
ಬೆಂಗಳೂರು: ನಗರದ ಯಲಹಂಕ ವಾಯುನೆಲೆಯಲ್ಲಿ ಫೆಬ್ರವರಿ 10 ರಿಂದ 14 ರವರೆಗೆ ನಡೆಯಲಿರುವ ಏಷ್ಯಾದ ಅತಿದೊಡ್ಡ ಏರೋಸ್ಪೇಸ್ ಪ್ರದರ್ಶನವಾದ ಏರೋ ಇಂಡಿಯಾ 2025 ಕ್ಕೆ ವೇದಿಕೆ ಸಿದ್ಧವಾಗಿದೆ. ದ್ವೈವಾರ್ಷಿಕವಾಗಿ ನಡೆಯುವ 15 ನೇ ಆವೃತ್ತಿಯ ಏರೋ ಇಂಡಿಯಾ ಶೋನಲ್ಲಿ ಇತ್ತೀಚಿನ ಅತ್ಯಾಧುನಿಕ ವೈಮಾನಿಕ ತಂತ್ರಜ್ಞಾನವು ಅನಾವರಣಗೊಳ್ಳಲಿದೆ.
ಇದರ ಪೂರ್ವಭಾವಿಯಾಗಿ ಏರ್ ಚೀಫ್ ಮಾರ್ಷಲ್ ಎಪಿ ಸಿಂಗ್ ಮತ್ತು ಸೇನಾ ಮುಖ್ಯಸ್ಥ ಜನರಲ್ ಉಪೇಂದ್ರ ದ್ವಿವೇದಿ ಅವರು ಭಾನುವಾರ ಯಲಹಂಕದ ವಾಯುನೆಲೆಯಲ್ಲಿ ಲಘು ಯುದ್ಧ ವಿಮಾನ (ಎಲ್‌ಸಿಎ) ತೇಜಸ್‌ನಲ್ಲಿ ಹಾರಾಟ ನಡೆಸಿದರು.
ಏರ್ ಚೀಫ್ ಮಾರ್ಷಲ್ ಅವರು ಸೇನಾ ಮುಖ್ಯಸ್ಥರೊಂದಿಗೆ ಲೋಹದ ಹಕ್ಕಿಯನ್ನು ಹಾರಿಸುತ್ತಿದ್ದಂತೆ ಎಲ್ಲರ ಕಣ್ಣುಗಳು ಆಕಾಶದತ್ತ ನೆಟ್ಟಿದವು. ಯಶಸ್ವಿ ಹಾರಾಟದ ನಂತರ ಜನರಲ್ ದ್ವಿವೇದಿ, ಇದು ತಮ್ಮ ಜೀವನದ ಅತ್ಯುತ್ತಮ ಕ್ಷಣ ಎಂದು ಬಣ್ಣಿಸಿದರು.
ಏರ್ ಚೀಪ್ ಮಾರ್ಷಲ್ ಎಪಿ ಸಿಂಗ್ ನನ್ನ ಗುರುಗಳು. ಹಾರಾಟದ ಸಂದರ್ಭದಲ್ಲಿ ಸಾಕಷ್ಟು ಕಲಿಸಿದ್ದಾರೆ. ರಾಷ್ಟ್ರೀಯ ರಕ್ಷಣಾ ಅಕಾಡೆಮಿ ದಿನಗಳಿಂದಲೂ ನಾವಿಬ್ಬರು ಒಟ್ಟಾಗಿದ್ದೇವೆ. ನಾನು ವಾಯುಪಡೆಗೆ ಹೋಗಿದ್ದರೆ ಯುದ್ಧ ವಿಮಾನ ಪೈಲಟ್ ಆಗುತ್ತಿದ್ದೆ ಎಂದು ಜನರಲ್ ದ್ವಿವೇದಿ ಸುದ್ದಿಗಾರರಿಗೆ ತಿಳಿಸಿದರು.
LCA ತೇಜಸ್ ಭಾರತೀಯ ಯುದ್ಧ ವಿಮಾನವಾಗಿದ್ದು, ಭಾರತೀಯ ವಾಯುಪಡೆ (ಐಎಎಫ್) ಮತ್ತು ಭಾರತೀಯ ನೌಕಾಪಡೆಗಾಗಿ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್‌ಎಎಲ್) ತಯಾರಿಸಿದೆ.
Advertisement