
ಮೈಸೂರು: ಕಾಂಗ್ರೆಸ್ ಪಕ್ಷದ ಬಗ್ಗೆ ಮಾತಾಡುವ ಮೊದಲು ತಮ್ಮ ಪಕ್ಷ ಎಷ್ಟು ಹಳಸಿದೆ ಎಂಜು ನೋಡಿಕೊಳ್ಳಲಿ, ರಾಜ್ಯ ಬಿಜೆಪಿ ಎರಡು ಹೋಳಾಗಿದೆ ಅದನ್ನು ಅವರು ಗಮನಿಸಲಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶನಿವಾರ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಳಗಾವಿ ವಿಧಾನಸಭಾ ಅಧಿವೇಶನಕ್ಕೆ ಹೊಸ ಮುಖ್ಯಮಂತ್ರಿ ಬಂದಿರುತ್ತಾರೆಂದು ಎಂದು ಬಿಜೆಪಿ ರಾಜ್ಯ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಭವಿಷ್ಯ ನುಡಿದಿದ್ದರು. ಹಾಗಾಯಿತೇ? ಬಿಜೆಪಿ ಭವಿಷ್ಯವಾಣಿಗಳು ಯಾವಾಗಲೂ ತಪ್ಪಾಗಿವೆ, ರಾಜ್ಯ ನಾಯಕತ್ವದಲ್ಲಿ ಯಾವುದೇ ಬದಲಾವಣೆಗಳಿಲ್ಲ ಎಂದು ಸ್ಪಷ್ಟಪಡಿಸಿದರು.
ನಾಯಕತ್ವ ಬದಲಾವಣೆ ಕುರಿತು ಕಾಂಗ್ರೆಸ್ ಹೈಕಮಾಂಡ್ ನಿರ್ಧಾರ ತೆಗೆದುಕೊಳ್ಳುತ್ತದೆ. ಪ್ರತಿನಿತ್ಯ ಬಿಜೆಪಿ ನಾಯಕರು ಪರಸ್ಪರ ವೈರತ್ವದ ಹೇಳಿಕೆಗಳನ್ನು ನೀಡುತ್ತಾರೆ, ಕೆಟ್ಟ ಮಾತುಗಳನ್ನ ಬಳಸುತ್ತಾರೆ, ಬಿವೈ ವಿಜಯೇಂದ್ರ ಹೊಂದಾಣಿಕೆ ಮಾಡಿಕೊಂಡು ರಾಜ್ಯಾಧ್ಯಕ್ಷರಾಗಿದ್ದಾರೆ ಎಂದು ಚಿಕ್ಕಬಳ್ಳಾಪುರ ಸಂಸದ ಸುಧಾಕರ್ ನೇರವಾಗಿ ಮತ್ತು ಬಹಿರಂಗವಾಗಿ ಅರೋಪ ಮಾಡಿದ್ದಾರೆ. ಬಿಜೆಪಿ ನಾಯಕತ್ವ ಬದಲಾವಣೆಯಾಗಬೇಕೆಂದು ಬಹಿರಂಗವಾಗಿ ಹೇಳುತ್ತಿದ್ದಾರೆ. ಬಿಜೆಪಿ ಸಂಬಂಧ ಅಳಸಿದ್ದರೂ, ಕಾಂಗ್ರೆಸ್ ಬಗ್ಗೆ ಮಾತನಾಡುತ್ತಾರೆಂದು ಕಿಡಿಕಾರಿದರು.
ಜಿಲ್ಲಾ ಮತ್ತು ತಾಲ್ಲೂಕು ಪಂಚಾಯತ್ ಚುನಾವಣೆಗಳಿಗೆ ಕಾಂಗ್ರೆಸ್ ಪರ ಅಲೆ ಮತ್ತಷ್ಟು ಹೆಚ್ಚಾಗಲಿದೆ. ಹೀಗಾಗಿ ಬಿಜೆಪಿ ಮತ್ತು ಜೆಡಿಎಸ್ ತಮ್ಮ ನಾಯಕತ್ವದ ಬಗ್ಗೆ ಭಯಭೀತರಾಗಿದ್ದಾರೆ. ಬಿಜೆಪಿ ಮತ್ತು ಜೆಡಿಎಸ್ ನಡುವಿನ ದೋಸ್ತಿಯಿಂದ ರಾಜ್ಯಕ್ಕೆ ಯಾವುದೇ ಪ್ರಯೋಜನವಾಗಿಲ್ಲ ಎಂದರು.
ಜಾತಿ ಜನಗಣತಿಯ ಅನುಷ್ಠಾನದ ಕುರಿತು ಮಾತನಾಡಿ, ಕಾಂಗ್ರೆಸ್ ಹೈಕಮಾಂಡ್ ಜೊತೆ ಮಾತನಾಡಿದ ನಂತರ ಸಂಪುಟದ ಮುಂದೆ ಮಂಡಿಸಲಾಗುವುದು ಎಂದು ಹೇಳಿದರು.
ಮುಖ್ಯಮಂತ್ರಿಗಳ ರಾಜಕೀಯ ಸಲಹೆಗಾರ ಸ್ಥಾನಕ್ಕೆ ಶಾಸಕ ಬಿ ಆರ್ ಪಾಟೀಲ್ ರಾಜೀನಾಮೆ ನೀಡಿರುವ ಕುರಿತು ಮಾತನಾಡಿ, ನಾನಿನ್ನೂ ರಾಜೀನಾಮೆ ಪತ್ರವನ್ನು ಓದಿಲ್ಲ. ಪಾಟೀಲ್ ಅವರೊಂದಿಗೆ ಮಾತುಕತೆ ನಡೆಸಿ ಸಮಸ್ಯೆಯನ್ನು ಪರಿಹರಿಸುತ್ತೇನೆಂದು ತಿಳಿಸಿದರು.
Advertisement