ಮುಂದಿನ 3 ವರ್ಷಗಳಲ್ಲಿ ಬೆಂಗಳೂರು ದಕ್ಷಿಣ, ಚನ್ನಪಟ್ಟಣ ಚಿತ್ರಣವೇ ಬದಲು: ಡಿಕೆ ಶಿವಕುಮಾರ್

ಚುನಾವಣೆ ವೇಳೆ ಇಲ್ಲಿ ನಾನೇ ಅಭ್ಯರ್ಥಿ ಎಂದಿದ್ದೆ. ಈಗಲೂ ನಾನೇ ಅಭ್ಯರ್ಥಿ. ಮುಂದಿನ ಒಂದು ವಾರದಲ್ಲಿ ಮತ್ತೆ ಕ್ಷೇತ್ರಕ್ಕೆ ಬಂದು ಕೊಟ್ಟ ಮಾತು ಈಡೇರಿಸುವ ಕೆಲಸದ ಬಗ್ಗೆ ಪರಿಶೀಲಿಸುತ್ತೇನೆ.
ಡಿಕೆ ಶಿವಕುಮಾರ್
ಡಿಕೆ ಶಿವಕುಮಾರ್
Updated on

ಬೆಂಗಳೂರು: ಮುಂದಿನ ಮೂರು ವರ್ಷಗಳಲ್ಲಿ ಬೆಂಗಳೂರು ದಕ್ಷಿಣ ಜಿಲ್ಲೆ (ರಾಮನಗರ) ಹಾಗೂ ಚನ್ನಪಟ್ಟಣದ ಚಿತ್ರಣವೇ ಬದಲಾಗಲಿದೆ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಹೇಳಿದ್ದಾರೆ.

ಚನ್ನಪಟ್ಟಣ ಉಪಚುನಾವಣೆಯಲ್ಲಿ ಭರ್ಜರಿ ಗೆಲುವಿಗೆ ಕಾರಣರಾದ ಪಕ್ಷದ ಕಾರ್ಯಕರ್ತರು ಮತ್ತು ನಾಯಕರಿಗೆ ಧನ್ಯವಾದ ಹೇಳಲು ಆಯೋಜಿಸಲಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಋಣ ತೀರಿಸುವ ಕಾರ್ಯಕ್ರಮ ಇದು. ನಿಮ್ಮೆಲ್ಲರ ಬೆಂಬಲಕ್ಕೆ ನಾವು ಧನ್ಯವಾದ ಹೇಳಲು ಬಯಸುತ್ತೇವೆ. ನಾಲ್ಕು ಶಾಸಕರನ್ನು ಆಯ್ಕೆ ಮಾಡುವ ಮೂಲಕ ಜಿಲ್ಲೆ ಕಾಂಗ್ರೆಸ್ ಪಕ್ಷವನ್ನು ಬಲಪಡಿಸಿದ್ದೀರಿ. ಇದೀಗ ಅಭಿವೃದ್ಧಿಯ ಮೂಲಕ ಚನ್ನಪಟ್ಟಣ ಮತ್ತು ಬೆಂಗಳೂರು ದಕ್ಷಿಣದ ಚಿತ್ರವನ್ನು ಬದಲಾಯಿಸುತ್ತೇವೆ ಎಂದು ಹೇಳಿದರು.

ಇದೇ ವೇಳೆ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ, ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಮತ್ತು ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರಿಗೆ ಕ್ಷೇತ್ರದ ಜನರು ಸೂಕ್ತ ಉತ್ತರ ನೀಡಿದ್ದಾರೆ ಎಂದು ಹೇಳಿದ ಶಿವಕುಮಾರ್, ನೀವು ಕೇವಲ ಚನ್ನಪಟ್ಟಣಕ್ಕೆ ಮಾತ್ರ ಉತ್ತರ ನೀಡಿಲ್ಲ, ಇಡೀ ದೇಶಕ್ಕೆ ಸಂದೇಶ ರವಾನಿಸಿದ್ದೀರಿಯ. ಚನ್ನಪಟ್ಟಣದ ಜನರನ್ನು ಸುಮ್ಮನೆ ಕೂರಿಸಲು ಸಾಧ್ಯವಿಲ್ಲ ಎಂದು ನೀವು ತೋರಿಸಿದ್ದೀರಿ ಎಂದು ತಿಳಿಸಿದರು.

ಚುನಾವಣೆ ವೇಳೆ ಇಲ್ಲಿ ನಾನೇ ಅಭ್ಯರ್ಥಿ ಎಂದಿದ್ದೆ. ಈಗಲೂ ನಾನೇ ಅಭ್ಯರ್ಥಿ. ಮುಂದಿನ ಒಂದು ವಾರದಲ್ಲಿ ಮತ್ತೆ ಕ್ಷೇತ್ರಕ್ಕೆ ಬಂದು ಕೊಟ್ಟ ಮಾತು ಈಡೇರಿಸುವ ಕೆಲಸದ ಬಗ್ಗೆ ಪರಿಶೀಲಿಸುತ್ತೇನೆ. ಚುನಾವಣೆ ಸಮಯದಲ್ಲಿ ನಾನು ಕುಮಾರಸ್ವಾಮಿ ಅವರಿಗೆ ನೀವು ಶಾಸಕರಾಗಿ, ಮುಖ್ಯಮಂತ್ರಿಯಾಗಿ ಯಾವ ಸಾಧನೆ ಮಾಡಿದ್ದೀರಿ ಎಂದು ಪ್ರಶ್ನಿಸಿದ್ದೆ. ಯೋಗೇಶ್ವರ್ ಅನೇಕ ದೇವಾಲಯ ಕಟ್ಟಿಸಿದ್ದಾರೆ, ನೀವು ಯಾವ ದೇವಾಲಯ ಕಟ್ಟಿದ್ದೀರಿ, ಶಾಲೆಗಾಗಿ ನೀವು 2 ಎಕರೆ ಜಮೀನು ದಾನ ಮಾಡಿದ್ದೀರಾ ಎಂದು ಸವಾಲು ಹಾಕಿದ್ದೆ. ನನ್ನ ಪ್ರಶ್ನೆಗೆ ಅವರಿಂದ ಉತ್ತರವೇ ಬರಲಿಲ್ಲ ಎಂದರು.

ಡಿಕೆ ಶಿವಕುಮಾರ್
'ಕೈ' ಪಾಳಯದಲ್ಲಿ ಮುಂದುವರೆದ ಬಣ ರಾಜಕೀಯ: ಸಿಎಂ ಹುದ್ದೆಗಾಗಿ ಡಿಕೆಶಿ ಬೆಂಬಲಿಗರ ಹರಸಾಹಸ; ತಂತ್ರ ಬದಲಿಸಿದ ಸಿದ್ದು ಕ್ಯಾಂಪ್!

ಚುನಾವಣೆ ವೇಳೆ ಅಭಿವೃದ್ಧಿ ಬೇಕೋ, ಕಣ್ಣೀರು ಬೇಕೋ ನಿರ್ಧಾರ ಮಾಡಿ ಎಂದು ನಿಮ್ಮ ಹತ್ತಿರ ಮನವಿ ಮಾಡಿದ್ದೆ. ನೀವು ಅಭಿವೃದ್ಧಿಯನ್ನೇ ಆಯ್ಕೆ ಮಾಡಿದ್ದೀರಿ. ಮುಂದಿನ 3 ವರ್ಷಗಳಲ್ಲಿ ಕ್ಷೇತ್ರದಲ್ಲಿ ಬದಲಾವಣೆ ಮಾಡಲು ರೂಪುರೇಷೆ ಮಾಡಬೇಕಿದೆ. ನಾನು ಆಕಾಶವನ್ನು ಧರೆಗೆ ಇಳಿಸುತ್ತೇನೆ ಎಂದು ಹೇಳುವುದಿಲ್ಲ. ನಿಮ್ಮ ಕಣ್ಣಿಗೆ ಕಾಣುವ ಬದಲಾವಣೆ ತರುತ್ತೇವೆ. ಹಾಲು ಉತ್ಪಾದಕರ ಸಮಸ್ಯೆ ನಮ್ಮ ಗಮನದಲ್ಲಿದೆ. ಸೂಕ್ತ ಕಾಲದಲ್ಲಿ ನಿರ್ಧಾರ ಮಾಡುತ್ತೇವೆ. ನೀವು ಹಣಕ್ಕೆ ಬೆಲೆ ಕೊಡಲಿಲ್ಲ, ಗುಣಕ್ಕೆ ಬೆಲೆ ಕೊಟ್ಟಿದ್ದೀರಿ ಎಂದು ಹೇಳಿದರು.

ಬೆಂಗಳೂರು ಗ್ರಾಮೀಣ ಮಾಜಿ ಸಂಸದ ಮತ್ತು ಶಿವಕುಮಾರ್ ಅವರ ಕಿರಿಯ ಸಹೋದರ ಡಿ.ಕೆ. ಸುರೇಶ್ ಅವರು ಮಾತನಾಡಿ, ರಾಮನಗರದ ನಾಲ್ವರು ಕಾಂಗ್ರೆಸ್ ಶಾಸಕರ ಕಾರ್ಯಕ್ಷಮತೆಯನ್ನು ಸೂಕ್ಷ್ಮವಾಗಿ ಗಮನಿಸುವುದಾಗಿ ಹೇಳಿದರು.

ಜಿಲ್ಲೆಯ ಎಲ್ಲಾ ಶಾಸಕರು ಇದನ್ನು ಸವಾಲಾಗಿ ಸ್ವೀಕರಿಸಿ, ಸರ್ಕಾರ ಯೋಜನೆಗಳನ್ನು ಜನರಿಗೆ ತಲುಪಿಸಬೇಕು. ಕ್ಷೇತ್ರದ ಜನರು ಗ್ಯಾರಂಟಿ ಯೋಜನೆಗಳು ಮತ್ತು ಅಭಿವೃದ್ಧಿಗೆ ಮತ ಹಾಕಿದ್ದಾರೆ. ನಮಗೆ ಈಗಾಗಲೇ 600 ಕೋಟಿ ರೂ. ಅನುದಾನ ಸಿಕ್ಕಿದೆ. ಕೆಲಸಗಳು ಪ್ರಾರಂಭವಾಗಿವೆ ಎಂದು ಹೇಳಿದರು.

ನಾನು ಚನ್ನಪಟ್ಟಣದಿಂದ ಚುನಾವಣೆಯಲ್ಲಿ ಸ್ಪರ್ಧಿಸಲು ಉತ್ಸುಕನಾಗಿದ್ದೆ, ಆದರೆ, ಪಕ್ಷ ಒಪ್ಪಲಿಲ್ಲ. ಕುಟುಂಬಕ್ಕಿಂತ ಪಕ್ಷ ಮುಖ್ಯ ಎಂದು ತೀರ್ಮಾನಿಸಿ, ಯೋಗೇಶ್ವರ್ ಪಕ್ಷ ಹಾಗೂ ನಾಯಕತ್ವ ಒಪ್ಪಿ ಬಂದ ನಂತರ, ನಮ್ಮ ಪಕ್ಷದ ಹಿರಿಯ ನಾಯಕರ ಜತೆ ಚರ್ಚಿಸಿ, ಅಂತಿಮ ತೀರ್ಮಾನ ಮಾಡಿದೆವು. ಈ ಸಂದರ್ಭದಲ್ಲಿ ಕಾರ್ಯಕರ್ತರ ಅಭಿಪ್ರಾಯ ಕೇಳಲು ಆಗಲಿಲ್ಲ. ಆದರೆ ಚಿಂತೆ ಮಾಡುವುದು ಬೇಡ, ನಾವು ಎಲ್ಲಾ ಕಾರ್ಯಕರ್ತರ ರಕ್ಷಣೆ ಮಾಡೇ ಮಾಡ್ತೇವೆಂದು ಭರವಸೆ ನೀಡಿದರು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com