

ಕಲಬುರಗಿ: ದೆವ್ವ ಬಿಡಿಸುವ ನೆಪದಲ್ಲಿ ಮಹಿಳೆಯೊಬ್ಬರಿಗೆ ಮಾರಣಾಂತಿಕವಾಗಿ ಹಲ್ಲೆ ಮಾಡಲಾಗಿದ್ದು, ಈ ವೇಳೆ ಮಹಿಳೆ ಸಾವನ್ನಪ್ಪಿದ್ದಾಳೆ ಎಂದು ತಿಳಿದುಬಂದಿದೆ.
ಕಲಬುರಗಿಯ ಆಳಂದದಲ್ಲಿ ಈ ಘಟನೆ ನಡೆದಿದ್ದು, ದೆವ್ವ ಹಿಡಿದಿದೆ ಅಂತ ಬೇವಿನ ಕಟ್ಟಿಗೆಯಿಂದ ಹಲ್ಲೆ ನಡೆಸಿದ ಪರಿಣಾಮ ಗಂಭೀರ ಗಾಯಗೊಂಡು ಮಹಿಳೆ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿದೆ. ಸಂತ್ರಸ್ಥ ಮಹಿಳೆಯನ್ನು ಆಳಂದ ಮೂಲದ ಮುಕ್ತಾಬಾಯಿ (26) ಎಂದು ಗುರುತಿಸಲಾಗಿದೆ.
ಮೂಲಗಳ ಪ್ರಕಾರ ಮುಕ್ತಾಬಾಯಿ ಕುಟುಂಬಸ್ಥರೇ ಆಕೆಗೆ ದೆವ್ವ ಹಿಡಿದಿದೆ ಎಂದು ಆರೋಪಿಸಿದ್ದರು. ಅದರಂತೆ ಗಂಡನ ಮನೆಯವರು, ಬೇವಿನ ಕಟ್ಟಿಗೆಯಿಂದ ಆಕೆ ಮೇಲೆ ಭೀಕರವಾಗಿ ಹಲ್ಲೆ ನಡೆಸಿದ ಪರಿಣಾಮ ಮುಕ್ತಾಬಾಯಿ (26) ಎಂಬವರು ಗಂಭೀರವಾಗಿ ಗಾಯಗೊಂಡಿದ್ದರು.
ಈ ವೇಳೆ ಅವರನ್ನು ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಜಿಮ್ಸ್ ಆಸ್ಪತ್ರೆಯಲ್ಲಿ ಮುಕ್ತಾಬಾಯಿ ಕೊನೆಯುಸಿರೆಳೆದಿದ್ದಾರೆ.
ಕುಟುಂಬಸ್ಥರು ಹೇಳುವಂತೆ ಆಳಂದ ಪಟ್ಟಣದ ವೆಂಕಟೇಶ್ವರ ನಗರದ ನಿವಾಸಿಯಾದ ಮುಕ್ತಾಬಾಯಿ ಅವರನ್ನು ಆರು ವರ್ಷಗಳ ಹಿಂದೆ ಮಹಾರಾಷ್ಟ್ರದ ಮುರುಮ್ ಗ್ರಾಮದ ಗಿಡ್ಡೆಪ್ಪ ಎಂಬಾತನಿಗೆ ವಿವಾಹ ಮಾಡಿಕೊಡಲಾಗಿತ್ತು. ಈ ದಂಪತಿಗೆ ಐದು ವರ್ಷದ ಮಗನಿದ್ದಾನೆ.
ಆದರೆ, ಕಳೆದ ಕೆಲವು ದಿನಗಳಿಂದ ಮುಕ್ತಾಬಾಯಿಗೆ ದೆವ್ವ ಹಿಡಿದಿದೆ ಎಂದು ಗಂಡನ ಮನೆಯವರು ಕಿರುಕುಳ ನೀಡುತ್ತಿದ್ದರು ಎನ್ನಲಾಗಿದೆ. ಮಗಳಿಗೆ ಯಾವುದೇ ದೆವ್ವ ಹಿಡಿದಿಲ್ಲ, ಆಕೆಯನ್ನು ಹೊಡೆಯಬೇಡಿ ಎಂದು ತಾಯಿ ತಿಪ್ಪವ್ವ ಎಷ್ಟೇ ಮನವಿ ಮಾಡಿದರೂ ಗಂಡನ ಮನೆಯವರು ಕೇಳಿರಲಿಲ್ಲ ಎಂದು ಆರೋಪಿಸಲಾಗಿದೆ.
ತೀವ್ರ ಹಲ್ಲೆ, ಆಸ್ಪತ್ರೆಗೆ ದಾಖಲು
ಶುಕ್ರವಾರ ಮುಕ್ತಾಬಾಯಿ ಮನೆಯಲ್ಲಿ ಕುಸಿದು ಬಿದ್ದಾಗ, ದೆವ್ವದ ಅಬ್ಬರ ಎಂದು ಭಾವಿಸಿದ ಸಂಬಂಧಿಕರು ಐದು ವರ್ಷದ ಮಗನ ಎದುರಲ್ಲೇ ಬೇವಿನ ಕಟ್ಟಿಗೆಗಳಿಂದ ಆಕೆಗೆ ಮನಬಂದಂತೆ ಹೊಡೆದಿದ್ದಾರೆ. ತಲೆ ಮತ್ತು ದೇಹದ ಭಾಗಗಳಿಗೆ ತೀವ್ರ ಪೆಟ್ಟು ಬಿದ್ದಿದ್ದರೂ, ಆಕೆಯನ್ನು ಆಸ್ಪತ್ರೆಗೆ ಸೇರಿಸುವ ಬದಲು ಗಾಣಗಾಪುರದ ಸಂಗಮ ನದಿಯಲ್ಲಿ ಸ್ನಾನ ಮಾಡಿಸಿ ದತ್ತನ ಸನ್ನಿಧಿಯಲ್ಲಿ ಪೂಜೆ ಮಾಡಿಸಿದ್ದಾರೆ.
ಅಲ್ಲಿಂದ ಗುರುಮಠಕಲ್ ಕಡೆಗೆ ಮತ್ತೊಂದು ಪೂಜೆಗಾಗಿ ಕರೆದೊಯ್ಯುವಾಗ ಮುಕ್ತಾಬಾಯಿ ತೀವ್ರ ಅಸ್ವಸ್ಥಗೊಂಡಿದ್ದಾರೆ. ಕೂಡಲೇ ಕಲಬುರಗಿಯ ಜಿಮ್ಸ್ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಕಲಬುರಗಿಯ ಬ್ರಹ್ಮಪುರ ಪೊಲೀಸ್ ಠಾಣೆಯಲ್ಲಿ ‘ಝೀರೋ ಎಫ್‌ಐಆರ್’ ದಾಖಲಿಸಿಕೊಳ್ಳಲಾಗಿದ್ದು, ಮುಂದಿನ ಕಾನೂನು ಕ್ರಮ ಹಾಗೂ ತನಿಖೆಗಾಗಿ ಪ್ರಕರಣವನ್ನು ಮಹಾರಾಷ್ಟ್ರದ ಮುರುಮ್ ಪೊಲೀಸ್ ಠಾಣೆಗೆ ವರ್ಗಾಯಿಸಲಾಗಿದೆ. ಮೃತಳ ಶವವನ್ನು ಮರಣೋತ್ತರ ಪರೀಕ್ಷೆ ನಡೆಸಿ ವಾರಸುದಾರರಿಗೆ ಹಸ್ತಾಂತರಿಸಲಾಗಿದೆ.
Advertisement