News headlines 29-12-2025 | ಮಹಾರಾಷ್ಟ್ರ- ಬೆಂಗಳೂರು ಪೊಲೀಸ್ ಕಾರ್ಯಾಚರಣೆ: ಬೆಂಗಳೂರಿನಲ್ಲಿ 3 ಡ್ರಗ್ಸ್ ಫ್ಯಾಕ್ಟರಿ ಪತ್ತೆ; ಹೊಸ ವರ್ಷಾಚರಣೆ: ನಗರದಲ್ಲಿ 20 ಸಾವಿರ ಪೊಲೀಸರ ನಿಯೋಜನೆ, 50 ಫ್ಲೈಓವರ್‌ ಬಂದ್!

News headlines 29-12-2025 | ಮಹಾರಾಷ್ಟ್ರ- ಬೆಂಗಳೂರು ಪೊಲೀಸ್ ಕಾರ್ಯಾಚರಣೆ: ಬೆಂಗಳೂರಿನಲ್ಲಿ 3 ಡ್ರಗ್ಸ್ ಫ್ಯಾಕ್ಟರಿ ಪತ್ತೆ; ಹೊಸ ವರ್ಷಾಚರಣೆ: ನಗರದಲ್ಲಿ 20 ಸಾವಿರ ಪೊಲೀಸರ ನಿಯೋಜನೆ, 50 ಫ್ಲೈಓವರ್‌ ಬಂದ್!

1. ಮಹಾರಾಷ್ಟ್ರ- ಬೆಂಗಳೂರು ಪೊಲೀಸರ ಜಂಟಿ ಕಾರ್ಯಾಚರಣೆ: ನಗರದಲ್ಲಿ 3 ಡ್ರಗ್ಸ್ ಫ್ಯಾಕ್ಟರಿ ಪತ್ತೆ

ಮಹಾರಾಷ್ಟ್ರ ಮಾದಕವಸ್ತು ವಿರೋಧಿ ಕಾರ್ಯಪಡೆ, ಬೆಂಗಳೂರು ನಗರ ಪೊಲೀಸರು ಮತ್ತು ಮಾದಕವಸ್ತು ನಿಯಂತ್ರಣ ಬ್ಯೂರೋ ಜಂಟಿಯಾಗಿ ನಡೆಸಿದ ಕಾರ್ಯಾಚರಣೆಯಲ್ಲಿ ರಾಜಧಾನಿ ಬೆಂಗಳೂರಿನಲ್ಲಿ ಮೂರು ಡ್ರಗ್ಸ್ ಫ್ಯಾಕ್ಟರಿ ಪತ್ತೆಯಾಗಿದ್ದು, ಮೆಫೆಡ್ರೋನ್ ಮತ್ತು ಡ್ರಗ್ಸ್ ಸಂಬಂಧಿತ ವಸ್ತುಗಳ ಅಕ್ರಮ ತಯಾರಿಕೆ ಹಾಗೂ ಸಾಗಣೆ ಆರೋಪದ ಮೇಲೆ ನಾಲ್ವರನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಒಟ್ಟಾರೆ 1.2 ಕೋಟಿ ರೂ. ಮೌಲ್ಯದ 4.2 ಕೆಜಿ ಮೆಫೆಡ್ರೋನ್ ಡ್ರಗ್ ಮತ್ತು 17 ಕೆಜಿ ಕಚ್ಚಾ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಡಿಸೆಂಬರ್ 21 ರಂದು, ಸುಮಾರು 1.5 ಕೆಜಿ ಮೆಫೆಡ್ರೋನ್ ಹೊಂದಿದ್ದ ಆರೋಪದ ಮೇಲೆ ಅಬ್ದುಲ್ ಖಾದರ್ ನನ್ನು ಮುಂಬೈನಲ್ಲಿ ಮಹಾರಾಷ್ಟ್ರ ಎಎನ್‌ಟಿಎಫ್ ಅಧಿಕಾರಿಗಳು ಬಂಧಿಸಿದ್ದರು. ಈ ಬೆಳವಣಿಗೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬಿಜೆಪಿ, ಮಹಾರಾಷ್ಟ್ರ ಪೊಲೀಸರು ಕರ್ನಾಟಕಕ್ಕೆ ಬಂದು ಡ್ರಗ್ ಟ್ರಾಫಿಕಿಂಗ್ ಮಾಡುವವರನ್ನು ಪತ್ತೆ ಹೆಚ್ಚಿದ್ದು ನೋಡಿದರೆ ಡ್ರಗ್ ಮಾಫಿಯಾ ನಿಯಂತ್ರಣದಲ್ಲಿ ರಾಜ್ಯ ಸರ್ಕಾರ ಇದೆಯೇ ಎನ್ನುವ ಅನುಮಾನ ಮೂಡುತ್ತಿದೆ. ಈಗಲಾದರೂ ರಾಜ್ಯ ಸರ್ಕಾರ ಎಚ್ಚೆತ್ತುಕೊಳ್ಳದಿದ್ದರೆ ಉಡ್ತಾ ಪಂಜಾಬ್ ರೀತಿ ಉಡ್ತಾ ಕರ್ನಾಟಕ ಆಗಲಿದೆ ಎಂದು ಎಚ್ಚರಿಸಿದೆ.

2. ಕೋಗಿಲು ಅಕ್ರಮ ಕಟ್ಟಡಗಳ ಧ್ವಂಸ: KSHRC ತಂಡ ಭೇಟಿ

ಕೋಗಿಲು ಸಮೀಪ ಅಕ್ರಮ ಕಟ್ಟಡಗಳ ನೆಲಸಮ ವಿಚಾರದಲ್ಲಿ ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮತ್ತು ಅಲ್ಲಿನ ಸಂಸದ ಕೆ.ಸಿ.ವೇಣುಗೋಪಾಲ್ ಮಧ್ಯಪ್ರವೇಶಿಸಿರುವುದನ್ನು ಬಿಜೆಪಿ ತೀವ್ರವಾಗಿ ಖಂಡಿಸಿದೆ. ಈ ಕುರಿತು ಮಾತನಾಡಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಅಕ್ರಮ ನಿವಾಸಿಗಳ ತೆರವುಗೊಳಿಸಿರುವ ಕ್ರಮ ಸಮರ್ಥಿಸಿಕೊಂಡಿದ್ದ ಡಿ.ಕೆ.ಶಿವಕುಮಾರ್, ಈಗ ಕೆ.ಸಿ.ವೇಣುಗೋಪಾಲ್ ರವರ ಹೇಳಿಕೆ ಬೆನ್ನಲ್ಲೇ ಊಸರವಳ್ಳಿ ಬಣ್ಣದ ಮಾತುಗಳನ್ನಾಡಿದ್ದಾರೆ. ಇದು ಕರ್ನಾಟಕದ ಸ್ವಾಭಿಮಾನದ ಘನತೆಯನ್ನು ಕುಗ್ಗಿಸಿದೆ ಎಂದು ಕಿಡಿದ್ದಾರೆ. ಈ ಮಧ್ಯೆ, "ಅನಧಿಕೃತ ಮನೆಗಳನ್ನು" ಕೆಡವಲಾದ ಸ್ಥಳಕ್ಕೆ ಸೋಮವಾರ ಕೆಎಸ್‌ಎಚ್‌ಆರ್‌ಸಿಯ ತಂಡ ಭೇಟಿ ನೀಡಿದ್ದು, ಪ್ರಾಥಮಿಕವಾಗಿ ನಿವಾಸಿಗಳಿಗೆ ಸರಿಯಾದ ಪರ್ಯಾಯ ವ್ಯವಸ್ಥೆಗಳನ್ನು ಮಾಡಲಾಗಿಲ್ಲ ಎಂದು ತೋರುತ್ತಿದೆ ಎಂದು ಹೇಳಿದೆ. ಕೋಗಿಲು ಬಡಾವಣೆಯಲ್ಲಿ ಅನಧಿಕೃತವಾಗಿ ನಿರ್ಮಿಸಿಕೊಂಡಿದ್ದ ಮನೆಗಳನ್ನು ಜಿಬಿಎ ತೆರವುಗೊಳಿಸಿದ ಜಾಗಕ್ಕೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸೋಮವಾರ ಭೇಟಿ ನೀಡಿ ಪರಿಶೀಲಿಸಿದ್ದು, ಇದು ಸ್ಥಳೀಯ ವಿಷಯ. ಆರೋಗ್ಯದ ಅಪಾಯಗಳಿಂದ ಜನರ ಹಿತಾಸಕ್ತಿಗಳನ್ನು ನಾವು ರಕ್ಷಿಸಬೇಕು. ಸರ್ಕಾರಿ ಆಸ್ತಿಯನ್ನು ಅಕ್ರಮವಾಗಿ ಆಕ್ರಮಿಸಿಕೊಂಡಿರುವವರು ನಮಗೆ ಬೇಕಿಲ್ಲ,. ಸರ್ಕಾರಿ ಆಸ್ತಿಯನ್ನು ರಕ್ಷಿಸುವುದು ನಮ್ಮ ಕರ್ತವ್ಯ, ಮತ್ತು ಅದನ್ನೇ ನಾವು ಮಾಡುತ್ತಿದ್ದೇವೆ ಎಂದು ಹೇಳಿದ್ದಾರೆ.

3. CCB ಕಾರ್ಯಾಚರಣೆ 2.50 ಕೋಟಿ ರೂ. ಮೌಲ್ಯದ ಡ್ರಗ್ಸ್ ವಶಕ್ಕೆ

ಹೊಸ ವರ್ಷಾಚರಣೆಗೂ ಮುನ್ನ, ಸಿಸಿಬಿ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಪ್ರತ್ಯೇಕ ಪ್ರಕರಣಗಳಲ್ಲಿ ಇಬ್ಬರು ವ್ಯಕ್ತಿಗಳನ್ನು ಬಂಧಿಸಿ ಅವರಿಂದ ಸುಮಾರು 2.50 ಕೋಟಿ ರೂ. ಮೌಲ್ಯದ ಡ್ರಗ್ಸ್ ಮತ್ತು ನಗದನ್ನು ವಶಪಡಿಸಿಕೊಂಡಿದ್ದಾರೆ. ಮೊದಲ ಪ್ರಕರಣದಲ್ಲಿ, ಕೇಂದ್ರ ಅಪರಾಧ ವಿಭಾಗದ ಮಾದಕ ದ್ರವ್ಯ ನಿಯಂತ್ರಣ ವಿಭಾಗವು ಸೋಲದೇವನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಾರ್ಯಾಚರಣೆ ನಡೆಸಿ ಮಾದಕ ದ್ರವ್ಯ ಮಾರಾಟದಲ್ಲಿ ಭಾಗಿಯಾಗಿದ್ದ ವಿದೇಶಿ ಪ್ರಜೆಯನ್ನು ಬಂಧಿಸಿದೆ. ಈತನಿಂದ 2 ಲಕ್ಷ ಹಣ, 1 ಕೆಜಿ 70 ಗ್ರಾಂ ಎಂಡಿಎಂಎ ಕ್ರಿಸ್ಟಲ್‌, 60 ಎಕ್ಸ್ ಟೆಸಿ ಪಿಲ್ಸ್ ಗಳು, 100 ಎಲ್‌ಎಸ್‌‍ಡಿ ಸ್ಟ್ರಿಪ್ಸ್ ಗಳು, 5 ಗ್ರಾಂ ಕೊಕೇನ್‌ ವಶಪಡಿಸಿಕೊಂಡಿದ್ದಾರೆ. ಈ ವಿದೇಶಿ ಪ್ರಜೆಯನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಿದಾಗ, ದೆಹಲಿ ಮತ್ತು ಮುಂಬೈನಲ್ಲಿ ವಾಸವಾಗಿರುವ ವಿದೇಶಿ ಪ್ರಜೆಗಳಿಂದ ಕಡಿಮೆ ಬೆಲೆಗೆ ಎಂಡಿಎಂಎ ಖರೀದಿಸಿ ಹೊಸ ವರ್ಷಾಚರಣೆ ಸಂದರ್ಭದಲ್ಲಿ ಪರಿಚಯಸ್ಥ ಗಿರಾಕಿಗಳಿಗೆ ಸರಬರಾಜು ಮಾಡಲು ತಯಾರಿ ನಡೆಸಿದ್ದುದು ಗೊತ್ತಾಗಿದೆ. ಈತನ ವಿರುದ್ಧ ಈ ಹಿಂದೆಯೂ ಸಹ ಸೋಲದೇವನಹಳ್ಳಿ ಪೊಲೀಸ್‌ ಠಾಣೆಯಲ್ಲಿ ಎನ್‌ಡಿಪಿಎಸ್‌ ಪ್ರಕರಣ ದಾಖಲಾಗಿತ್ತು.

4. ಹೊಸ ವರ್ಷಾಚರಣೆ: ನಗರದಲ್ಲಿ 20 ಸಾವಿರ ಪೊಲೀಸರ ನಿಯೋಜನೆ 50 ಫ್ಲೈಓವರ್‌ ಗಳು ಬಂದ್!

ಹೊಸ ವರ್ಷ ಸ್ವಾಗತಿಸಲು ಬೆಂಗಳೂರು ಸಜ್ಜಾಗುತ್ತಿದ್ದು, ಇದರ ಬೆನ್ನಲ್ಲೇ ಸಂಭ್ರಮಾಚರಣೆ ವೇಳೆ ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತಾ ಕ್ರಮವಾಗಿ ರಾಜ್ಯ ರಾಜಧಾನಿಯಲ್ಲಿ ಭದ್ರತೆಯನ್ನು ಹೆಚ್ಚಿಸಲಾಗುತ್ತಿದೆ. ಇದರಂತೆ ನಗರದಲ್ಲಿ 20 ಸಾವಿರ ಪೊಲೀಸರನ್ನು ನಿಯೋಜನೆ ಮಾಡಲಾಗುತ್ತಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ. ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಪೊಲೀಸ್ ಮಹಾನಿರ್ದೇಶಕರು ಮತ್ತು ಮಹಾನಿರೀಕ್ಷಕ ಎಂ.ಎ. ಸಲೀಂ ಮತ್ತು ಬೆಂಗಳೂರು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಅವರೊಂದಿಗೆ ಸಭೆ ನಡೆಸಿದ ನಂತರ ಸಚಿವರು ಮಾಹಿತಿ ನೀಡಿದರು. ಈ ಸಮಯದಲ್ಲಿ ಭಾರಿ ಜನಸಂದಣಿಯ ನಿರೀಕ್ಷೆಯಿರುವ ಎಂಜಿ ರಸ್ತೆ, ಕೋರಮಂಗಲ, ಇಂದಿರಾನಗರ, ವೈಟ್‌ಫೀಲ್ಡ್, ಎಲೆಕ್ಟ್ರಾನಿಕ್ ಸಿಟಿಯ ನೀಲಾದ್ರಿ ರಸ್ತೆ ಮತ್ತು ಪ್ರಮುಖ ಮಾಲ್‌ಗಳಂತಹ ಪ್ರದೇಶಗಳಲ್ಲಿ ಹೆಚ್ಚಿನ ಭದ್ರತೆಯನ್ನು ಒದಗಿಸಲಾಗುವುದು. ಡಿಸೆಂಬರ್ 31 ರಂದು ರಾತ್ರಿ 10 ಗಂಟೆಯ ನಂತರ 50 ಫ್ಲೈಓವರ್‌ಗಳನ್ನು ಬಂದ್ ಮಾಡಲಾಗುವುದು ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com