
ಬೆಂಗಳೂರು: ಬೆಂಗಳೂರಿನ ಉತ್ತರ ತಾಲೂಕಿನ ಸೀಗೆಹಳ್ಳಿಯಲ್ಲಿ ನಿರ್ಮಾಣ ಹಂತದ ನಾಲ್ಕು ಅಂತಸ್ತಿನ ಕಟ್ಟಡವೊಂದರಲ್ಲಿ ಗುರುವಾರ ಮಧ್ಯಾಹ್ನ ಏಕಾಏಕಿ ಬೆಂಕಿ ಕಾಣಿಸಿಕೊಂಡಿದ್ದು, ಅಗ್ನಿ ಅವಘಡದಲ್ಲಿ ಇಬ್ಬರು ಸಜೀವ ದಹನವಾಗಿದ್ದಾರೆ.
ಮಾದನಾಯಕನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಅಗ್ನಿ ಅವಘಡ ಸಂಭವಿಸಿದ್ದು, ಮೃತರನ್ನು ಉತ್ತರ ಪ್ರದೇಶ ಮೂಲದ ಉದಯ್ ಭಾನು(40) ಮತ್ತು ಬಿಹಾರ ಮೂಲದ ರೋಷನ್(23) ಎಂದು ಗುರುತಿಸಲಾಗಿದೆ.
ಮೃತ ಕಾರ್ಮಿಕರಲ್ಲಿ ಒಬ್ಬ ಪೇಂಟರ್, ಮತ್ತೊಬ್ಬರು ಕಾರ್ಪೆಂಟರ್ ವೃತ್ತಿ ಮಾಡುತ್ತಿದ್ದರು.
ಕಡಬಗೆರೆ ಕ್ರಾಸ್‍ನಲ್ಲಿ ಸತೀಶ್ ಎಂಬುವರು ನಾಲ್ಕು ಅಂತಸ್ತಿನ ಮನೆ ನಿರ್ಮಾಣ ಮಾಡುತ್ತಿದ್ದು, ಕೆಲ ಕಾರ್ಮಿಕರು ಈ ಕಟ್ಟಡದಲ್ಲೇ ಅಡುಗೆ ಮಾಡಿಕೊಂಡು ಅಲ್ಲೇ ವಾಸವಿರುತ್ತಾರೆ.
ಇಂದು ಮಧ್ಯಾಹ್ನ ಈ ಕಟ್ಟಡದಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದೆ. ತಕ್ಷಣ ಅಕ್ಕ-ಪಕ್ಕದವರು ಅಗ್ನಿಶಾಮಕ ದಳಕ್ಕೆ ವಿಷಯ ತಿಳಿಸಿದ್ದಾರೆ. ನಾಲ್ಕು ಅಗ್ನಿಶಾಮಕ ವಾಹನಗಳೊಂದಿಗೆ ದಾವಿಸಿದ ಸಿಬ್ಬಂದಿ ಬೆಂಕಿಯನ್ನು ನಂದಿಸಿದರಾದರೂ ಅಷ್ಟರಲ್ಲಾಗಲೇ ಇಬ್ಬರು ಕಾರ್ಮಿಕರು ಸಜೀವ ದಹನವಾಗಿದ್ದು, ಎಂಟು ಕಾರ್ಮಿಕರನ್ನು ರಕ್ಷಿಸಲಾಗಿದೆ.
ಅಡುಗೆಗೆ ಬಳಸುವ ಸಿಲಿಂಡರ್ ನಿಂದ ಅನಿಲ ಸೋರಿಕೆಯಾಗಿ ಬೆಂಕಿ ಕಾಣಿಸಿಕೊಂಡು ಅಗ್ನಿ ಅವಘಡ ಸಂಭವಿಸಿರಬಹುದೇ ಅಥವಾ ವೆಲ್ಡಿಂಗ್ ಮಾಡುವಾಗ ಬೆಂಕಿ ಕಿಡಿಯಿಂದ ಈ ಘಟನೆ ನಡೆದಿದೆಯೇ ಎಂಬ ಬಗ್ಗೆ ಮಾದನಾಯಕನಹಳ್ಳಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
Advertisement