
ಬೆಂಗಳೂರು: ನಮ್ಮ ಮೆಟ್ರೋ ಪ್ರಯಾಣ ದರವನ್ನು ಏಕಾಏಕಿ ದುಪ್ಪಟ್ಟು ಹೆಚ್ಚು ಮಾಡಿದ್ದು, ಇದಕ್ಕೆ ಜನರಿಂದ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ.
ದರ ಏರಿಕೆಯಿಂದಾಗಿ ಜನ ರೊಚ್ಚಿಗೆದ್ದಿದ್ದು, ಇಷ್ಟೊಂದು ಹೆಚ್ಚಳ ಮಾಡಿದ್ದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಈ ಮಧ್ಯೆ ಮೆಟ್ರೋ ದರ ಏರಿಕೆ ಖಂಡಿಸಿ ಬಿಜೆಪಿ ಪ್ರತಿಭಟನೆ ನಡೆಸಿದ ಬೆನ್ನಲ್ಲೆ ಕಾಂಗ್ರೆಸ್ ಸಹ ಬುಧವಾರ ಪ್ರತಿಭಟನೆ ನಡೆಸುತ್ತಿದೆ.
ಕೇಂದ್ರ ಸರ್ಕಾರ ರಚಿಸಿರುವ ಸಮಿತಿಯ ಶಿಫಾರಸ್ಸಿನಂತೆ ಮೋದಿ ಸರ್ಕಾರ ಅವೈಜ್ಞಾನಿಕವಾಗಿ ಮೆಟ್ರೋ ದರವನ್ನು ಏರಿಕೆ ಮಾಡಿದೆ ಎಂದು ಕಾಂಗ್ರೆಸ್ ಆರೋಪಿಸಿದೆ. ಅಲ್ಲದೆ ಸತ್ಯವನ್ನು ಮುಚ್ಚಿಟ್ಟು ರಾಜ್ಯ ಬಿಜೆಪಿ ನಾಯಕರು ರಾಜ್ಯ ಸರ್ಕಾರದ ವಿರುದ್ಧ ಬೊಟ್ಟು ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮೆಟ್ರೋ ದರವನ್ನು ಕೇಂದ್ರ ಸರ್ಕಾರ ಏರಿಕೆ ಮಾಡಿದೆ ಎಂದು ಬೆಂಗಳೂರು ಉತ್ತರ ಜಿಲ್ಲಾ ಕಾಂಗ್ರೆಸ್ ಸಮಿತಿ, ಮಹಾಲಕ್ಷ್ಮಿ ಮೆಟ್ರೋ ನಿಲ್ದಾಣದ ಮುಂದೆ ಇಂದು ಪ್ರತಿಭಟನೆ ನಡೆಸಿತು.
ರೋಸ್ ಕೊಟ್ಟು ಪ್ರತಿಭಟನೆ ನಡೆಸಿದ ಕಾಂಗ್ರೆಸ್ ಕಾರ್ಯಕರ್ತರು, ಬಿಜೆಪಿ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದರು.
ಇನ್ನು ಮೆಟ್ರೋ ನಿಲ್ದಾಣದ ಆವರಣದಲ್ಲಿ ಪ್ರತಿಭಟನೆಗೆ ಅವಕಾಶ ಇಲ್ಲ ಎಂದು ಪೊಲೀಸರು ಎಚ್ಚರಿಕೆ ನೀಡಿದರೂ, ನಿಲ್ದಾಣದ ಒಳಕ್ಕೆ ನುಗ್ಗಲು ಕಾಂಗ್ರೆಸ್ ಕಾರ್ಯಕರ್ತರು ಯತ್ನಿಸಿದರು.
ಮೆಟ್ರೋ ದರ ಏರಿಕೆ ಖಂಡಿಸಿ ಇತ್ತೀಚೆಗೆ ಮಂತ್ರಿ ಮಾಲ್ ಮೆಟ್ರೋ ಸ್ಟೇಷನ್ ಬಳಿ ಬಿಜೆಪಿ ಪ್ರತಿಭಟನೆ ನಡೆಸಿತ್ತು. ಈ ವೇಳೆ ಬಿಜೆಪಿ ಕಾರ್ಯಕರ್ತರು ರಾಜ್ಯ ಸರ್ಕಾರದ ವಿರುದ್ದ ಧಿಕ್ಕಾರ ಕೂಗಿದ್ದರು.
Advertisement