ಶುಚಿ ಕಾರ್ಯಕ್ರಮದಡಿಯಲ್ಲಿ 6 ರಿಂದ 10 ನೇ ತರಗತಿ ಮತ್ತು ದ್ವಿತೀಯ ಪಿಯುಸಿವರೆಗಿನ 19,64,507 ವಿದ್ಯಾರ್ಥಿನಿಯರಿಗೆ ಮೂರು ತಿಂಗಳ ಅವಧಿಗೆ ಅಗತ್ಯವಿರುವ ಸ್ಯಾನಿಟರಿ ಪ್ಯಾಡ್ ಖರೀದಿಸಿ ವಿತರಿಸುವಂತೆ ಆರೋಗ್ಯ ಇಲಾಖೆ ಅದೇಶದಲ್ಲಿ ತಿಳಿಸಿದೆ.
2025–26ರ ಸ್ವಚ್ಛ ಭಾರತ ಅಭಿಯಾನದಡಿಯಲ್ಲಿ ಶುಚಿ ಕಿಟ್ ಕಾರ್ಯಕ್ರಮದ ನಿಯಮಗಳ ಪ್ರಕಾರ, ಕರ್ನಾಟಕ ರಾಜ್ಯ ವೈದ್ಯಕೀಯ ಸರಬರಾಜು ನಿಗಮ ಲಿಮಿಟೆಡ್ ಮೂಲಕ ಸರ್ಕಾರಿ ಮತ್ತು ಅನುದಾನಿತ ಶಾಲೆಗಳು, ಕಾಲೇಜುಗಳು ಮತ್ತು ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿನ ಸರ್ಕಾರಿ ಹಾಸ್ಟೆಲ್‌ಗಳಲ್ಲಿ ವಾಸಿಸುವ ಎಲ್ಲಾ ವಿದ್ಯಾರ್ಥಿನಿಯರಿಗೆ 71.83 ಕೋಟಿ ರೂ. ವೆಚ್ಚದಲ್ಲಿ 2,35,74,084 ಸ್ಯಾನಿಟರಿ ನ್ಯಾಪ್‌ಕಿನ್‌ಗಳನ್ನು ವಿತರಿಸಬೇಕಾಗಿತ್ತು. ಆದಾಗ್ಯೂ, ಆಗಸ್ಟ್ 2025 ರಿಂದ ದಾಸ್ತಾನಿನಲ್ಲಿ ಕೊರತೆ ಹಿನ್ನೆಲೆಯಲ್ಲಿ ಕೆಲ ಶಾಲೆಗಳಲ್ಲಿ ವಿತರಣೆಯಲ್ಲಿ ತಡವಾಯಿತು. ಇದೀಗ ಸರ್ಕಾರ ಹೊಸ ಟೆಂಡರ್ ಕರೆಯಲು ಮುಂದಾಗಿದೆ.
ವಿಜಯನಗರದ ಸರ್ಕಾರಿ ಪ್ರೌಢಶಾಲಾ ಶಿಕ್ಷಕ ಬಿ ಕೊಟ್ರೇಶ್ ಅವರು ಮಾತನಾಡಿ, “ಅಂತಿಮವಾಗಿ, ಆರೋಗ್ಯ ಇಲಾಖೆ ಸ್ಯಾನಿಟರಿ ನ್ಯಾಪ್‌ಕಿನ್‌ಗಳನ್ನು ವಿತರಿಸಲು ನಿರ್ಧರಿಸಿದೆ. ಇದು ವಿದ್ಯಾರ್ಥಿನಿಯ ಗೌರವದ ವಿಷಯವಾಗಿದೆ. ಸರ್ಕಾರವು ಮಹಿಳೆಯರಿಗೆ ಮೀಸಲಾತಿ, ಮುಟ್ಟಿನ ರಜೆ ಮತ್ತು ಪೋಷಕರ ಆಸ್ತಿಯಲ್ಲಿ ಪಾಲು ನೀಡಲು ನಿರ್ಧರಿಸಿದಂತೆ, ವಿದ್ಯಾರ್ಥಿಗಳಿಗೆ ಸ್ಯಾನಿಟರಿ ನ್ಯಾಪ್‌ಕಿನ್‌ಗಳನ್ನು ಒದಗಿಸುವುದು ಕೂಡ ಸರ್ಕಾರದ ಆದ್ಯತೆಯಾಗಿರಬೇಕು ಎಂದು ಹೇಳಿದ್ದಾರೆ.


