ಮೈಕ್ರೋ ಫೈನಾನ್ಸ್ ಸಂಸ್ಥೆಗಳ ಕಿರುಕುಳದಿಂದ 30 ಜನರು ಆತ್ಮಹತ್ಯೆ: ಆರ್.ಅಶೋಕ್

ಮಂಡ್ಯದ ಕೊನ್ನಾಪುರ ಗ್ರಾಮದಲ್ಲಿ ಮೈಕ್ರೋ ಫೈನಾನ್ಸ್‌ ಕಿರುಕುಳದಿಂದ ಆತ್ಮಹತ್ಯೆಗೆ ಶರಣಾದ ತಾಯಿ ಮತ್ತು ಮಗನ ಮನೆಗೆ ಗುರುವಾರ ಭೇಟಿ ನೀಡಿದ ಅಶೋಕ್ ಅವರು, ಕುಟುಂಬಕ್ಕೆ ಸಾಂತ್ವನ ಹೇಳಿದರು.
BJP leader R Ashoka meets the family of the woman and her son who died by suicide due to harassment from a microfinance firm, in Malavlli taluk on Thursday.
ಮೈಕ್ರೋಫೈನಾನ್ಸ್ ಸಂಸ್ಥೆಯ ಕಿರುಕುಳದಿಂದ ಆತ್ಮಹತ್ಯೆ ಮಾಡಿಕೊಂಡ ಮಹಿಳೆ ಮತ್ತು ಆಕೆಯ ಮಗನ ಕುಟುಂಬವನ್ನು ಭೇಟಿ ಮಾಡಿ ಬಿಜೆಪಿ ನಾಯಕ ಆರ್. ಅಶೋಕ್.
Updated on

ಮೈಸೂರು: ಮೈಕ್ರೋ ಫೈನಾನ್ಸ್ ಸಂಸ್ಥೆಗಳ ಕಿರುಕುಳದಿಂದ 1 ಲಕ್ಷ ಜನರು ಗ್ರಾಮಗಳ ತೊರೆದಿದ್ದು, 30 ಮಂದಿ ಆತ್ಮಹತ್ಯೆಗೆ ಶರಣಾಗಿದ್ದಾರೆಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಗುರುವಾರ ಹೇಳಿದರು.

ಮಂಡ್ಯದ ಕೊನ್ನಾಪುರ ಗ್ರಾಮದಲ್ಲಿ ಮೈಕ್ರೋ ಫೈನಾನ್ಸ್‌ ಕಿರುಕುಳದಿಂದ ಆತ್ಮಹತ್ಯೆಗೆ ಶರಣಾದ ತಾಯಿ ಮತ್ತು ಮಗನ ಮನೆಗೆ ಗುರುವಾರ ಭೇಟಿ ನೀಡಿದ ಅಶೋಕ್ ಅವರು, ಕುಟುಂಬಕ್ಕೆ ಸಾಂತ್ವನ ಹೇಳಿದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಸುಗ್ರೀವಾಜ್ಞೆ ತರುತ್ತೇವೆಂದು ಹೇಳಿ ಒಂದು ತಿಂಗಳು ಕಳೆದಿದೆ. ಮಂಡ್ಯ ಜಿಲ್ಲೆಯಲ್ಲಿ ದಲಿತರ ಪ್ರದೇಶದಲ್ಲಿ 6 ಮಂದಿ ಊರು ಬಿಟ್ಟು ಹೋಗಿದ್ದಾರೆ. ರಾಜ್ಯದಲ್ಲಿ ಲಕ್ಷಾಂತರ ಜನರು ಗ್ರಾಮ ತೊರೆದಿದ್ದಾರೆ. 30 ಮಂದಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಸರ್ಕಾರ ಸುಗ್ರೀವಾಜ್ಞೆ ತರಲಿಲ್ಲ ಎಂದರೆ, ಈ ಸಾವುಗಳು ನಿಲ್ಲುವುದಿಲ್ಲ ಎಂದು ಹೇಳಿದರು.

ಕೊನ್ನಾಪುರದಲ್ಲಿ ತಾಯಿ ಪ್ರೇಮಾ ಮತ್ತು ಮಗ ರಂಜಿತ್‌ ಮೈಕ್ರೋ ಫೈನಾನ್ಸ್‌ನ ಸಾಲ ತೀರಿಸಲಾಗದೆ ಕೊನ್ನಾಪುರ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬಡವರ ಪರ ಎಂದು ಹೇಳುವ ಸಿಎಂ ಸಿದ್ದರಾಮಯ್ಯನವರಿಗೆ ಕಣ್ಣಿಲ್ಲ. ಕೊನ್ನಾಪುರ ಗ್ರಾಮದಲ್ಲಿ ಚಾಮುಂಡೇಶ್ವರಿ, ನವಚೇತನ, ಸೂರ್ಯೋದಯ, ಯುನಿಟಿ, ಪ್ರಗತಿ ಸೇರಿದಂತೆ 24 ಮೈಕ್ರೋ ಫೈನಾನ್ಸ್‌ಗಳು ಈ ಹಳ್ಳಿಗೆ ಬಂದು ವರ್ಷಕ್ಕೆ ಶೇ.12 ರಂತೆ ಸಾಲ ನೀಡಿವೆ. ಒಬ್ಬರಿಗೆ 9 ಜನರು ಶೂರಿಟಿ ನೀಡಿದ್ದಾರೆ.

ಒಬ್ಬರು ಸಾಲ ಮರುಪಾವತಿ ಮಾಡಿಲ್ಲವೆಂದರೆ ಉಳಿದವರು ಹೊಣೆಯಾಗುತ್ತಾರೆ. ಸಾಲ ಕಟ್ಟದೆ ಮಾನ ಹೋದಾಗ ನೊಂದವರು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಪೊಲೀಸರು ಕೂಡ ಇಲ್ಲಿ ಮೈಕ್ರೋ ಫೈನಾನ್ಸ್‌ಗೆ ಬೆಂಬಲ ನೀಡಿದ್ದಾರೆ. ಮನೆ ವಶಕ್ಕೆ ಪಡೆಯುವ ಸಮಯದಲ್ಲಿ ಪೊಲೀಸರು ಕುಟುಂಬದ ಸದಸ್ಯರನ್ನು ಎಳೆದು ಹೊರಗೆ ಹಾಕಿದ್ದಾರೆ ಎಂದು ವ್ಯಕ್ತಪಡಿಸಿದರು.

BJP leader R Ashoka meets the family of the woman and her son who died by suicide due to harassment from a microfinance firm, in Malavlli taluk on Thursday.
ಮೈಕ್ರೋ ಫೈನಾನ್ಸ್ ಕಿರುಕುಳ: ರಾಜ್ಯಪಾಲರು ಸೂಚಿಸಿದರೆ ಬದಲಾವಣೆ ಮಾಡ್ತೀವಿ- ಡಾ. ಜಿ.ಪರಮೇಶ್ವರ್

ಮಂಡ್ಯದಲ್ಲಿ 60 ಮೈಕ್ರೋ ಫೈನಾನ್ಸ್‌ಗಳಿದ್ದು, ಕೇವಲ 18 ಮಾತ್ರ ಅಧಿಕೃತವಾಗಿವೆ. ಉಳಿದವುಗಳಲ್ಲಿ ರೌಡಿಗಳಿದ್ದಾರೆ. ತಹಶೀಲ್ದಾರ್‌ ಹಾಗೂ ಪೊಲೀಸರು ಎಲ್ಲಾ ಹಳ್ಳಿಗೂ ಹೋಗಿ ಕ್ರಮ ಕೈಗೊಳ್ಳಬೇಕಿತ್ತು. ಈ ಸಾವುಗಳಿಗೆ ನ್ಯಾಯ ನೀಡಲು ನ್ಯಾಯಾಧೀಶರ ನೇತೃತ್ವದಲ್ಲಿ ನ್ಯಾಯಾಂಗ ತನಿಖೆ ಮಾಡಬೇಕು. ಅನಧಿಕೃತ ಮೈಕ್ರೋ ಫೈನಾನ್ಸ್‌ಗಳನ್ನು ಪತ್ತೆ ಮಾಡಿ ಕ್ರಮ ವಹಿಸಬೇಕು ಎಂದು ಒತ್ತಾಯಿಸಿದರು.

ಈ ನಡುವೆ ಯಾವುದೇ ಸಚಿವರು ತಮ್ಮನ್ನು ಭೇಟಿ ಮಾಡಿಲ್ಲ ಎಂದು ಕುಟುಂಬವು ಹೇಳಿಕೊಂಡಿದ್ದು, ನಮ್ಮ ಸಂಬಂಧಿಕರ ಸಹಾಯದಿಂದ ನಾವು ಜೀವಂತವಾಗಿದ್ದೇವೆ. ನಮಗೆ ಯಾವುದೇ ಬೆಂಬಲವಿಲ್ಲವಾದ್ದರಿಂದ ಮುಂದಿನ ಜೀವನದ ಬಗ್ಗೆ ಏನೂ ತಿಳಿಯದಂತಾಗಿದೆ ಎಂದು ಮಾಣಿಕ್ಯ ಎಂಬುವವರು ಹೇಳಿದ್ದಾರೆ.

ಈ ವೇಳೆ ಕುಟುಂಬಕ್ಕೆ ಬೆಂಬಲವಾಗಿ ನಿಂತು ಸರ್ಕಾರದ ಮೇಲೆ ಒತ್ತಡ ಹೇರುವುದಾಗಿ ಅಶೋಕ್ ಅವರು ಭರವಸೆ ನೀಡಿದರು.

ಬಳಿಕ ಜಿಲ್ಲಾಧಿಕಾರಿ ಕುಮಾರ್ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿದ ಅವರು, ಮನೆ ವಶಪಡಿಸಿಕೊಂಡ ಸಂದರ್ಭದಲ್ಲಿ ಸ್ಥಳೀಯ ಪೊಲೀಸರ ವರ್ತನೆಯನ್ನು ಖಂಡಿಸಿದರು.

ನ್ಯಾಯಾಲಯದ ಆದೇಶಗಳನ್ನು ಜಾರಿಗೊಳಿಸುವ ನೆಪದಲ್ಲಿ ಕುಟುಂಬ ಸದಸ್ಯರನ್ನು ಮನೆಯಿಂದ ಹೊರಗೆಳೆದ ಮಹಿಳಾ ಪೊಲೀಸ್ ಸಿಬ್ಬಂದಿಯನ್ನು ಅಮಾನತುಗೊಳಿಸುವಂತೆಯೂ ಒತ್ತಾಯಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com