
ಮಂಗಳೂರು: ನನ್ನ ಮೇಲೆ ವಾಮಾಚಾರ ಹಾಗೂ ವಶೀಕರಣ ಪ್ರಯೋಗ ನಡೆಯುತ್ತಿದೆ ಎಂದು ಮುಡಾ ಭೂ ಅಕ್ರಮ ಪ್ರಕರಣದ ದೂರುದಾರ ಸ್ನೇಹಮಯಿ ಕೃಷ್ಣ ಅವರು ಆರೋಪಿಸಿದ್ದು, ಈ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬೆಂಬಲಿಗರ ವಿರುದ್ಧ ದೂರು ದಾಖಲಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿರುವ ಸ್ನೇಹಮಯಿ ಕೃಷ್ಣ ಅವರು, ಮಂಗಳೂರಿನಲ್ಲಿ ಇತ್ತೀಚಿಗೆ ಬಂಧನಕ್ಕೊಳಗಾದ ಪ್ರಸಾದ್ ಅತ್ತಾವರ ಎಂಬುವರ ಫೋನ್ ಪರಿಶೀಲಿಸಿದಾಗ ನನ್ನ ಮತ್ತು ಗಂಗರಾಜು ಅವರ ಫೋಟೋ ಇಟ್ಟು, ಪ್ರಾಣಿಗಳ ಬಲಿಕೊಟ್ಟು ವಾಮಾಚಾರ ಮಾಡಿರುವುದು ಕಂಡುಬಂದಿದೆ. ಇದರ ಜೊತೆ ನನ್ನನ್ನು ಭೇಟಿ ಮಾಡಿ ಆಮಿಷವೊಡ್ಡಿದ್ದ ಹರ್ಷ ಮತ್ತು ಶ್ರೀನಿಧಿ ಅವರ ಹೆಸರನ್ನು ಚೀಟಿಯಲ್ಲಿ ಉಲ್ಲೇಖಿಸಲಾಗಿದೆ. ಇದನ್ನೆಲ್ಲ ನೋಡಿದಾಗ ಏನೋ ದೊಡ್ಡ ಸಂಚು ರೂಪಿಸಿದ್ದಾರೆ ಎಂದು ಮೇಲ್ನೋಟಕ್ಕೆ ಕಂಡುಬರುತ್ತಿದೆ ಎಂದು ಹೇಳಿದರು.
ತಮ್ಮ ಹಾಗೂ ಗಂಗರಾಜು ಅವರ ಫೋಟೋ ಇಟ್ಟು ಪ್ರಾಣಿ ಬಲಿ ಕೊಟ್ಟಿರುವ ವಿಚಾರವಾಗಿ ಮಾತನಾಡಿ, ಡಿ.9ರಂದು ಆ ಪೂಜೆಗಳು ನಡೆದಿವೆ, ಡಿ.13ರಂದು ಹರ್ಷ ಮತ್ತು ಶ್ರೀನಿಧಿ ಅವರು ನನ್ನನ್ನು ಭೇಟಿ ಮಾಡಿದ್ದರು. ಮುಡಾ ಪ್ರಕರಣದ ತನಿಖೆಯನ್ನು ಸಿಬಿಐ ವಹಿಸಬೇಕು ಎಂದು ಸಲ್ಲಿಸಿರುವ ಅರ್ಜಿಯನ್ನು ದಯವಿಟ್ಟು ವಾಪಸ್ ತೆಗೆದುಕೊಳ್ಳಿ. ನಿಮಗೆ ಎಷ್ಟು ದುಡ್ಡು ಬೇಕೋ ಅಷ್ಟು ಕೊಡುತ್ತೇವೆ ಎಂದು ಅವರು ಹೇಳಿದ್ದರು.
ಇದರ ಜೊತೆಗೆ ನನ್ನ ಮಗನ ಜೊತೆ ಮಾತನಾಡಿ, ನಮ್ಮ ಬಾಸ್ ಮಂಗಳೂರಿನಲ್ಲಿದ್ದಾರೆ ಎಂದು ಅತ್ತಾವರ ಅವರ ಫೋಟೋ ತೋರಿಸಿ, ಇರುವ ಹೇಗೆ ಹೇಳುತ್ತಾರೋ ಹಾಗೆ ನಾವು ಕೇಳುತ್ತೇವೆ. ಅವರೇ ನೀವು ಹೋಗಿ ಕೆಲಸ ಆಗುತ್ತದೆ ಎಂದು ಹೇಳಿ ಕಳುಹಿಸಿದ್ದರು ಎಂದು ಹೇಳಿದ್ದರು. ಇದರಲ್ಲಿ ಸಾಕಷ್ಟು ಅನುಮಾನಾಸ್ಪದ ಸಂಗತಿಗಳು ಕಂಡು ಬಂದಿರುವುದರಿಂದ ಈ ಬಗ್ಗೆ ಸಮಗ್ರ ತನಿಖೆ ನಡೆಸಿದರೆ ಇದರ ಹಿಂದೆ ಯಾರಿದ್ದಾರೆ, ಯಾವ ಕಾರಣಕ್ಕೆ ಈ ರೀತಿ ಮಾಡಿದ್ದಾರೆ ಎಂದು ಗೊತ್ತಾಗುತ್ತದೆ. ಘಟನೆ ಸಂಬಂಧ ಈಗಾಗಲೇ ಬರ್ಕೆ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಈ ವಿಚಾರ ಸಂಬಂಧ ನನ್ನ ಬಳಿ ಇರುವ ಸಾಕ್ಷಿಗಳನ್ನು ಪೊಲೀಸರಿಗೆ ನೀಡುತ್ತೇನೆಂದು ತಿಳಿಸಿದರು.
ಜ.23ರಂದು ಮಂಗಳೂರಿನ ಕಲರ್ಸ್ ಯೂನಿಸೆಕ್ಸ್ ಸಲೂನ್ ಮೇಲೆ ಅಕ್ರಮವಾಗಿ ದಾಳಿ ನಡೆಸಿದ್ದ ಪ್ರಕರಣಕ್ಕೆ ಸಂಬಂಧಿಸಿ ಮುಖ್ಯ ಆರೋಪಿ ಪ್ರಸಾದ್ ಅತ್ತಾವರ ಜೊತೆ ಒಟ್ಟು 13 ಮಂದಿ ಆರೋಪಿಗಳನ್ನು ಬಂಧಿಸಲಾಗಿತ್ತು.
ಈ ಪ್ರಕರಣದ ತನಿಖೆಯ ಭಾಗವಾಗಿ ಪ್ರಸಾದ್ ಅತ್ತಾವರ ಮೊಬೈಲ್ ಫೋನ್ ಪರಿಶೀಲಿಸಿದಾಗ, ಅನಂತ್ ಭಟ್ ಎಂಬ ವ್ಯಕ್ತಿಯ ಜೊತೆ ವಾಮಾಚಾರದ ಬಗ್ಗೆ ವಾಟ್ಸ್‌ಆ್ಯಪ್‌ನಲ್ಲಿ ಚರ್ಚಿಸಿರುವ ಅನೇಕ ಸಂದೇಶಗಳು, ಚಿತ್ರಗಳು, ವಿಡಿಯೊಗಳು ದೊರೆತಿದ್ದವು.
ಚಿತ್ರದಲ್ಲಿ ಹಾಗೂ ಸಂದೇಶದಲ್ಲಿ ಇರುವಂತೆ, ದೇವಸ್ಥಾನವೊಂದರಲ್ಲಿ ಕುರಿ ಬಲಿ ಕೊಡಲಾಗಿದೆ. ಆರ್‌ಟಿಐ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಹಾಗೂ ಗಂಗರಾಜು ಅವರ ಫೋಟೊ ಹಾಗೂ ಇವರಿಬ್ಬರ ಹೆಸರಿನ ಜೊತೆಗೆ ಪ್ರಸಾದ್ ಅತ್ತಾವರ, ಹರ್ಷ, ಶ್ರೀನಿಧಿ, ಸುಮ ಆಚಾರ್ಯ ಸೇರಿ ಒಟ್ಟು ಐವರ ಹೆಸರು ಬರೆದಿರುವ ಪೇಪರ್ ಅನ್ನು ದೇವಿಯ ಮೇಲೆ ಇಟ್ಟು ಅದಕ್ಕೆ ರಕ್ತದ ಅಭಿಷೇಕ ಮಾಡಲಾಗಿದೆ. ಅನಂತ್ ಭಟ್ ಮತ್ತು ಪ್ರಸಾದ್ ನಡುವೆ ವಿನಿಮಯ ಆಗಿರುವ ಸಂದೇಶದ ನೋಡಿದರೆ, ಸ್ನೇಹಮಯಿ ಕೃಷ್ಣ ಮತ್ತು ಗಂಗರಾಜು ಅವರಿಗೆ ಬಲ ಸಿಗಲೆಂದು ಈ ರೀತಿ ಮಾಡಿರಬಹುದು ಅನ್ನಿಸುತ್ತದೆ. ‘ಅನಂತ್ ಭಟ್ ಯಾರು, ಬಲಿ ನಡೆದಿರುವ ಸ್ಥಳ ಯಾವುದು ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್ ಅವರು ತಿಳಿಸಿದ್ದಾರೆ.
Advertisement