
ಬೆಂಗಳೂರು: ನಗರದ ಅರಮನೆ ಆವರಣದಲ್ಲಿ ಆಯೋಜಿಸಲಾಗಿರುವ Invest Karnataka 2025 ಜಾಗತಿಕ ಹೂಡಿಕೆದಾರರ ಸಮಾವೇಶಕ್ಕೆ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮಂಗಳವಾರ ಚಾಲನೆ ನೀಡಿದರು. ಮೂರು ದಿನಗಳ ಸಮಾವೇಶ ಪ್ರತಿಷ್ಠಿತ ಕಂಪನಿಗಳೊಂದಿಗೆ ಹೂಡಿಕೆ ಒಪ್ಪಂದ, ವಿಚಾರ ಸಂಕಿರಣ, ನೀತಿ ಘೋಷಣೆಗೆ ಸಾಕ್ಷಿಯಾಗಲಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್, ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಎಂ. ಬಿ. ಪಾಟೀಲ್, ಕೇಂದ್ರ ಆಹಾರ ಮತ್ತು ನಗರ ಪೂರೈಕೆ ಸಚಿವ ಪ್ರಲ್ಹಾದ್ ಜೋಶಿ, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಮತ್ತಿತರರು ಸಮಾರಂಭದಲ್ಲಿ ಉಪಸ್ಥಿತರಿದ್ದರು.
ಮಹೀಂದ್ರ ಸಮೂಹದ ಮುಖ್ಯಸ್ಥ ಆನಂದ್ ಮಹೀಂದ್ರ, ಜೆಎಸ್ ಡಬ್ಲ್ಯೂ ಗ್ರೂಪ್ ಮುಖ್ಯಸ್ಥ ಸಜ್ಜನ್ ಜಿಂದಾಲ್, ಬಯೋಕಾನ್ ಮುಖ್ಯಸ್ಥೆ ಕಿರಣ್ ಮಜುಂದಾರ್ ಶಾ, ಕಿರ್ಲೋಸ್ಕಾರ್ ಸಿಸ್ಟಮ್ ಮುಖ್ಯಸ್ಥ ಗೀತಾಂಜಲಿ ಕಿರ್ಲೋಸ್ಕರ್, ಹಿರೋ ಪ್ಯೂಚರ್ ಎನರ್ಜಿ ಮುಖ್ಯಸ್ಥ ರಾಹುಲ್ ಮುಂಜಲ್ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.
ನಾವೀನ್ಯತೆ, ಕೈಗಾರಿಕಾ ಅಭಿವೃದ್ಧಿ ಮತ್ತು ಜಾಗತಿಕ ಪಾಲುದಾರಿಕೆ ಉತ್ತೇಜಿಸುವಲ್ಲಿ ಕರ್ನಾಟಕದಲ್ಲಿನ ಕಾರ್ಯತಂತ್ರದ ಅನುಕೂಲಗಳನ್ನು ಎತ್ತಿ ತೋರಿಸುವ ಗುರಿಯನ್ನು ಹೊಂದಿರುವ ಮೂರು ದಿನಗಳ ಜಾಗತಿಕ ಹೂಡಿಕೆದಾರರ ಸಭೆಯು ಫೆಬ್ರವರಿ 14ರವರೆಗೆ ನಡೆಯಲಿದೆ.
'ಪ್ರಗತಿಯ ಮರು ಕಲ್ಪನೆ' ಥೀಮ್ ನೊಂದಿಗೆ ನಡೆಯುತ್ತಿರುವ ಸಮಾವೇಶದಲ್ಲಿ 10 ಲಕ್ಷ ಕೋಟಿ ರೂ. ಮೊತ್ತದ ಹೂಡಿಕೆ ಪ್ರಸ್ತಾಪಗಳನ್ನು ಆಕರ್ಷಿಸುವ ನಿರೀಕ್ಷೆಯಿದೆ.
75 ಕ್ಕೂ ಹೆಚ್ಚು ಮಳಿಗೆಗಳು, 25 ಕ್ಕೂ ಹೆಚ್ಚು ತಾಂತ್ರಿಕ ಸೆಷನ್‌ಗಳು, 10 ಕ್ಕೂ ಹೆಚ್ಚು ದೇಶದ ಸೆಷನ್ಸ್ ಮತ್ತು SME ಸಂಬಂಧಿತ ಚರ್ಚೆಗಳನ್ನು ಒಳಗೊಂಡಿರುವ ಸಮಾವೇಶವು ಜಾಗತಿಕ ಆರ್ಥಿಕ ಪ್ರವೃತ್ತಿಗಳು, ಹೊಸ ತಂತ್ರಜ್ಞಾನಗಳ ಬಗ್ಗೆ ಮಹತ್ವದ ಮಾಹಿತಿ ನೀಡಲಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ತಿಳಿಸಿದ್ದಾರೆ.
Advertisement