ಬೆಂಗಳೂರಿನ ನಮ್ಮ ಮೆಟ್ರೋ ಪ್ರಯಾಣ ದರ ಕೊನೆಗೂ ಏರಿಕೆಯಾಗಿದ್ದು ಈ ಬಗ್ಗೆ BMRCL ಅಧಿಕೃತ ಆದೇಶ ಪ್ರಕಟಿಸಿದೆ. ಪ್ರಯಾಣ ದರ ಶೇ.50ರಷ್ಟು ಏರಿಕೆ ಮಾಡಲಾಗಿದ್ದು ನಾಳೆಯಿಂದಲೇ ಜಾರಿಯಾಗಲಿದೆ. ಇನ್ಮುಂದೆ ಪ್ರಯಾಣ ದರ ಕನಿಷ್ಠ 10 ರೂನಿಂದ 90 ರೂಪಾಯಿವರೆಗೆ ಇರಲಿದೆ. 8 ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಪ್ರಯಾಣ ದರ ಏರಿಕೆಯಾಗಿದೆ. 2017ರಲ್ಲಿ ಶೇಕದ 10ರಿಂದ 15ರಷ್ಟು ಮೆಟ್ರೋ ಪ್ರಯಾಣ ದರ ಏರಿಕೆ ಮಾಡಲಾಗಿತ್ತು. ಮೆಟ್ರೋ ಕಾಮಗಾರಿಗಾಗಿ ಸಾಲದ ಮೇಲಿನ ಬಡ್ಡಿ, ಕಾರ್ಯಾಚರಣೆ ವೆಚ್ಚ, ನಿರ್ವಹಣೆ ಮತ್ತು ಸಿಬ್ಬಂದಿ ವೇತನ ಮತ್ತಿತರ ವಿವಿಧ ವೆಚ್ಚ ಪ್ರತಿ ವರ್ಷ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ದರ ಏರಿಕೆ ಅನಿವಾರ್ಯ ಎಂದು ಎಂದು ಅಧಿಕಾರಿಗಳು ಹೇಳಿದ್ದರು.
ತೀವ್ರ ಕುತೂಹಲ ಕೆರಳಿಸಿದ್ದ ದೆಹಲಿ ವಿಧಾನಸಭೆ ಚುನಾವಣೆ ಫಲಿತಾಂಶ ಹೊರಬಿದ್ದಿದೆ. 27 ವರ್ಷಗಳ ಬಳಿಕ ಬಿಜೆಪಿ ಮತ್ತೆ ದೆಹಲಿ ಗದ್ದುಗೆ ಹಿಡಿದಿದ್ದು 70 ಕ್ಷೇತ್ರಗಳ ಪೈಕಿ 48 ಕ್ಷೇತ್ರಗಳಲ್ಲಿ ಬಿಜೆಪಿ ಗೆದ್ದಿದೆ. ಇನ್ನು ಆಡಳಿತ ವಿರೋಧಿ ಅಲೆ ಎದುರಿಸುತ್ತಿದ್ದ ಎಎಪಿ 22 ಕ್ಷೇತ್ರಗಳಿಗೆ ತೃಪ್ತಿಪಟ್ಟುಕೊಂಡಿದೆ. ಆದರೆ ಕಾಂಗ್ರೆಸ್ ಮೂರನೇ ಬಾರಿಗೆ ಒಂದೂ ಕ್ಷೇತ್ರವನ್ನೂ ಗೆಲ್ಲದೆ ದಾಖಲೆ ಮಾಡಿದೆ. ದೆಹಲಿ ಚುನಾವಣೆಯಲ್ಲಿ ಈ ಬಾರಿ ಘಟಾನುಘಟಿ ನಾಯಕರಾದ ಮಾಜಿ ಸಿಎಂ ಅರವಿಂದ್ ಕೇಜ್ರಿವಾಲ್, ಮನೀಶ್ ಸಿಸೋಡಿಯಾ, ಸತ್ಯೇಂದ್ರ ಜೈನ್, ಸೋಮನಾಥ್ ಭಾರತೀ ಸೋಲು ಕಂಡಿದ್ದಾರೆ. ದೆಹಲಿಯಲ್ಲಿ ಬಿಜೆಪಿ ಗೆಲ್ಲುತ್ತಿದ್ದಂತೆಯೇ ಇತ್ತ ರಾಜ್ಯದಲ್ಲಿ ಸಂಭ್ರಮ ಮನೆ ಮಾಡಿತ್ತು. ಈ ವೇಳೆ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ, ಅರವಿಂದ ಕೇಜ್ರಿವಾಲ್ ವಿರುದ್ಧ ಕಿಡಿಕಾರಿದರು. ಭ್ರಷ್ಟ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಮುಖವಾಡ ಕಳಚಿದೆ. ಆಮ್ ಆದ್ಮಿ ಪಕ್ಷದ ಬಣ್ಣ ಬಯಲಾಗಿದೆ ಎಂದು ಹೇಳಿದರು.
ಬೆಂಗಳೂರಿನ ಎರಡನೇ ವಿಮಾನ ನಿಲ್ದಾಣಕ್ಕಾಗಿ ಎರಡು ಸ್ಥಳಗಳನ್ನು ಶಾರ್ಟ್‌ಲಿಸ್ಟ್ ಮಾಡಲಾಗಿದೆ ಮತ್ತು ಫೆಬ್ರವರಿ 17 ಕ್ಕೆ ಮುಂಚಿತವಾಗಿ ಪ್ರಸ್ತಾವನೆಯನ್ನು ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರಕ್ಕೆ ಕಳುಹಿಸಲಾಗುವುದು ಎಂದು ಕರ್ನಾಟಕದ ಮೂಲಸೌಕರ್ಯ ಸಚಿವ ಎಂ ಬಿ ಪಾಟೀಲ್ ಶನಿವಾರ ತಿಳಿಸಿದ್ದಾರೆ. ಸ್ಥಳ ಆಯ್ಕೆಯು ಅರ್ಹತೆಯನ್ನು ಆಧರಿಸಿರುತ್ತದೆ ಮತ್ತು ಅದು ರಾಜಕೀಯ ನಿರ್ಧಾರವಾಗಿರುವುದಿಲ್ಲ ಎಂದು ಸಚಿವರು ಸ್ಪಷ್ಟಪಡಿಸಿದರು. ವರದಿಗಳ ಪ್ರಕಾರ, ಬೆಂಗಳೂರಿನ ಎರಡನೇ ವಿಮಾನ ನಿಲ್ದಾಣಕ್ಕೆ ಸಂಭಾವ್ಯ ಸ್ಥಳಗಳಾಗಿ ನೆಲಮಂಗಲ ಮತ್ತು ಕನಕಪುರ ರಸ್ತೆಯನ್ನು ರಾಜ್ಯ ಸರ್ಕಾರ ಶಾರ್ಟ್‌ಲಿಸ್ಟ್ ಮಾಡಿದೆ ಎಂದು ಹೇಳಲಾಗುತ್ತಿದೆ.
ಪ್ರೀತಿ ಮಾಡದಂತೆ ಎಚ್ಚರಿಸಿದರೂ ಕೇಳದ ಮಗಳನ್ನು ತಂದೆಯೇ ದೊಣ್ಣೆಯಿಂದ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಬೀದರ್ ಜಿಲ್ಲೆಯ ಔರಾದ್ ನ ಬರಗೇನ್ ತಾಂಡಾದಲ್ಲಿ ನಡೆದಿದೆ. ತನ್ನ ಮಾತು ಕೇಳಲಿಲ್ಲ ಎಂಬ ಕಾರಣಕ್ಕೆ 18 ವರ್ಷದ ಮೋನಿಕಾಳನ್ನು ತನ್ನ ತಂದೆ ಮೋತಿರಾಮ ದೊಣ್ಣೆಯಿಂದ ಹೊಡೆದು ಹತ್ಯೆ ಮಾಡಿದ್ದಾನೆ. ಘಟನೆಯ ನಂತರ ಮೋತಿರಾಮ ತಲೆಮರೆಸಿಕೊಂಡಿದ್ದಾನೆ. ಹೊರಗೆ ಹೋಗಿದ್ದ ತಾಯಿ ಮನೆಗೆ ಬಂದು ನೋಡಿದಾಗ ಮಗಳು ತೀವ್ರ ರಕ್ತಸ್ರಾವದಿಂದ ಮೃತಪಟ್ಟಿರುವುದು ಗೊತ್ತಾಗಿದೆ.
ಉತ್ತರಪ್ರದೇಶದ ಆಗ್ರಾದಲ್ಲಿ ಪ್ಯಾರಾಚೂಟ್ ತರಬೇತಿ ವ್ಯಾಯಾಮ ಸಮಯದಲ್ಲಿ ಕರ್ನಾಟಕದ ಹೊಸನಗರ ಮೂಲದ ಭಾರತೀಯ ವಾಯುಪಡೆಯ ಯೋಧ ಮಂಜುನಾಥ್ ಸಾವನ್ನಪ್ಪಿದ್ದಾರೆ ಎಂದು ವಾಯುಪಡೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ವಿಂಗ್ ಕಮಾಂಡರ್ ರೋಹಿತ್ ದಹಿಯಾ ನೇತೃತ್ವದಲ್ಲಿ 12 ತರಬೇತಿ ಜಿಗಿತಗಾರರು ಮಾಲ್ಪುರ ಪ್ಯಾರಾಚೂಟ್ ಡ್ರಾಪ್ ವಲಯದಲ್ಲಿ ವ್ಯಾಯಾಮ ಮಾಡುತ್ತಿದ್ದಾಗ ಪ್ಯಾರಾಚೂಟ್ ತೆರೆಯಲು ವಿಫಲವಾದ ಕಾರಣ ನೆಲಕ್ಕಪ್ಪಳಿಸಿ ಯೋಧ ಮಂಜುನಾಥ್ ಸಾವನ್ನಪ್ಪಿದ್ದಾರೆ.
ಉಡಾನ್ ಯೋಜನೆಯಡಿ 5 ಹೊಸ ಮಿನಿ ಏರ್‌ಪೋರ್ಟ್ ನಿರ್ಮಾಣಕ್ಕೆ ರಾಜ್ಯದಲ್ಲಿ ಸ್ಥಳಗಳನ್ನು ನಾಗರಿಕ ವಿಮಾನಯಾನ ಸಚಿವಾಲಯವು ಗುರುತಿಸಿದೆ. ಲೋಕಸಭೆಯಲ್ಲಿ ಶುಕ್ರವಾರ ಸಂಸದ ಬಸವರಾಜ್ ಬೊಮ್ಮಾಯಿ ಪ್ರಶ್ನೆಗೆ ಉತ್ತರಿಸಿದ ನಾಗರಿಕ ವಿಮಾನಯಾನ ರಾಜ್ಯ ಸಚಿವ ಮುರಳೀಧರ್ ಮೊಹಲ್ ಅವರು. ಉಡಾನ್ ಯೋಜನೆಯಡಿ ಏರ್‌ಸ್ಟ್ರಿಪ್ಸ್ ನಿರ್ಮಾಣಕ್ಕೆ ಬಳ್ಳಾರಿ, ಕೋಲಾರ, ಕುಶಾಲನಗರ, ರಾಯಚೂರು ಹಾಗೂ ಹಾಸನವನ್ನು ತಾತ್ಕಾಲಿಕವಾಗಿ ಗುರುತಿಸಲಾಗಿದೆ. ಬೀದರ್, ಮೈಸೂರು, ವಿದ್ಯಾನಗರ, ಹುಬ್ಬಳ್ಳಿ, ಕಲಬುರಗಿ, ಬೆಳಗಾವಿ, ಶಿವಮೊಗ್ಗ ವಿಮಾನ ನಿಲ್ದಾಣಗಳಲ್ಲಿ ಈಗಾಗಲೇ ವಿಮಾನಗಳ ಹಾರಾಟ ಪ್ರಕ್ರಿಯೆ ಮುಂದುವರಿದಿದೆ. ವಿಜಯಪುರ ಹಾಗೂ ಕಾರವಾರದಲ್ಲಿ ಇನ್ನಷ್ಟೇ ವಿಮಾನ ನಿಲ್ದಾಣ ನಿರ್ಮಾಣ ಕಾರ್ಯ ಆರಂಭವಾಗಬೇಕಿದೆ ಎಂದರು.
Advertisement