ಬೆಂಗಳೂರಿನಲ್ಲಿ 2ನೇ ಏರ್​ಪೋರ್ಟ್: ತಾಂತ್ರಿಕ ಅಗತ್ಯಗಳನ್ನು ಆಧರಿಸಿ ಸ್ಥಳ ಅಂತಿಮ- ಡಿ.ಕೆ ಶಿವಕುಮಾರ್

ಮೂಲಸೌಕರ್ಯ ಸಚಿವ ಎಂಬಿ ಪಾಟೀಲ್ ನೇತೃತ್ವದಲ್ಲಿ ಕರ್ನಾಟಕ ಸರ್ಕಾರದ ಸಂಬಂಧಿಸಿದ ಇಲಾಖೆಗಳು ಇದರ ಕಾರ್ಯಸಾಧ್ಯತೆಯನ್ನು ಪರಿಶೀಲಿಸುತ್ತಿವೆ.
DCM DK Shivakumar
ಡಿಸಿಎಂ ಡಿಕೆ ಶಿವಕುಮಾರ್
Updated on

ಬೆಂಗಳೂರು: ಬೆಂಗಳೂರಿಗೆ ಎರಡನೇ ವಿಮಾನ ನಿಲ್ದಾಣದ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್, ತಾಂತ್ರಿಕ ಅವಶ್ಯಕತೆಗಳ ಆಧಾರದ ಮೇಲೆ ಸ್ಥಳವನ್ನು ಅಂತಿಮಗೊಳಿಸಲಾಗುವುದು ಎಂದು ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ವಿಮಾನ ನಿಲ್ದಾಣ ಎಲ್ಲಿ ನಿರ್ಮಾಣವಾಗಬೇಕು. ಅದು ಬಿಡದಿ, ನೆಲಮಂಗಲ, ತುಮಕೂರು ಅಥವಾ ಇನ್ನಾವುದೇ ಸ್ಥಳದಲ್ಲಿ ನಿರ್ಮಾಣವಾಗಬೇಕೇ ಎಂಬುದನ್ನು ನಾವು ನಿರ್ಧರಿಸಲು ಸಾಧ್ಯವಿಲ್ಲ. ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ ಮತ್ತು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ನಡುವೆ ಕೆಲವು ವರ್ಷಗಳವರೆಗೆ ಯಾವುದೇ ವಿಮಾನ ನಿಲ್ದಾಣ ಬರಬಾರದು ಎಂಬ ಒಪ್ಪಂದವಿದ್ದು, ಚರ್ಚಿಸಿ ತೀರ್ಮಾನಿಸಲಾಗುವುದು’ ಎಂದರು.

'ಮೂಲಸೌಕರ್ಯ ಸಚಿವ ಎಂಬಿ ಪಾಟೀಲ್ ನೇತೃತ್ವದಲ್ಲಿ ಕರ್ನಾಟಕ ಸರ್ಕಾರದ ಸಂಬಂಧಿಸಿದ ಇಲಾಖೆಗಳು ಇದರ ಕಾರ್ಯಸಾಧ್ಯತೆಯನ್ನು ಪರಿಶೀಲಿಸುತ್ತಿವೆ. ಎಂಬಿ ಪಾಟೀಲ್ ಅವರು ನನ್ನೊಂದಿಗೆ ಮತ್ತು ಮುಖ್ಯಮಂತ್ರಿಯೊಂದಿಗೆ ಚರ್ಚಿಸುತ್ತಾರೆ ಮತ್ತು ನಂತರ ಅದನ್ನು ಸಂಪುಟದ ಮುಂದೆ ಇಡಲಾಗುತ್ತದೆ. ನಂತರ ಕೇಂದ್ರದಿಂದ ಅನುಮೋದನೆ ಪಡೆದು ಎರಡನೇ ವಿಮಾನ ನಿಲ್ದಾಣಕ್ಕೆ ಸ್ಥಳವನ್ನು ನಿರ್ಧರಿಸುತ್ತೇವೆ' ಎಂದು ಹೇಳಿದರು.

'ವಿಮಾನ ನಿಲ್ದಾಣವು ನನ್ನ ಹುಟ್ಟೂರಿನ ಬಳಿ ಬರಬೇಕು ಎಂಬ ಆಸೆ ನನಗೆ ಇರಬಹುದು. ಆದರೆ, ಅದನ್ನು ಹಾಗೆ ಮಾಡಲು ಆಗುವುದಿಲ್ಲ. ಹತ್ತಿರದಲ್ಲಿ ಯಾವುದೇ ಬೆಟ್ಟಗಳು ಇರಬಾರದು, ಹಾರುವ ವಲಯ ಇರಬೇಕು ಎಂಬುದು ಸೇರಿ ಕೆಲವು ಅವಶ್ಯಕತೆಗಳಿವೆ. ಕೆಲವು ತಾಂತ್ರಿಕ ಅವಶ್ಯಕತೆಗಳಿವೆ. ಅದರ ಆಧಾರದ ಮೇಲೆ ಅದನ್ನು ನಿರ್ಧರಿಸಲಾಗುತ್ತದೆ' ಎಂದು ಅವರು ಹೇಳಿದರು.

DCM DK Shivakumar
ಬೆಂಗಳೂರಿನಲ್ಲಿ 2ನೇ ಏರ್​ಪೋರ್ಟ್: ಸಿಎಂ ಜೊತೆಗೆ ಚರ್ಚಿಸಿ, ಕೇಂದ್ರಕ್ಕೆ ಪ್ರಸ್ತಾವನೆ- ಎಂಬಿ ಪಾಟೀಲ್

ದೆಹಲಿ ಚುನಾವಣೆ: ಎಕ್ಸಿಟ್ ಪೋಲ್‌ಗಳಲ್ಲಿ ನನಗೆ ನಂಬಿಕೆ ಇಲ್ಲ

ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಜಯಭೇರಿ ಬಾರಿಸಲಿದೆ ಎಂದು ಹಲವು ಎಕ್ಸಿಟ್ ಪೋಲ್‌ಗಳು ಭವಿಷ್ಯ ನುಡಿದಿದ್ದು, ಎಕ್ಸಿಟ್ ಪೋಲ್‌ಗಳಲ್ಲಿ ನನಗೆ ನಂಬಿಕೆ ಇಲ್ಲ ಮತ್ತು ಮತದಾರರ ತೀರ್ಪಿಗಾಗಿ ಕಾಯೋಣ ಎಂದು ತಿಳಿಸಿದ್ದಾರೆ.

ಬುಧವಾರ ಹೊರಬಿದ್ದ ಹಲವು ಎಕ್ಸಿಟ್ ಪೋಲ್ ಫಲಿತಾಂಶಗಳು ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಆಡಳಿತಾರೂಢ ಎಎಪಿ ವಿರುದ್ಧ ಬಿಜೆಪಿ ಗೆಲುವು ಸಾಧಿಸಲಿದೆ ಎಂದು ಭವಿಷ್ಯ ನುಡಿದಿವೆ. ಹೀಗಿದ್ದರೂ, ಎರಡು ಎಕ್ಸಿಟ್ ಪೋಲ್‌ಗಳು ದೆಹಲಿಯಲ್ಲಿ ಆಮ್ ಆದ್ಮಿ ಪಕ್ಷ (ಎಎಪಿ) ಗೆಲುವು ಕಾಣಲಿದೆ ಮತ್ತು ಅನೇಕರು ಬಿಜೆಪಿ ಅಭ್ಯರ್ಥಿಗಳೊಂದಿಗೆ ನಿಕಟ ಸ್ಪರ್ಧೆ ಒಡ್ಡಲಿದ್ದಾರೆ ಎಂದು ಹೇಳಲಾಗಿದೆ.

ಫೆಬ್ರುವರಿ 8 ರಂದು ಚುನಾವಣಾ ಫಲಿತಾಂಶ ಹೊರಬೀಳಲಿದೆ. ದೆಹಲಿಯಲ್ಲಿ ಕಾಂಗ್ರೆಸ್ ಪಕ್ಷದ ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿ ಡಿಕೆ ಶಿವಕುಮಾರ್ ಇದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com