

ಕೊಪ್ಪಳ: ಪೂಜಾ ವಿಚಾರಕ್ಕೆ ಸ್ವಾಮೀಜಿಗಳ ನಡುವೆ ಗಲಾಟೆಯಾಗಿರುವ ಘಟನೆಯೊಂದು ಗಂಗಾವತಿ ತಾಲೂಕಿನ ಅಂಜನಾದ್ರಿ ದೇವಸ್ಥಾನದಲ್ಲಿ ಬುಧವಾರ ನಡೆದಿದೆ.
ಗೋವಿಂದನಾಂದ ಸರಸ್ವತಿ ಸ್ವಾಮೀಜಿ, ದೇವಸ್ಥಾನದ ಆರ್ಚಕರಾಗಿರುವ ವಿದ್ಯಾದಾಸಬಾಬಾ ವಿರುದ್ಧ ಅವಾಚ್ಯ ಶಬ್ದಗಳನ್ನು ಬಳಸಿ ಗಲಾಟೆ ನಡೆಸಿದ್ದಾರೆಂದು ಹೇಳಲಾಗುತ್ತಿದೆ.
ಅಂಜನಾದ್ರಿ ದೇವಸ್ಥಾನದ ಆವರಣದ ಒಳಭಾಗದಲ್ಲೇ, ಆಂಜನೇಯ ಸ್ವಾಮಿಯ ಗರ್ಭಗುಡಿಯ ಸಮೀಪದಲ್ಲಿ ಗಲಾಟೆ ನಡೆದಿದ್ದು, ಈ ವೇಳೆ ಪೂಜಾ ಕಾರ್ಯಕ್ಕೆ ಅಡ್ಡಿಪಡಿಸಲಾಗಿದೆ ಎಂದು ವಿದ್ಯಾದಾಸಬಾಬಾ ಆರೋಪಿಸಿದ್ದಾರೆ. ಹಂಪಿಯ ಗೋವಿಂದನಾಂದ ಸರಸ್ವತಿ ಸ್ವಾಮೀಜಿ ಹಲ್ಲೆ ಮಾಡಿದ್ದಾರೆಂಬ ಆರೋಪವೂ ಕೇಳಿ ಬಂದಿದೆ.
ದೇವಾಲಯದ ಅರ್ಚಕ ವಿದ್ಯಾದಾಸ ಬಾಬಾ ಅವರು ಪೂಜೆ ಸಲ್ಲಿಸುತ್ತಿದ್ದ ವೇಳೆ ಸ್ಥಳಕ್ಕೆ ಬಂದ ಗೋವಿಂದಾನಂದ ಸರಸ್ವತಿ ಸ್ವಾಮೀಜಿಗಳು, ಅಂಜನಾದ್ರಿ ಬೆಟ್ಟದ ದೇವಾಲಯದಲ್ಲಿ ಹನುಮನನ್ನು ಪೂಜಿಸಲು ನನಗೆ ಮಾತ್ರ ಅಧಿಕಾರವಿದೆ ಎಂದು ಹೇಳಿದ್ದಾರೆ. ಇದು ಇಬ್ಬರ ನಡುವೆ ಮಾತಿನ ಚಕಮಕಿಗೆ ಕಾರಣವಾಗಿದೆ ಎಂದು ಹೇಳಲಾಗುತ್ತಿದೆ.
ಘಟನೆ ವೇಳೆ ಇಬ್ಬರೂ ಸ್ವಾಮೀಜಿಗಳು ಕೈ ಕೈ ಮಿಲಾಯಿಸುವ ಹಂತಕ್ಕೆ ಹೋಗಿದ್ದು, ಈ ವೇಳೆ ಪೊಲೀಸರು ಮಧ್ಯೆ ಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದ್ದಾರೆ.
ಈ ನಡುವೆ ಅರ್ಚಕ ವಿದ್ಯಾದಾಸ ಬಾಬಾ ಅವರು ಗೋವಿಂದಾನಂದ ಸ್ವಾಮೀಜಿ ವಿರುದ್ಧ ಆನ್‌ಲೈನ್ ಮೂಲಕ ದೂರು ಸಲ್ಲಿಸಿದ್ದಾರೆ ಎಂದು ತಿಳಿದುಬಂದಿದೆ.
ಗೋವಿಂದಾನಂದ ಸರಸ್ವತಿ ವಿರುದ್ಧ ಸೆಕ್ಷನ್ 319(2), 196(2), 336(3), 338, 352, 353 (3) ಬಿಎನ್‌ಎಸ್ ಕಾಯ್ದೆ 2023 ರ ಅಡಿಯಲ್ಲಿ ಪ್ರಕರಣ ದಾಖಲಿಸಬೇಕು ಮತ್ತು ಕಾನೂನಿನ ಪ್ರಕಾರ ಅವರ ವಿರುದ್ಧ ತನಿಖೆ ಮತ್ತು ಮೊಕದ್ದಮೆ ಹೂಡಬೇಕು ಎಂದು ದೂರಿನಲ್ಲಿ ಆಗ್ರಹಿಸಿದ್ದಾರೆ.
Advertisement