

ಬೆಂಗಳೂರು: ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಮಹಿಳಾ ಘಟಕದ ಪ್ರಧಾನ ಕಾರ್ಯದರ್ಶಿ ಹೆಸರಲ್ಲಿ ಮಹಿಳೆಯೊಬ್ಬರು, ಸರಕಾರಿ ಕೆಲಸ ಕೊಡಿಸುವುದಾಗಿ ಹತ್ತಕ್ಕೂ ಹೆಚ್ಚು ಜನರಿಂದ 5.30 ಕೋಟಿ ರೂ. ಪಡೆದು ವಂಚಿಸಿರುವ ಆರೋಪ ಕೇಳಿ ಬಂದಿದೆ.
ಈ ಕುರಿತು ವಿಜಯಪುರ ಮೂಲದ ಸಂಗಮೇಶ್ ರಾಚಯ್ಯ ವಸ್ತ್ರದ ಎಂಬುವವರು ಸಿಸಿಬಿಗೆ ದೂರು ನೀಡಿದ್ದಾರೆ. ದೂರಿನ ಅನ್ವಯ ಶಂಶಾದ್ ಬೇಗಂ, ಅವರ ತಂದೆ ಎಂ.ಎಂ ಮನ್ಸೂರ್ ಅಹಮದ್, ತಂಗಿ ಶಮೀ ಬೇಗಂ, ನಕಲಿ ಸರಕಾರಿ ಅಧಿಕಾರಿಗಳಾದ ರಮೇಶ್ ಹಾಗೂ ಶರತ್ ವಿರುದ್ದ ಎಫ್‌ಐಆರ್ ದಾಖಲಾಗಿದೆ.
ಶಂಶಾದ್ ಬೇಗಂ ಕಾಂಗ್ರೆಸ್ ಮಹಿಳಾ ಘಟಕದ ಪ್ರಧಾನ ಕಾರ್ಯದರ್ಶಿ ಎಂದು ಹೇಳಿಕೊಂಡಿದ್ದರು. ಮನ್ಸೂರ್ ಅಹಮದ್, ಕೆಪಿಸಿಸಿ ಜಂಟಿ ಕಾರ್ಯದರ್ಶಿ ಎಂದಿದ್ದರು. ನಮಗೆ ಸರಕಾರದ ಪ್ರಭಾವಿ ಸಚಿವರು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳ ಒಡನಾಟವಿದ್ದು, ಸರಕಾರಿ ಕೆಲಸ ಕೊಡಿಸುತ್ತೇವೆ ಎಂದು ಫೋಟೋಗಳನ್ನು ತೋರಿಸಿ ನಂಬಿಸಿದ್ದರು' ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (ಕೆಇಎ) ಬಳಿ ಕರೆದೊಯ್ದಿದ್ದ ಶಂಶಾದ್, ಅಲ್ಲಿ ಶರತ್ ಎಂಬುವವರನ್ನು ಪರಿಚಯಿಸಿದ್ದರು. ರಮೇಶ್ ಎಂಬುವವರನ್ನು ರೈಲ್ವೆ ಇಲಾಖೆ ಅಧಿಕಾರಿ ಎಂದು ತೋರಿಸಿದ್ದರು. ರೈಲ್ವೆ ಇಲಾಖೆಯಲ್ಲಿ ಉದ್ಯೋಗ ಸಿಕ್ಕಿದೆ ಎಂದು ನಕಲಿ ನೇಮಕಾತಿ ಪತ್ರಗಳನ್ನು ನೀಡಿದ್ದರು.
ಜತೆಗೆ, ಆರೋಪಿಗಳು ಕೋಲ್ಕತ್ತಾದಲ್ಲಿ ಮೂರು ತಿಂಗಳ ಕಾಲ ನಕಲಿ ತರಬೇತಿ ನಡೆಸಿದರು, ಮುಂಬಯಿಯಿನ ಛತ್ರಪತಿ ಶಿವಾಜಿ ಟರ್ಮಿನಲ್‌ನಲ್ಲಿಯೂ ನಕಲಿ ತರಬೇತಿ ಕೊಟ್ಟು ಆರೋಪಿಗಳು ಯಾಮಾರಿಸಿದ್ದರು ಎಂದು ಪೊಲೀಸರು ಹೇಳಿದ್ದಾರೆ.
ಜಲಸಂಪನ್ಮೂಲ, ಆರೋಗ್ಯ ಮತ್ತು ಸಮಾಜ ಕಲ್ಯಾಣ ಇಲಾಖೆಗಳಲ್ಲಿ ಉದ್ಯೋಗದ ಭರವಸೆ ನೀಡಿ ಆರೋಪಿಗಳು 56 ಲಕ್ಷ ರೂ.ಗಳನ್ನು ಸಂಗ್ರಹಿಸಿದರು. ನಕಲಿ ಪರೀಕ್ಷಾ ಹಾಲ್ ಟಿಕೆಟ್‌ಗಳನ್ನು ನೀಡಲಾಯಿತು ಮತ್ತು ನಿಯಮಿತ ಪರೀಕ್ಷೆಗಳ ನಂತರ "ವಿಶೇಷ ಪರೀಕ್ಷೆ" ನಡೆಸಲಾಗುವುದು ಎಂದು ಅಭ್ಯರ್ಥಿಗಳಿಗೆ ತಿಳಿಸಲಾಯಿತು. ನಂತರ, ಆರೋಪಿಗಳು ಅಭ್ಯರ್ಥಿಗಳನ್ನು ಸರ್ಕಾರಿ ಬ್ಯಾಕ್‌ಲಾಗ್ ಹುದ್ದೆಗಳ ಅಡಿಯಲ್ಲಿ ಸೇರಿಸಿಕೊಳ್ಳಲಾಗುವುದು ಎಂದು ಹೇಳಿಕೊಂಡರು.
ದೂರುದಾರ ಸಂಗಮೇಶ್ ತನ್ನ ಗ್ರಾಮದ ಹಾಗೂ ಪರಿಚಯಸ್ಥ ಯುವಕರಿಂದ ಹಣ ಸಂಗ್ರಹಿಸಿ ಆರೋಪಿಗಳಿಗೆ ನೀಡಿದ್ದಾರೆ. ಕೋಟ್ಯಂತರ ರೂ.ಗಳನ್ನು ಬ್ಯಾಂಕ್ ಖಾತೆಗೆ ವರ್ಗಾಯಿಸಿದ್ದು, ಅದಕ್ಕೆ ದಾಖಲೆ ನೀಡಿದ್ದಾರೆ. ಒಟ್ಟು 20ಕ್ಕೂ ಹೆಚ್ಚು ಉದ್ಯೋಗಾಂಕ್ಷಿ ಅಭ್ಯರ್ಥಿಗಳು ಹಣ ಕೊಟ್ಟು ಮೋಸ ಹೋಗಿದ್ದಾರೆ. ಆರೋಪಿಗಳು ತಲೆಮರೆಸಿಕೊಂಡಿದ್ದು, ತನಿಖೆ ಮುಂದುವರಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.
ಶಂಶಾದ್, ಆಕೆಯ ತಂದೆ ಅಹ್ಮದ್, ಆಕೆಯ ಸಹೋದರಿ ಶಮೀ ಬೇಗಂ ಮತ್ತು ಅವರ ಸಹಚರರು ಜುಲೈ ಮತ್ತು ಅಕ್ಟೋಬರ್ 2023 ರ ನಡುವೆ ನಗದು ಮತ್ತು ಆನ್‌ಲೈನ್ ವರ್ಗಾವಣೆಯ ಮೂಲಕ 5.30 ಕೋಟಿ ರೂ. ಸಂಗ್ರಹಿಸಿದ್ದಾರೆ ಎಂದು ಆರೋಪಿಸಲಾಗಿದೆ. ಐದು ಆರೋಪಿಗಳ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ.
Advertisement