

ಬೆಂಗಳೂರು: ರಾಜಧಾನಿ ಬೆಂಗಳೂರಿನ ಹೊರವಲಯದಲ್ಲಿರುವ ಜನಪ್ರಿಯ ಆಹಾರ ಮಳಿಗೆಯಲ್ಲಿ ಬಿರಿಯಾನಿ ಸೇವಿಸಿ ಹಿಂತಿರುಗುತ್ತಿದ್ದ ನಾಲ್ವರು ಎಂಜಿನಿಯರಿಂಗ್ ವಿದ್ಯಾರ್ಥಿಗಳನ್ನು ಅಪಹರಿಸಿ, ಅವರಿಂದ 1.5 ಲಕ್ಷ ರೂ.ಗಳನ್ನು ದೋಚಲಾಗಿದೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ.
ಡಿಸೆಂಬರ್ 21 ರಂದು ಪ್ರವಾಸ ಮುಗಿಸಿ, ಹೊಸಕೋಟೆಯ ಹೋಟೆಲ್ ನಲ್ಲಿ ಬೆಳಗಿನ ಜಾವ ಬಿರಿಯಾನಿ ಸೇವಿಸಿ, ಬೈಕಿನಲ್ಲಿ ವಿದ್ಯಾರ್ಥಿಗಳು ಹಿಂತಿರುಗುತ್ತಿದ್ದಾಗ ಈ ಘಟನೆ ನಡೆದಿದೆ ಎಂದು ಅವರು ಹೇಳಿದ್ದಾರೆ.
ಆರೋಪಿಗಳಲ್ಲಿ ಒಬ್ಬನನ್ನು ಬಂಧಿಸಲಾಗಿದ್ದು, ಉಳಿದ ಆರೋಪಿಗಳನ್ನು ಬಂಧಿಸುವ ಪ್ರಯತ್ನಗಳು ನಡೆಯುತ್ತಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸರ ಪ್ರಕಾರ, ಯುವಕರು ಬಾಗಲೂರಿನ ಖಾಸಗಿ ಕಾಲೇಜಿನ ವಿದ್ಯಾರ್ಥಿಗಳಾಗಿದ್ದು, ಹೋಟೆಲ್ ನಿಂದ ಹಿಂತಿರುಗುತ್ತಿದ್ದಾಗ, ಟೋಲ್ ಪ್ಲಾಜಾ ಬಳಿ ಪುರುಷರ ಗುಂಪೊಂದು ಅವರನ್ನು ತಡೆದು ಥಳಿಸಿ ಮೊಬೈಲ್ ಫೋನ್ ಮತ್ತು ದ್ವಿಚಕ್ರ ವಾಹನಗಳನ್ನು ಕಿತ್ತುಕೊಂಡಿದೆ ಎಂದು ಆರೋಪಿಸಲಾಗಿದೆ.
ಬಳಿಕ ದುಷ್ಕರ್ಮಿಗಳ ತಂಡವು ವಿದ್ಯಾರ್ಥಿಗಳನ್ನು ಮೇಡಹಳ್ಳಿ ಬಳಿಯ ಶೆಡ್‌ಗೆ ಕರೆದೊಯ್ದು, ದರೋಡೆ ಮಾಡಿದೆ. ಹಲ್ಲೆಕೋರರು ವಿದ್ಯಾರ್ಥಿಗಳ ಬ್ಯಾಂಕ್ ಖಾತೆಗಳಿಂದ 1.10 ಲಕ್ಷ ರೂ.ಗಳನ್ನು ವರ್ಗಾಯಿಸಿಕೊಂಡಿದ್ದಾರೆ ಮತ್ತು ಅವರ ಬಳಿ 40,000 ರೂ. ನಗದು ದೋಚಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ವಿದ್ಯಾರ್ಥಿಗಳಲ್ಲಿ ಒಬ್ಬರು ನೀಡಿದ ದೂರಿನ ಆಧಾರದ ಮೇಲೆ, ಅಪಹರಣ ಮತ್ತು ದರೋಡೆಗೆ ಸಂಬಂಧಿಸಿದ ವಿವಿಧ ಸೆಕ್ಷನ್ ಗಳಡಿಯಲ್ಲಿ ಆವಲಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
Advertisement