
ದಾವಣಗೆರೆ: ನ್ಯಾಕ್ ಗ್ರೇಡ್ ಕೊಡಲು ಲಂಚಕ್ಕೆ ಬೇಡಿಕೆ ಇಟ್ಟ ಆರೋಪದ ಮೇಲೆ ದಾವಣಗೆರೆ ವಿವಿಯ ಪ್ರೊ.ಗಾಯತ್ರಿ ದೇವರಾಜ್ ಅವರನ್ನು ಹೈದರಾಬಾದ್ನಲ್ಲಿ ಸಿಬಿಐ ಅಧಿಕಾರಿಗಳು ಬಂಧಿಸಿದ್ದಾರೆ.
ಗಾಯತ್ರಿ ಅವರು ದಾವಣಗೆರೆ ವಿಶ್ವವಿದ್ಯಾನಿಲಯದ ಮಾಜಿ ರಿಜಿಸ್ಟ್ರಾರ್ (ಆಡಳಿತ) ಆಗಿದ್ದರು ಮತ್ತು ಮೈಕ್ರೋಬಯಾಲಜಿ ಅಧ್ಯಯನ ವಿಭಾಗದ ಹಿರಿಯ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದರು. ಅವರು ರಾಷ್ಟ್ರೀಯ ಮೌಲ್ಯಮಾಪನ ಮತ್ತು ಮಾನ್ಯತೆ ಮಂಡಳಿಯ (NAAC) ಏಳು ಸದಸ್ಯರ ತಪಾಸಣೆ ತಂಡದ ಭಾಗವಾಗಿದ್ದರು.
ಬಂಧಿತ ವ್ಯಕ್ತಿಗಳಲ್ಲಿ ತಪಾಸಣಾ ಸಮಿತಿಯ ಅಧ್ಯಕ್ಷರು ಮತ್ತು ಆರು ಸದಸ್ಯರು ಸೇರಿದ್ದಾರೆ. ಬಂಧಿತರಲ್ಲಿ ಆಂಧ್ರಪ್ರದೇಶದ ಗುಂಟೂರಿನಲ್ಲಿರುವ ಕೋನೇರು ಲಕ್ಷ್ಮಯ್ಯ ಶಿಕ್ಷಣ ಪ್ರತಿಷ್ಠಾನದ (ಕೆಎಲ್‌ಇಎಫ್) ಉಪಕುಲಪತಿಗಳು ಮತ್ತು ಇಬ್ಬರು ಕಾರ್ಯನಿರ್ವಾಹಕರು ಸೇರಿದ್ದಾರೆ.
ಅಧಿಕೃತ ಹೇಳಿಕೆಯಲ್ಲಿ, ಶಿಕ್ಷಣ ಸಂಸ್ಥೆಯ ಪದಾಧಿಕಾರಿಗಳು ಹಾಗೂ ನ್ಯಾಕ್ ಪರಿಶೀಲನಾ ತಂಡದ ಸದಸ್ಯರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಸಿಬಿಐ ದೃಢಪಡಿಸಿದೆ. ಅನುಕೂಲಕರವಾದ NAAC ರೇಟಿಂಗ್‌ಗಳಿಗೆ, ನಿರ್ದಿಷ್ಟವಾಗಿ A++ ಮಾನ್ಯತೆ ನೀಡಲು ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎಂದು ತಿಳಿದು ಬಂದಿದೆ.
ಕೆಎಲ್‌ಇಎಫ್ ಅಧ್ಯಕ್ಷ ಕೋನೇರು ಸತ್ಯನಾರಾಯಣ, ನ್ಯಾಕ್ ಮಾಜಿ ಉಪ ಸಲಹೆಗಾರ ಎಲ್ ಮಂಜುನಾಥ ರಾವ್, ಬೆಂಗಳೂರು ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಮತ್ತು ನಿರ್ದೇಶಕ (ಐಕ್ಯೂಎಸಿ-ಎನ್‌ಎಸಿ) ಎಂ ಹನುಮಂತಪ್ಪ ಮತ್ತು ನ್ಯಾಕ್ ಸಲಹೆಗಾರ ಎಂಎಸ್ ಶ್ಯಾಮಸುಂದರ್ ಅವರನ್ನೂ ಎಫ್‌ಐಆರ್‌ನಲ್ಲಿ ಆರೋಪಿಗಳಾಗಿ ಹೆಸರಿಸಲಾಗಿದೆ ಎಂದು ಸಿಬಿಐ ತಿಳಿಸಿದೆ.
ನ್ಯಾಕ್ ತಪಾಸಣೆಯ ಸದಸ್ಯರಿಗೆ ಲಂಚ ನೀಡುವಲ್ಲಿ ಭಾಗಿಯಾಗಿರುವ ಆರೋಪದಲ್ಲಿ ಕೆಎಲ್‌ಇಎಫ್ ಉಪಕುಲಪತಿ ಜಿ ಪಿ ಸಾರಧಿ ವರ್ಮ, ಕೆಎಲ್‌ಇಎಫ್ ಉಪಾಧ್ಯಕ್ಷ ಕೊನೇರು ರಾಜಾ ಹರೇನ್ ಮತ್ತು ಹೈದರಾಬಾದ್ ಕ್ಯಾಂಪಸ್‌ನ ಕೆಎಲ್ ವಿಶ್ವವಿದ್ಯಾಲಯದ ನಿರ್ದೇಶಕ ಎ ರಾಮಕೃಷ್ಣ ಅವರನ್ನು ಸಿಬಿಐ ಬಂಧಿಸಿದೆ. ಪ್ರಕರಣದಲ್ಲಿ ಒಟ್ಟು 14 ವ್ಯಕ್ತಿಗಳು ಭಾಗಿಯಾಗಿದ್ದಾರೆ ಎಂದು ಸಿಬಿಐ ತಿಳಿಸಿದೆ. ಅಪರಾಧದ ಸಂಪೂರ್ಣ ವ್ಯಾಪ್ತಿಯನ್ನು ತಿಳಿದುಕೊಳ್ಳಲು ತನಿಖೆ ನಡೆಯುತ್ತಿದೆ ಎಂದು ದೃಢಪಡಿಸಿದೆ.
ತನಿಖಾ ಸಂಸ್ಥೆಯು ವಿಜಯವಾಡ, ಚೆನ್ನೈ, ಬೆಂಗಳೂರು, ಪಲಮು, ಸಂಬಲ್‌ಪುರ್, ಭೋಪಾಲ್, ಬಿಲಾಸ್‌ಪುರ, ಗೌತಮ್ ಬುದ್ಧ ನಗರ ಮತ್ತು ನವದೆಹಲಿ ಸೇರಿದಂತೆ ವಿವಿಧ ನಗರಗಳ 20 ಸ್ಥಳಗಳಲ್ಲಿ ಶೋಧ ನಡೆಸಿತು. ಈ ಶೋಧದ ವೇಳೆ ಸಿಬಿಐ ಅಧಿಕಾರಿಗಳು 37 ಲಕ್ಷ ರೂಪಾಯಿ ನಗದು, ಆರು ಲ್ಯಾಪ್‌ಟಾಪ್‌ಗಳು, ಒಂದು ಮೊಬೈಲ್ ಫೋನ್ ಮತ್ತು ಹಲವು ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ.
Advertisement