
ಬೆಂಗಳೂರು: 'ಪ್ರಗತಿಯ ಮರು ಕಲ್ಪನೆ' ಥೀಮ್ ನೊಂದಿಗೆ ಫೆಬ್ರವರಿ 12 ರಿಂದ 14ರವರೆಗೂ ಬೆಂಗಳೂರಿನಲ್ಲಿ ನಡೆಯಲಿರುವ ಜಾಗತಿಕ ಹೂಡಿಕೆದಾರರ ಸಮಾವೇಶಕ್ಕೆ ರಾಜ್ಯ ಸರ್ಕಾರ ಸಜ್ಜಾಗಿದೆ. ಸಮರ್ಥ, ಸಮಗ್ರ, ಸದೃಢ ಹಾಗೂ ತಂತ್ರಜ್ಞಾನ ಆಧಾರಿತ ಭವಿಷ್ಯವನ್ನು ಮರುಕಲ್ಪಿಸುವ ಸಲುವಾಗಿ ಜಾಗತಿಕ ಕೈಗಾರಿಕಾ ಪ್ರವರ್ತಕರೆಲ್ಲರೂ ಸಮಾವೇಶದಲ್ಲಿ ಪಾಲ್ಗೊಳ್ಳುವ ತಾಣ ಇದಾಗಿದೆ. ಆವಿಷ್ಕಾರ, ಕೈಗಾರಿಕಾ ಬೆಳವಣಿಗೆ ಮತ್ತು ಜಾಗತಿಕ ಪಾಲುದಾರಿಕೆಯನ್ನು ಉತ್ತೇಜಿಸುವಲ್ಲಿ ಕರ್ನಾಟಕದ ಅನುಕೂಲವನ್ನು ತೋರಿಸುವುದು ಈ ಸಮಾವೇಶದಲ್ಲಿ ಪ್ರಮುಖ ಗುರಿಯಾಗಿದೆ.
ಇದರಲ್ಲಿ 10 ಲಕ್ಷ ಕೋಟಿ ರೂ. ಮೊತ್ತದ ಹೂಡಿಕೆ ಪ್ರಸ್ತಾಪಗಳನ್ನು ಆಕರ್ಷಿಸುವ ಮತ್ತು ಸುಮಾರು 19 ದೇಶಗಳು ಭಾಗವಹಿಸುವ ನಿರೀಕ್ಷೆಯಿದೆ. 75 ಕ್ಕೂ ಹೆಚ್ಚು ಮಳಿಗೆಗಳು, 25 ಕ್ಕೂ ಹೆಚ್ಚು ತಾಂತ್ರಿಕ ಸೆಷನ್‌ಗಳು, 10 ಕ್ಕೂ ಹೆಚ್ಚು ದೇಶದ ಸೆಷನ್ಸ್ ಮತ್ತು SME ಸಂಪರ್ಕ ಚರ್ಚೆಗಳನ್ನು ಒಳಗೊಂಡಿರುವ ಸಮಾವೇಶವು, ಜಾಗತಿಕ ಆರ್ಥಿಕ ಪ್ರವೃತ್ತಿಗಳು, ಉದಯೋನ್ಮುಖ ತಂತ್ರಜ್ಞಾನಗಳು ಮತ್ತು ಸ್ಥಿತಿಸ್ಥಾಪಕ ತಂತ್ರಗಳ ಬಗ್ಗೆ ಆಳವಾದ ಒಳನೋಟಗಳನ್ನು ನೀಡುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರ ಸಮ್ಮುಖದಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಸಮಾವೇಶ ಉದ್ಘಾಟಿಸಲಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಕರ್ನಾಟಕ ಬೃಹತ್ ಮತ್ತು ಮಧ್ಯಮ ಕೈಗಾರಿಕೆಗಳ ಸಚಿವ ಎಂ ಬಿ ಪಾಟೀಲ್ ಹೇಳಿದ್ದಾರೆ. ಅಲ್ಲದೇ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು 'ಪರಿಷ್ಕೃತ ಏಕ ಗವಾಕ್ಷಿ ವ್ಯವಸ್ಥೆಗೆ ಚಾಲನೆ ನೀಡಲಿದ್ದು, ರಾಜ್ಯದ ಹೊಸ ಕೈಗಾರಿಕಾ ನೀತಿ 2025-30 ಬಿಡುಗಡೆ ಮಾಡಲಾಗುತ್ತಿದೆ.
ಕೇಂದ್ರ ಸಚಿವರಾದ ನಿರ್ಮಲಾ ಸೀತಾರಾಮನ್, ಪಿಯೂಷ್ ಗೋಯೆಲ್, ಅಶ್ವಿನಿ ವೈಷ್ಣವ್, ಶೋಭಾ ಕರಂದ್ಲಾಜೆ, ಪ್ರಲ್ಹಾದ್ ಜೋಶಿ, ವಿ. ಸೋಮಣ್ಣ, ಹೆಚ್.ಡಿ. ಕುಮಾರಸ್ವಾಮಿ ಸಮಾವೇಶದಲ್ಲಿ ಪಾಲ್ಗೊಳ್ಳುವುದಾಗಿ ಖಚಿತಪಡಿಸಿದ್ದಾರೆ. ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಳ್ಳುವರು ಎಂದು ಎಂಬಿ ಪಾಟೀಲ್ ತಿಳಿಸಿದರು.
ಸಮಾವೇಶದಲ್ಲಿ ನವೀಕರಿಸಬಹುದಾದ ಇಂಧನ, ವಿಶ್ವವಿದ್ಯಾನಿಲಯ ಸಹಯೋಗ ಮತ್ತು ಆರೋಗ್ಯ ರಕ್ಷಣೆಯ ಆವಿಷ್ಕಾರಗಳತ್ತ ಚರ್ಚೆ ನಡೆಯಲಿದ್ದು, ಜಾಗತಿಕ ಕೈಗಾರಿಕೆಗಳ ಭವಿಷ್ಯವನ್ನು ರೂಪಿಸುವಲ್ಲಿ ಕರ್ನಾಟಕದ ಪಾತ್ರವನ್ನು ಬಲಪಡಿಸುತ್ತದೆ. ಆನಂದ್ ಮಹೀಂದ್ರಾ, ಸಜ್ಜನ್ ಜಿಂದಾಲ್, ಶಶಿ ತರೂರ್, ಸೆಬಾಸ್ಟಿಯನ್ ಥ್ರೂನ್, ಆನ್ ಡಂಕಿನ್, ನಿಖಿಲ್ ಕಾಮತ್, ಕಿರಣ್ ರಾವ್, ಗೀತಾಂಜಲಿ ಕಿರ್ಲೋಸ್ಕರ್, ಕಿರಣ್ ಮಜುಂದಾರ್-ಶಾ, ವಿವೇಕ್ ಲಾಲ್, ಸುದರ್ಶನ್ ವೇಣು ಮತ್ತಿತರರು ಭಾಷಣ ಮಾಡಲಿದ್ದಾರೆ ಎಂದು ಅವರು ಹೇಳಿದರು.
ಸಮಾವೇಶದಲ್ಲಿ ಹುಬ್ಬಳ್ಳಿ ವಿಮಾನ ನಿಲ್ದಾಣದ ಬಳಿ 200 ಎಕರೆ ವಿಸ್ತೀರ್ಣದ ಸ್ಟಾರ್ಟ್‌ಅಪ್ ಪಾರ್ಕ್ ಮತ್ತು ವಿಜಯಪುರ ಜಿಲ್ಲೆಯ ತಿಡಗುಂದಿಯಲ್ಲಿ 1,200 ಎಕರೆ ವಿಸ್ತೀರ್ಣದ ಸೋಲಾರ್ ಸೆಲ್ ಉತ್ಪಾದನೆ ಮತ್ತು ಆಗ್ರೋಟೆಕ್ ಪಾರ್ಕ್‌ನ ಘೋಷಣೆ ಮಾಡಲಾಗುವುದು, ಸುಮಾರು 60 ಉನ್ನತ-ಗುಣಮಟ್ಟದ ಸ್ಟಾರ್ಟ್‌ಅಪ್‌ಗಳು ಮತ್ತು ಉದ್ಯಮಗಳು ತಮ್ಮ ಆವಿಷ್ಕಾರಗಳನ್ನು ಪ್ರದರ್ಶಿಸುತ್ತಾರೆ. ರಾಜ್ಯದ ಆರ್ಥಿಕಾಭಿವೃದ್ಧಿಯಲ್ಲಿ ಮಹತ್ವದ ಕೊಡುಗೆ ನೀಡಿದ 14 ಪ್ರಮುಖ ಉದ್ಯಮಗಳನ್ನು ಗುರುತಿಸಿ ಇನ್ವೆಸ್ಟ್ ಕರ್ನಾಟಕ ಪ್ರಶಸ್ತಿ ಮತ್ತು 35 ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ SME ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಎಂ.ಬಿ. ಪಾಟೀಲ್ ತಿಳಿಸಿದರು.
Advertisement