
ಬೆಂಗಳೂರು: ಟ್ರಾಯ್ ಅಧಿಕಾರಿಯ ಸೋಗಿನಲ್ಲಿ ಕರೆ ಮಾಡಿ ಗೃಹಿಣಿಯೊಬ್ಬರಿಗೆ 39.74 ಲಕ್ಷ ರೂ.ವಂಚನೆ ಮಾಡಿದ್ದ ಆರೋಪದಡಿ ಸೈಬರ್ ವಂಚಕ ಜಾಲದ ಸದಸ್ಯ ಐಸ್ ಕ್ರೀಂ ವ್ಯಾಪಾರಿಯನ್ನು ಬೇಗೂರು ಠಾಣೆ ಪೊಲೀಸರು ಬಂಧನಕ್ಕೊಳಪಡಿಸಿದ್ದಾರೆ.
ಪರಪ್ಪನ ಅಗ್ರಹಾರದ ನಿವಾಸಿ ಮತ್ತು ತಮಿಳುನಾಡು ಮೂಲದ ಕವಿ ಅರಸು ಬಂಧಿತ ಆರೋಪಿ. ಆರೋಪಿಯ ಮನೆಯಿಂದ 1.07 ಲಕ್ಷ ರೂ. ವಶಕ್ಕೆ ಪಡೆಯಲಾಗಿದೆ.
ಕೆಲ ವರ್ಷಗಳ ಹಿಂದೆ ತಮಿಳುನಾಡಿನಿಂದ ನಗರಕ್ಕೆ ಬಂದಿದ್ದ ಆರೋಪಿ, ಪರಪ್ಪನ ಅಗ್ರಹಾರದಲ್ಲಿರುವ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ. ಜೀವನ ನಿರ್ವಹಣೆಗಾಗಿ ಐಸ್ ಕ್ರೀಮ್ ಪಾರ್ಲರ್ ಇಟ್ಟುಕೊಂಡು, ಮುಂಬೈನಲ್ಲಿರುವ ಕಿಂಗ್‌ಪಿನ್‌ನ ಸೂಚನೆ ಮೇರೆಗೆ ಸೈಬರ್ ವಂಚನೆಗೆ ಇಳಿದಿದ್ದ ಎಂದು ತಿಳಿದುಬಂದಿದೆ.
ಕಳೆದ ಡಿ.5ರಂದು ದೂರುದಾರರಿಗೆ ಕರೆ ಮಾಡಿದ್ದ ಅಪರಿಚಿತ ವ್ಯಕ್ತಿ, ತನ್ನನ್ನು ಟ್ರಾಯ್ ಅಧಿಕಾರಿ ಎಂದು ಪರಿಚಯಿಸಿಕೊಂಡು ಸಿಬಿಐನಲ್ಲಿ ನಿಮ್ಮ ನಂಬರ್ ವಿರುದ್ಧ ದೂರು ದಾಖಲಾಗಿದ್ದು, ನಿಮ್ಮ ಸಿಮ್ ಕಾರ್ಡ್ ಬ್ಲಾಕ್ ಮಾಡಲಾಗಿದೆ ಎಂದಿದ್ದಾನೆ. ಈ ಮಾತಿಗೆ ಭೀತಿಗೊಂಡ ದೂರುದಾರರು, ‘ಯಾವ ಪ್ರಕರಣ’ ಎಂದು ಪ್ರಶ್ನಿಸಿದ್ದಾರೆ.
ಆಗ ನೀವು ನೀರವ್ ಅಗರ್‌ವಾಲ್ ಎಂಬ ವ್ಯಕ್ತಿಯ ಜೊತೆ ಕಾನೂನುಬಾಹಿರ ಚಟುವಟಿಕೆಯಲ್ಲಿ ತೊಡಗಿರುವುದು ಕಂಡು ಬಂದಿದೆ. ಆದ್ದರಿಂದ ಈ ಕೂಡಲೇ ದೆಹಲಿಗೆ ಬರಬೇಕಾಗುತ್ತದೆ. ಇಲ್ಲವಾದರೆ ಆನ್‌ಲೈನ್ ಮೂಲಕ ವಿಚಾರಣೆ ನಡೆಸುವುದಾಗಿ ಹೇಳಿ ವಾಟ್ಸಪ್ ವಿಡಿಯೋ ಕಾಲ್ ಮಾಡಿದ್ದಾನೆ. ಆಗ ಖಾಕಿ ಸಮವಸ್ತ್ರದಲ್ಲಿದ್ದ ಅಪರಿಚಿತನನ್ನು ಕಂಡು ವೀಣಾ ಭಯಗೊಂಡಿದ್ದಾರೆ.
ವಿಡಿಯೋ ಕಾಲ್‌ನಲ್ಲಿ ನಿಮ್ಮನ್ನು ಡಿಜಿಟಲ್ ಅರೆಸ್ಟ್ ಮಾಡಿದ್ದು, ನಿಮ್ಮ ಬ್ಯಾಂಕ್ ಖಾತೆಯಿಂದ ಹಣ ವರ್ಗಾವಣೆಯಾಗಿದೆ. ನಿಮ್ಮನ್ನು ಬಂಧಿಸುತ್ತೇವೆ. ಈ ಪ್ರಕರಣದಿಂದ ನೀವು ಹೊರ ಬರಬೇಕಾದರೆ ನಿಮ್ಮ ಖಾತೆಯಲ್ಲಿರುವ ಹಣವನ್ನು ನಾನು ಸೂಚಿಸುವ ಬ್ಯಾಂಕ್ ಖಾತೆಗೆ ವರ್ಗಾಯಿಸಬೇಕು. ಇಲ್ಲದೆ, ಹೋದರೆ ನಿಮ್ಮ ಪತಿ ಹಾಗೂ ಮಕ್ಕಳನ್ನು ಸಹ ಬಂಧಿಸಲಾಗುವುದು ಎಂದು ತಾಕೀತು ಮಾಡಿದ್ದಾನೆ. ಈ ಮಾತಿಗೆ ಹೆದರಿದ ವೀಣಾ ಅವರು, ಆರೋಪಿ ಸೂಚಿಸಿದ ಬ್ಯಾಂಕ್ ಖಾತೆಗೆ ಹಂತ ಹಂತವಾಗಿ 39 ಲಕ್ಷ ರು ಹಣ ವರ್ಗಾಯಿಸಿದ್ದಾರೆ. ಕೊನೆಗೆ ತಾವು ವಂಚನೆಗೊಳಾಗಿರುವ ವಿಚಾರ ತಿಳಿದಾಗ ಬೇಗೂರು ಠಾಣೆಗೆ ದೂರು ನೀಡಿದ್ದಾರೆ.
ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಪೊಲೀಸರು, ದೂರುದಾರರ ಖಾತೆಯಿಂದ ವರ್ಗಾವಣೆಯಾದ ಬ್ಯಾಂಕ್ ಖಾತೆಗಳ ವಿವರ ಪರಿಶೀಲಿಸಿದಾಗ ಆರೋಪಿ ಖಾತೆಗೆ 6.52 ಲಕ್ಷ ರೂ.ವರ್ಗಾವಣೆ ಆಗಿರುವುದು ಗೊತ್ತಾಗಿದೆ. ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ. ಪ್ರಕರಣದ ಮತ್ತೊಬ್ಬ ಆರೋಪಿ ಪ್ರಸ್ತುತ ತಲೆಮರೆಸಿಕೊಂಡಿದ್ದು, ಆತನಿಗಾಗಿ ಹುಡುಕಾಟ ಆರಂಭಿಸಿದ್ದಾರೆ.
Advertisement