ಬೆಂಗಳೂರಿನ ಭವಿಷ್ಯಕ್ಕಾಗಿ ಟನಲ್ ರಸ್ತೆ, ಡಬಲ್ ಡೆಕ್ಕರ್, ಮೇಲ್ಸೇತುವೆ ಯೋಜನೆ- DCM ಡಿಕೆ ಶಿವಕುಮಾರ್

ದೇವರು ವರ ಹಾಗೂ ಶಾಪ ನೀಡವುದಿಲ್ಲ. ಕೇವಲ ಅವಕಾಶ ಮಾತ್ರ ನೀಡುತ್ತಾನೆ. ನಮಗೆ ಸಿಕ್ಕ ಅವಕಾಶದಲ್ಲಿ ನಾವು ಏನು ಮಾಡುತ್ತೇವೆ ಎಂಬುದು ಬಹಳ ಮುಖ್ಯ ಎಂದು ಡಿಕೆ ಶಿವಕುಮಾರ್ ಹೇಳಿದರು.
DK Shivakumar
ಡಿಕೆ ಶಿವಕುಮಾರ್
Updated on

ಬೆಂಗಳೂರು: ಬೆಂಗಳೂರು ಭವಿಷ್ಯದ ನಗರವಾಗಿ ರೂಪುಗೊಳ್ಳುತ್ತಿದ್ದು, ಇದಕ್ಕಾಗಿ ನಮ್ಮ ಸರ್ಕಾರ ಟನಲ್ ರಸ್ತೆ, ಮೇಲ್ಸೇತುವೆ, ಡಬಲ್ ಡೆಕ್ಕರ್ ಸೇರಿದಂತೆ ಅನೇಕ ಯೋಜನೆಗಳನ್ನು ಹಮ್ಮಿಕೊಂಡಿದೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಿಳಿಸಿದರು.

ಬೆಂಗಳೂರಿನ ಬಾಲ್ಡ್ ವಿನ್ ಶಾಲೆಯಲ್ಲಿ ಶನಿವಾರ ಏರ್ಪಡಿಸಿದ್ದ ಯುನೈಟೆಡ್ ಕ್ರಿಸ್ಮಸ್ ಆಚರಣೆಯಲ್ಲಿ ಪಾಲ್ಗೊಂಡು ಮಾತನಾಡಿದ ಡಿಕೆ ಶಿವಕುಮಾರ್, ಬೆಂಗಳೂರಿನಲ್ಲಿ 25 ಲಕ್ಷ ಐಟಿ ವೃತ್ತಿಪರರು ಇದ್ದಾರೆ. 2 ಲಕ್ಷ ವಿದೇಶಿ ಪಾಸ್ ಪೋರ್ಟ್ ಹೊಂದಿರುವವರು ಇಲ್ಲಿ ಕೆಲಸ ಮಾಡುತ್ತಿದ್ದಾರೆ. 20 ವರ್ಷಗಳ ಹಿಂದೆ ಬೆಂಗಳೂರಿನ ಜನಸಂಖ್ಯೆ 70 ಲಕ್ಷ ಇತ್ತು, ಈಗ ಅದು 1.40 ಕೋಟಿಗೆ ಏರಿಕೆಯಾಗಿದೆ. 1.30 ಕೋಟಿ ವಾಹನಗಳಿವೆ. ಆದರೆ ರಸ್ತೆ ಮಾತ್ರ ಆಗ ಇದ್ದಷ್ಟೇ ಇದೆ. ಹೀಗಾಗಿ ನಾನು ಟನಲ್ ಹಾಗೂ ಮೇಲ್ಸೇತುವೆ ಮಾಡಲು ಹೊರಟಿದ್ದೇನೆ, ಕೆಲವರು ವಿರೋಧ ಮಾಡುತ್ತಿದ್ದಾರೆ. ನಾನು ಯಾವುದಕ್ಕೂ ತಲೆ ಕೆಡಿಸಿಕೊಳ್ಳುವುದಿಲ್ಲ. ನಾನು ನನಗಾಗಿ ಮಾಡುತ್ತಿಲ್ಲ. ಜನರಿಗಾಗಿ ಮಾಡುತ್ತಿದ್ದೇನೆ ಎಂದರು.

ಬೆಂಗಳೂರು ಭವಿಷ್ಯದ ನಗರಿ. ಹೀಗಾಗಿ ಇಡೀ ವಿಶ್ವ ಬೆಂಗಳೂರಿನತ್ತ ನೋಡುತ್ತಿದೆ. ನಾನು 2004ರಲ್ಲಿ ನಗರಾಭಿವೃದ್ಧಿ ಸಚಿವನಾಗಿದ್ದಾಗ ಅಮೆರಿಕದ ರಾಯಭಾರಿ ಬಂದು ನನ್ನನ್ನು ಭೇಟಿ ಮಾಡಿದ್ದರು. ಆಗ ಅವಳಿ ಕಟ್ಟಡ ಸ್ಫೋಟ ನಡೆದಿತ್ತು. ಆಗ ಅವರು ಭವಿಷ್ಯದಲ್ಲಿ ಬೆಂಗಳೂರಿಗೆ ನ್ಯೂಯಾರ್ಕ್ ನಗರಕ್ಕಿಂತ ಹೆಚ್ಚು ಆದ್ಯತೆ ಸಿಗುತ್ತದೆ. ನಮ್ಮ ಸಮೀಕ್ಷೆಯಲ್ಲಿ ಬೆಂಗಳೂರಿನ ಶಿಕ್ಷಣ, ಸಂಸ್ಕೃತಿ, ಶಿಕ್ಷಣ, ಪ್ರತಿಭೆಗಳು ಬೇರೆಲ್ಲೂ ಇಲ್ಲ ಎಂದು ಹೇಳಿದರು. ಇಲ್ಲಿರುವ ಮಾನವ ಸಂಪನ್ಮೂಲ ಬೇರೆ ಎಲ್ಲೂ ಇಲ್ಲ ಎಂದು ಹೇಳಿದ್ದರು ಎಂದರು ತಿಳಿಸಿದರು.

ಎಐ ಯುಗದಲ್ಲಿ ಮಕ್ಕಳನ್ನು ಸರಿಯಾಗಿ ಬೆಳೆಸುವ ಜವಾಬ್ದಾರಿ ಶಿಕ್ಷಕರ ಮೇಲಿದೆ: ಧರ್ಮ ಯಾವುದಾದರೂ ತತ್ವ ಒಂದೇ, ನಾಮ ನೂರಾದರೂ ದೈವವೊಂದೇ, ಪೂಜೆ ಯಾವುದಾದರೂಭಕ್ತಿಯೊಂದೆ, ಕರ್ಮ ಹಲವಾದರೂ ನಿಷ್ಠೆಯೊಂದೇ, ದೇವನೊಬ್ಬ ನಾಮ ಹಲವು. ಎಲ್ಲಾ ಧರ್ಮಗಳು ಮಾನವೀಯತೆಯನ್ನೇ ಪ್ರತಿಪಾದಿಸುತ್ತವೆ. ದೇವರು ವರ ಹಾಗೂ ಶಾಪ ನೀಡವುದಿಲ್ಲ. ಕೇವಲ ಅವಕಾಶ ಮಾತ್ರ ನೀಡುತ್ತಾನೆ. ನಮಗೆ ಸಿಕ್ಕ ಅವಕಾಶದಲ್ಲಿ ನಾವು ಏನು ಮಾಡುತ್ತೇವೆ ಎಂಬುದು ಬಹಳ ಮುಖ್ಯ. ಮಕ್ಕಳು ಅನೇಕ ಕನಸು ಕಾಣುತ್ತಾರೆ. ನಾವು ಯಶಸ್ವಿಯಾಗಬೇಕಾದರೆ, ಕನಸು ಕಾಣಬೇಕು, ಕನಸು ಈಡೇರಿಸಲು ಬದ್ಧರಾಗಿರಬೇಕು. ನಾವು ಈಗ ಹೊಸ ಯುಗದಲ್ಲಿದ್ದೇವೆ. ಎಐ ಯುಗದಲ್ಲಿದ್ದೇವೆ. ಇದಕ್ಕೆ ತಕ್ಕಂತೆ ನಾವು ಸಿದ್ಧವಾಗಬೇಕು ಎಂದು ಸಲಹೆ ನೀಡಿದರು.

ನಾನು 12 ವರ್ಷ ವಯಸ್ಸಿನಲ್ಲಿ ಶಾಲಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದೆ. ಆಗಲೇ ನಾನು ರಾಜಕಾರಣಿಯಾಗಬೇಕು ಎಂದು ನಿರ್ಧರಿಸಿದ್ದೆ. ನಂತರ ಎಸ್ ಜೆಆರ್ ಸಿ ಕಾಲೇಜಿನಲ್ಲಿ ಓದುವಾಗ ದೇವೇಗೌಡರ ವಿರುದ್ಧ ಮೊದಲ ಬಾರಿಗೆ ಸ್ಪರ್ಧಿಸಿದೆ. ಅಲ್ಲಿಂದ ಇಲ್ಲಿಯವರೆಗೆ ಬಂದಿದ್ದೇನೆ. ಕಳೆದ 8 ಚುನಾವಣೆಗಳಿಂದ ನಾನು ಶಾಸಕನಾಗಿ ಆಯ್ಕೆಯಾಗಿದ್ದೇನೆ. ನಾನು ಹುಟ್ಟತಾ ಕೃಷಿಕ, ವೃತ್ತಿಯಲ್ಲಿ ವ್ಯಾಪಾರಸ್ಥ, ಆಯ್ಕೆಯಲ್ಲಿ ಶಿಕ್ಷಣತಜ್ಞ, ಆಸಕ್ತಿಯಲ್ಲಿ ನಾನು ರಾಜಕಾರಣಿ. ನಾನು ನನ್ನ 46ನೇ ವಯಸ್ಸಿನಲ್ಲಿ ಪದವಿ ಪಡೆದೆ. ನನ್ನ ತಂದೆ ನಾನು ಇಂಜಿನಿಯರ್ ಆಗಬೇಕು ಎಂದು ಬಯಸಿದರು, ನಾನು ಇಜಿನಿಯರ್ ಆಗಲಿಲ್ಲ. ಇಂಜಿನಿಯರಿಂಗ್ ಕಾಲೇಜು ಆರಂಭಿಸಿದೆ ಎಂದು ತಿಳಿಸಿದರು.

DK Shivakumar
ನೀವು ನಮ್ಮ ಪ್ರತಿನಿಧಿ ಹೊರತು ಯಜಮಾನನಲ್ಲ: ಡಿಕೆ ಶಿವಕುಮಾರ್ ಧಮ್ಕಿಗೆ ಮೋಹನ್‌ದಾಸ್ ಪೈ ಆಕ್ರೋಶ!

ಸರ್ಕಾರಕ್ಕೆ ಸಂಪನ್ಮೂಲ ಬಂದಂತೆ ಜನರಿಗೆ ಹಣ ನೀಡುತ್ತದೆ. ಇದರಲ್ಲಿ ಹಗರಣವಿಲ್ಲ: ಸರ್ಕಾರದ ಮತ್ತೊಂದು ಹಗರಣ ಬಯಲಿಗೆ ಎಳೆಯುತ್ತೇವೆ ಎಂಬ ಮಹೇಶ್ ಟೆಂಗಿನಕಾಯಿ ಅವರ ಹೇಳಿಕೆ ಬಗ್ಗೆ ಕೇಳಿದಾಗ, ಯಾವ ಹಗರಣ ಬೇಕಾದರೂ ತರಲಿ. ಸರ್ಕಾರಕ್ಕೆ ತೆರಿಗೆ ರೂಪದಲ್ಲಿ ಹಣ ಬಂದಂತೆ ನಾವು ಫಲಾನುಭವಿಗಳಿಗೆ ನೀಡುತ್ತೇವೆ. ಇದು ಹಗರಣವೇ? ಕೇಂದ್ರ ಸರ್ಕಾರ ನಮಗೆ ಒಂದೇ ಬಾರಿಗೆ ಅನುದಾನ ನೀಡುತ್ತದೆಯೇ? ಸಂಸ್ಥೆಗಳಲ್ಲಿ ಸಿಬ್ಬಂದಿಗೆ ವೇತನ ನೀಡುವಾಗಲೂ ಕೆಲವೊಮ್ಮೆ ತಡವಾಗುತ್ತದೆ. ನಮ್ಮ ಸರ್ಕಾರ 24-25 ತಿಂಗಳಿಂದ ಜನರಿಗೆ ಹಣ ನೀಡುತ್ತಲೇ ಬಂದಿದ್ದೇವೆ. ಬೇರೆ ರಾಜ್ಯಗಳಲ್ಲಿ ಬಿಜೆಪಿ ಸರ್ಕಾರ ತಾವು ಘೋಷಿಸಿದಂತೆ ಇನ್ನು ಹಣ ಕೊಡಲು ಆರಂಭಿಸಿಯೇ ಇಲ್ಲ. ಇಲ್ಲಿ ಯಾವುದೇ ಹಗರಣಗಳಿಲ್ಲ. ಯಾರಾದರೂ ಹಣ ತಿಂದಿದ್ದರೆ ಹಗರಣ ಎನ್ನಬಹುದು ಎಂದು ತಿಳಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com