
ಬೆಂಗಳೂರು: ಹುಟ್ಟೂರಿನ ಸರ್ಕಾರಿ ಶಾಲೆಯನ್ನು ದತ್ತು ಪಡೆದು, ಹೈಟೆಕ್ ಸ್ಪರ್ಶ ನೀಡಿದ ವಿಧಾನಪರಿಷತ್ ಸದಸ್ಯ ಎನ್.ರವಿಕುಮಾರ್ ಅವರನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಕೊಂಡಾಡಿದ್ದಾರೆ.
ಹುಟ್ಟೂರಾದ ಹುಚ್ಚಂಗಿರ ಗ್ರಾಮದಲ್ಲಿ ಸರ್ಕಾರಿ ಶಾಲೆಯನ್ನು ದತ್ತು ಪಡೆದಿರುವ ರವಿಕುಮಾರ್ ಅವರು, ಶಾಲೆಗೆ ಹೈಟೆಕ್ ಸ್ಪರ್ಶ ನೀಡಿ, ಶಾಲೆಯ ಸ್ಪರೂಪವನ್ನೇ ಬದಲಿಸಿದ್ದಾರೆ. ಈ ಕುರಿತು ದಿನಪತ್ರಿಕೆಯೊಂದು ವರದಿ ಪ್ರಕಟಿಸಿದೆ.
ಈ ವರದಿ ಕುರಿತು ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ವಿಜಯೇಂದ್ರ ಅವರು, ರವಿಕುಮಾರ್ ಅವರನ್ನು ಹಾಡಿ ಹೊಗಳಿದ್ದಾರೆ.
ತಾನು ಎಷ್ಟೇ ಎತ್ತರಕ್ಕೆ ಬೆಳೆದು ನಿಂತರೂ ಹುಟ್ಟಿದೂರು, ಕಲಿಸಿದ ಶಾಲೆ ಎಂಬ ಅಭಿಮಾನ ಮಾತೃ ಬಾಂಧವ್ಯದ ಬೇರಾಗಿರುತ್ತದೆ. ಈ ನಿಟ್ಟಿನಲ್ಲಿ ಅನೇಕರು ತಾವು ಕಲಿತ ಶಾಲೆಯ ಬಗ್ಗೆ ಮಮಕಾರವಿಟ್ಟುಕೊಂಡು ಆ ಶಾಲೆಗಾಗಿ ಕೊಡುಗೆಗಳನ್ನು ಸಮರ್ಪಿಸಿದ ಅನೇಕ ಉದಾಹರಣೆಗಳು ನಮ್ಮ ಕಣ್ಣ ಮುಂದಿವೆ. ಇಂಥದ್ದೇ ಆದರ್ಶತೆ ಮೆರದಿರುವ ಆತ್ಮೀಯರೂ ನಮ್ಮ ಪಕ್ಷದ ಪ್ರಮುಖರು ಹಾಗೂ ವಿಧಾನ ಪರಿಷತ್ತಿನ ಹಿರಿಯ ಸದಸ್ಯರೂ ಆದ ರವಿಕುಮಾರ್ ಅವರು ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿ ಯೋಜನೆಯಡಿ ತಾವು ಓದಿದ ಶಾಲೆಯ ದುಸ್ಥಿತಿಯ ಸ್ವರೂಪವನ್ನು ಸಂಪೂರ್ಣ ಬದಲಿಸಿ ಯಾವ ಖಾಸಗಿ ಶಾಲೆಗೂ ಕಡಿಮೆಯಿಲ್ಲದ ರೀತಿಯಲ್ಲಿ ಕಟ್ಟಡ ನಿರ್ಮಿಸಿ ಆಧುನಿಕ ಸ್ಪರ್ಶನೀಡಿ ದಾವಣಗೆರೆ ಜಿಲ್ಲೆಯ ಜಗಳೂರು ತಾಲ್ಲೂಕಿನ ಹುಚ್ಚಂಗಿಪುರದಲ್ಲಿ ಸರ್ಕಾರಿ ಶಾಲೆಯನ್ನು ನಿರ್ಮಿಸಿ ಲೋಕಾರ್ಪಣೆಗೊಳಿಸುತ್ತಿರುವುದು ನಿಜಕ್ಕೂ ಶ್ಲಾಘನೀಯ ಕಾರ್ಯವಾಗಿದೆ ಎಂದು ಹೇಳಿದ್ದಾರೆ.
ರವಿಕುಮಾರ್ ಅವರು ಮೊದಲಿನಿಂದಲೂ ಸಮಾಜ ಹಾಗೂ ಶಿಕ್ಷಣ ಬದ್ಧತೆಯನ್ನಿಟ್ಟುಕೊಂಡು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಸಂಘಟನೆಯಲ್ಲಿ ಹೆಜ್ಜೆ ಗುರುತುಗಳನ್ನು ಮೂಡಿಸಿದ್ದಾರೆ, ಸದ್ಯ ತಮಗೆ ಜನ್ಮಕೊಟ್ಟ ತವರಿನ ಪ್ರೇಮ, ಶಿಕ್ಷಣ ಕಟ್ಟುವ ಕಾಯಕವನ್ನು ಸಾರ್ಥಕವಾಗಿ ದಾಖಲಿಸಿದ್ದಾರೆ. ರವಿಕುಮಾರ್ ಅವರ ಈ ಕಾರ್ಯ ಅನೇಕರಿಗೆ ಪ್ರೇರಣೆಯಾಗಲಿದೆ. ನಮ್ಮ ಗ್ರಾಮೀಣ ಪ್ರದೇಶದ ಸರ್ಕಾರಿ ಶಾಲೆಗಳೆಲ್ಲವೂ ಆಧುನಿಕ ಸ್ಪರ್ಶ ಪಡೆದುಕೊಂಡು ಮೂಲಭೂತ ಸೌಕರ್ಯಗಳನ್ನು ಹೊಂದುವಂತಾಗಲು ಆ ಶಾಲೆಗಳ ಹಳೆಯ ವಿದ್ಯಾರ್ಥಿಗಳೆಲ್ಲರೂ ಕೈ ಜೋಡಿಸಿದರೆ ನಗರ ಹಾಗೂ ಗ್ರಾಮಾಂತರದ ಅಂತರವಿಲ್ಲದೇ ನಮ್ಮ ಶಿಕ್ಷಣ ವ್ಯವಸ್ಥೆ ಗುಣಮಟ್ಟದಲ್ಲಿ ಜಾಗತಿಕ ಸಾಧನೆ ಮಾಡುವುದರಲ್ಲಿ ಯಾವುದೇ ಅನುಮಾನವಿಲ್ಲ, ಈ ನಿಟ್ಟಿನಲ್ಲಿ ಸಮರ್ಪಿತ ಮನಸ್ಸುಗಳು ರವಿಕುಮಾರ್ ರವರ ಮಾದರಿ ಅನುಸರಿಸಬೇಕಿದೆ ಎಂದು ತಿಳಿಸಿದ್ದಾರೆ.
Advertisement