
ಬೆಂಗಳೂರು: ಕಾಂಗ್ರೆಸ್ ಪಾಳಯದಲ್ಲಿ ಮುಖ್ಯಮಂತ್ರಿ ಹುದ್ದೆಗಾಗಿ ಹಾವು ಏಣಿಯಾಟ ಮುಂದುವರೆದಿದೆ. ಮುಖ್ಯಮಂತ್ರಿ ಹುದ್ದೆ ತಮ್ಮದಾಗಿಸಿಕೊಳ್ಳಲು ಡಿಕೆ ಶಿವಕುಮಾರ್ ಬಣ ಹರಸಾಹಸಪಡುತ್ತಿದದು, ಈ ನಡುವಲ್ಲೇ ಸಿದ್ದರಾಮಯ್ಯ ಬಣ ತಮ್ಮ ತಂತ್ರಗಳನ್ನು ಬದಲಿಸಿದೆ.
ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ. ಯೋಗೇಶ್ವರ ಅವರ ಗೆಲುವನ್ನು ಖಚಿತಪಡಿಸಿದ ಮತದಾರರಿಗೆ ಧನ್ಯವಾದ ಹೇಳಲು ಭಾನುವಾರ ಚನ್ನಪಟ್ಟಣದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ, ಶಿವಕುಮಾರ್ ಅವರ ಬೆಂಬಲಿಗರು ತಮ್ಮ ನಾಯಕ ಮುಂದಿನ ಮುಖ್ಯಮಂತ್ರಿಯಾಗಬೇಕೆಂದು ಹಾರೈಸಿದರು.
ಮಾಗಡಿ ಶಾಸಕ ಎಚ್.ಸಿ. ಬಾಲಕೃಷ್ಣ ಅವರು ತಮ್ಮ ಸ್ವಾಗತ ಭಾಷಣದಲ್ಲಿ, ಶಿವಕುಮಾರ್ ಶೀಘ್ರದಲ್ಲೇ ಉನ್ನತ ಹುದ್ದೆಯಲ್ಲಿ ಆಡಳಿತ ನಡೆಸಲಿದ್ದಾರೆಂದು ಹೇಳಿದರು.
ಇದಕ್ಕೂ ಮೊದಲು ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು, ಸಿದ್ದರಾಮಯ್ಯ 4 ವರ್ಷಗಳ ಅವಧಿಗೆ ಪೂರ್ಣ ಮುಖ್ಯಮಂತ್ರಿಯಾಗಿರುತ್ತಾರೆ ಎಂದು ಹೇಳಿದರು.
ನವೆಂಬರ್ 15 ರ ನಂತರ ಸಿಎಂ ಹುದ್ದೆಯಲ್ಲಿ ಬದಲಾವಣೆಯಾಗಲಿದೆ ಎಂಬ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್. ಅಶೋಕ ಅವರ ಭವಿಷ್ಯವಾಣಿ ಕುರಿತುತ ಪ್ರತಿಕ್ರಿಯಿಸಿ, ಅಶೋಕ್ ಅವರು ಯಾವಾಗ ಭವಿಷ್ಯ ಹೇಳೋದನ್ನು ಕಲಿತರು ಎಂಬುದು ನಮಗೆ ಗೊತ್ತಿಲ್ಲ. ಅಂತಹ ಯಾವುದೇ ಬೆಳವಣಿಗೆ ನಡೆದಿಲ್ಲ. ನಾವೆಲ್ಲ 5 ವರ್ಷ ಸಿದ್ದರಾಮಯ್ಯ ಅವರೇ ಸಿಎಂ ಆಗಿರುತ್ತಾರೆ ಎಂದುಕೊಂಡಿದ್ದೇವೆ ಎಂದರು.
ಸಿಎಲ್‌ಪಿ ಸಭೆಯಲ್ಲಿ ಸಿಎಂ ಆಯ್ಕೆ ಆಗಿದೆ. ಆ ಸಂದರ್ಭದಲ್ಲಿ ಅವರು ಎರಡೂವರೆ ವರ್ಷ ಮಾತ್ರ ಇರುತ್ತಾರೆ ಎಂದು ನಮಗೇನೂ ಹೈಕಮಾಂಡ್ ಹೇಳಿಲ್ಲ. ಹಾಗಾಗಿ ನಾವೆಲ್ಲ ಸಿದ್ದರಾಮಯ್ಯ ಅವರೇ ಐದು ವರ್ಷ ಸಿಎಂ ಆಗಿರುತ್ತಾರೆ ಎಂದುಕೊಂಡಿದ್ದೇವೆ. ಈ ಮಧ್ಯೆ ಹೈಕಮಾಂಡ್ ಏನು ತೀರ್ಮಾ ಮಾಡುತ್ತೋ ಗೊತ್ತಿಲ್ಲ ಎಂದು ಹೇಳಿದರು.
ನಾನು ದೆಹಲಿಗೆ ಹೋಗಬೇಕು ಎಂದು ಅಂದುಕೊಂಡಿದ್ದೇನೆ. ಇನ್ನೂ ಯಾವಾಗ ಎಂಬುದು ನಿಗದಿಯಾಗಿಲ್ಲ. ಆದರೆ, ದೆಹಲಿಗೆ ನಾನು ರಾಜಕೀಯ ಕಾರಣಕ್ಕೆ ಹೋಗುತ್ತಿಲ್ಲ. ಇಲಾಖೆ ಕೆಲಸಗಳಿಗೆ ದೆಹಲಿಗೆ ಹೋಗಬೇಕಿದೆ. ರಾಜಕೀಯ ಕಾರಣಕ್ಕೆ ಹೋಗುವುದಿಲ್ಲ. ಏಕೆಂದರೆ ಇಲ್ಲಿಗೇ ನಮ್ಮ ಎಐಸಿಸಿ ಅಧ್ಯಕ್ಷರು, ಉಸ್ತುವಾರಿಗಳು ಬರುತ್ತಾರೆ. ಆಗಲೇ ಏನಾದರೂ ಇದ್ದರೆ ಚರ್ಚೆ ಮಾಡುತ್ತೇವೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಮೂಲಗಳ ಪ್ರಕಾರ, ಮುಖ್ಯಮಂತ್ರಿ ಬದಲಾವಣೆ ಪರಿಸ್ಥಿತಿ ಎದುರಾದರೆ ಸಿದ್ದರಾಮಯ್ಯ ಅವರು ತಮ್ಮನ್ನು ಬೆಂಬಲಿಸುವ ವಿಶ್ವಾಸದಲ್ಲಿ ಪರಮೇಶ್ವರ್ ಇದ್ದು, ಹೀಗಾಗಿ ಹೈಕಮಾಂಡ್ ಭೇಟಿ ಬಗ್ಗೆ ಚಿಂತಿಸುತ್ತಿಲ್ಲ ಎಂದು ತಿಳಿದುಬಂದಿದೆ.
ಸಚಿವ ಪ್ರಿಯಾಂಕ್ ಖರ್ಗೆ ಅವರು ಮಾತನಾಡಿ, ಸಿದ್ದರಾಮಯ್ಯ, ಶಿವಕುಮಾರ್ ಮತ್ತು ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಇತರೆ ಹಿರಿಯ ನಾಯಕರು ನಾಯಕತ್ವ ಬದಲಾವಣೆ ವಿಚಾರವನ್ನು ಹೈಕಮಾಂಡ್'ಗೆ ಬಿಟ್ಟಿದ್ದಾರೆಂದು ಹೇಳಿದರು.
ಮೂಲಗಳ ಪ್ರಕಾರ, ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಮತ್ತು ಸಹಕಾರ ಸಚಿವ ಕೆ.ಎನ್. ರಾಜಣ್ಣ ಅವರು ಶೀಘ್ರದಲ್ಲೇ ನವದೆಹಲಿಯಲ್ಲಿ ಹೈಕಮಾಂಡ್ ಭೇಟಿ ಮಾಡಿ ಮುಖ್ಯಮಂತ್ರಿ ಬದಲಾವಣೆಯಿಂದ ಪಕ್ಷದ ಭವಿಷ್ಯದ ಮೇಲೆ ಆಗುವ ಪರಿಣಾಮಗಳ ಕುರಿತು ಚರ್ಚಿಸುವ ಸಾಧ್ಯತೆಯಿದೆ ಎಂದು ತಿಳಿದುಬಂದಿದೆ.
ಮುಖ್ಯಮಂತ್ರಿ ಬದಲಾವಣೆ ವಿಚಾರವಷ್ಟೇ ಅಲ್ಲದೆ, ಹೆಚ್ಚಿನ ಡಿಸಿಎಂ ಹುದ್ದೆ ರಚನೆ ಕುರಿತಂತೆಯೂ ಚರ್ಚೆ ನಡೆಸುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.
ಪರಮೇಶ್ವರ್ ಅವರು ತಮ್ಮ ಖಾತೆ ಬದಲಾವಣೆಯನ್ನು ಬಯಸಿದ್ದು, ಮಾರ್ಚ್‌ನಲ್ಲಿ ಸಿದ್ದರಾಮಯ್ಯ ಅವರು ಬಜೆಟ್ ಮಂಡಿಸಿದ ನಂತರ ಸಂಪುಟ ಪುನರ್ರಚನೆಯ ಸಂದರ್ಭದಲ್ಲಿ ತಮ್ಮ ಬೇಡಿಕೆಯನ್ನು ಉನ್ನತ ನಾಯಕತ್ವದ ಮುಂದೆ ಇಡಲಿದ್ದಾರೆಂದು ಎಂದು ಮೂಲವೊಂದು ತಿಳಿಸಿದೆ.
Advertisement