
ಬೆಂಗಳೂರು: ಗೇರ್ ಇಲ್ಲದ ಸ್ಕೋಟರ್ ನಲ್ಲಿ ಬೆಂಗಳೂರೆಲ್ಲಾ ಸುತ್ತಾಡುತ್ತಾ 311 ಬಾರಿ ಸಂಚಾರ ನಿಯಮ ಉಲ್ಲಂಘಿಸಿದ್ದ ಬೈಕ್ ಸವಾರನೊಬ್ಬ ಕೊನೆಗೆ ರೂ. 1.61 ಲಕ್ಷ ದಂಡ ಪಾವತಿಸಿ, ಸೀಜ್ ಆಗಿದ್ದ ತನ್ನ ಬೈಕ್ ನ್ನು ಮನೆಗೆ ತೆಗೆದುಕೊಂಡು ಹೋಗಿದ್ದಾನೆ ಎಂದು ಅಧಿಕಾರಿಗಳು ಬುಧವಾರ ಹೇಳಿದ್ದಾರೆ.
ಬೆಂಗಳೂರಿನ ನಿವಾಸಿ ಸುದೀಪ್ ಆ ಮಹಾನುಭವ. ಈ ಸಂಬಂಧ ಪೊಲೀಸರು ಕೇಸ್ ದಾಖಲಿಸಿಕೊಂಡು ಆತನ ಮನೆಗೆ ನೋಟಿಸ್ ಕಳುಹಿಸಿದ್ದರು. ಆದರೆ ಯಾವುದೇ ಪ್ರತಿಕ್ರಿಯೆ ಬಂದಿರಲಿಲ್ಲ. ಸಂಚಾರ ಪೊಲೀಸರು ಕೂಡಾ ಆತನನ್ನು ಹಿಡಿಯುವತ್ತ ಯಾವುದೇ ಗಮನ ಹರಿಸಿರಲಿಲ್ಲ.
ಆದರೆ ಶಿಬಮ್ ಎಂಬ ವ್ಯಕ್ತಿ ಸಾಮಾಜಿಕ ಮಾಧ್ಯಮ x ನಲ್ಲಿ ಸುದೀಪ್ ಅವರ ಸಂಚಾರ ನಿಯಮ ಉಲ್ಲಂಘನೆ ವಿವರಗಳು, ವಿಧಿಸಲಾದ ದಂಡದ ಮೊತ್ತವನ್ನು ರಶೀದಿಯೊಂದಿಗೆ ಫೋಸ್ಟ್ ಮಾಡಿದ್ದರು.
ಬಳಿಕ ಬೆಂಗಳೂರು ನಗರ ಸಂಚಾರ ಪೊಲೀಸರು ಇನ್ನೂ ವಾಹನವನ್ನು ಏಕೆ ವಶಪಡಿಸಿಕೊಂಡಿಲ್ಲ ಎಂದು ಕೆಲ ನೆಟ್ಟಿಗರು ಪ್ರಶ್ನಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಪೊಲೀಸರು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದರು. ಅದರಂತೆ ಸಿಟಿ ಮಾರ್ಕೆಟ್ ಸಂಚಾರ ಪೊಲೀಸರು ಸುದೀಪ್ ಅವರನ್ನು ಸುತ್ತುವರೆದು ಫೆಬ್ರವರಿ 3 ರಂದು ಬಂಧಿಸಿದ್ದರು.
ಫೆಬ್ರವರಿ 4 ರಂದು ಮಾಲೀಕ ರೂ. 1,61,500 ರೂ. ದಂಡವನ್ನು ಪಾವತಿಸಿದ ನಂತರ ಸೀಜ್ ಆಗಿದ್ದ ಬೈಕ್ ನ್ನು ಬಿಡುಗಡೆ ಮಾಡಲಾಗಿದ್ದು, ಸಂಚಾರ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸವಾರನಿಗೆ ಸೂಚಿಸಲಾಗಿದೆ ಎಂದು ಸಂಚಾರಿ ಪೊಲೀಸರು ತಿಳಿಸಿದ್ದಾರೆ.
Advertisement