
ದಾವಣಗೆರೆ\ಚಿತ್ರದುರ್ಗ: ತುಮಕೂರು-ದಾವಣಗೆರೆ ನೇರ ರೈಲು ಮಾರ್ಗ ಎರಡು ವರ್ಷಗಳಲ್ಲಿ ಪೂರ್ಣಗೊಳಿಸಲಾಗುವುದು ಎಂದು ತುಮಕೂರು ಸಂಸದ, ಕೇಂದ್ರ ಸಚಿವ ವಿ ಸೋಮಣ್ಣ ಅವರು ಮಂಗಳವಾರ ಹೇಳಿದ್ದಾರೆ.
ನವದೆಹಲಿಯ ಸಂಸತ್ ಭವನದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಮಂಗಳವಾರ ಭೇಟಿ ಮಾಡಿರುವ ಅವರು, ಮಾತುಕತೆ ನಡೆಸಿದ್ದಾರೆ.
ಭೇಟಿ ವೇಳೆ ತುಮಕೂರು-ಚಿತ್ರದುರ್ಗ-ದಾವಣಗೆರೆ ರೈಲು ಮಾರ್ಗದ ಭಾಗವಾದ ತಿಮ್ಮರಾಜನಹಳ್ಳಿ ಮತ್ತು ತಾವರೆಕೆರೆ ಮಧ್ಯದ ರೈಲ್ವೆ ಕಾಮಗಾರಿಗೆ ಸಂಬಂದಪಟ್ಟಂತೆ ರೈಲ್ವೆ ಬೋರ್ಡ್ ಕೇಂದ್ರ ಗೃಹ ಇಲಾಖೆಗೆ ಕಳುಹಿಸಿದ ಪ್ರಸ್ತಾವನೆಯನ್ನು ಅನುಮೋದಿಸಿಕೊಡಬೇಕೆಂದು ಮನವಿ ಮಾಡಿದ್ದಾರೆ.
ಈ ಮನವಿಗೆ ಅಮಿತ್ ಶಾ ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಅವರ ಪ್ರತಿಕ್ರಿಯೆ ನನ್ನಲ್ಲಿ ಅತೀವ ಸಂತಸ ತಂದಿದೆ. ಕರ್ನಾಟಕ ರಾಜ್ಯದ ಹಾಗೂ ವಿಶೇಷವಾಗಿ ತುಮಕೂರು ಜನತೆಯ ಪರವಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಹೃತ್ಪೂರ್ವಕ ಧನ್ಯವಾದಗಳನ್ನು ಅರ್ಪಿಸುತ್ತೇನೆಂದು ಹೇಳಿದ್ದಾರೆ.
ಇದೇ ವೇಳೆ ಯೋಜನೆ ಬಗ್ಗೆ ಮಾಹಿತಿ ನೀಡಿರುವ ಅವರು, ತುಮಕೂರು -ದಾವಣಗೆರೆ (ಚಿತ್ರದುರ್ಗ ಮೂಲಕ) ಮತ್ತು ತುಮಕೂರು-ರಾಯದುರ್ಗ ನಡುವೆ ಕ್ರಮವಾಗಿ 2140 ಕೋಟಿ ಮತ್ತು 2500 ಕೋಟಿ ರೂ. ವೆಚ್ಚದಲ್ಲಿ ಎರಡು ಹೊಸ ರೈಲು ಮಾರ್ಗ ಯೋಜನೆಗಳು ನಡೆಯುತ್ತಿವೆ. ಕರ್ನಾಟಕದ ಇತರ ಪ್ರದೇಶಗಳೊಂದಿಗೆ ತುಮಕೂರಿನ ಸಂಪರ್ಕವನ್ನು ಸುಧಾರಿಸಲು ಈ ಎರಡು ಯೋಜನೆಗಳು ಅತ್ಯಗತ್ಯ ಮತ್ತು ಕಾಮಗಾರಿ ಶೀಘ್ರವಾಗಿ ಪೂರ್ಣಗೊಳಿಸಲು ಮೇಲ್ವಿಚಾರಣೆ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ.
ತುಮಕೂರು-ದಾವಣಗೆರೆ ಹೊಸ ಮಾರ್ಗವು ಎರಡು ನಗರಗಳ ನಡುವೆ ನೇರ ಸಂಪರ್ಕವನ್ನು ಒದಗಿಸುತ್ತದೆ, ರೈಲು ಪ್ರಯಾಣದ ದೂರವನ್ನು 65 ಕಿ.ಮೀ. ಕಡಿಮೆ ಮಾಡುತ್ತದೆ. ತುಮಕೂರು-ರಾಯದುರ್ಗ ಮಾರ್ಗವು ತುಮಕೂರು-ಬಳ್ಳಾರಿ ಮಾರ್ಗವನ್ನು 130 ಕಿ.ಮೀ. ಕಡಿಮೆ ಮಾಡುತ್ತದೆ, ಇದರಿಂದಾಗಿ ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ ರೈಲ್ವೆ ಸಂಪರ್ಕವನ್ನು ಹೆಚ್ಚಿಸುತ್ತದೆ. ಈ ಎರಡು ಯೋಜನೆಗಳಿಗೆ ತ್ವರಿತ ಭೂಸ್ವಾಧೀನಕ್ಕೆ ರಾಜ್ಯ ಸರ್ಕಾರ ಅನುಕೂಲ ಮಾಡಿಕೊಡಬೇಕೆಂದು ತಿಳಿಸಿದರು.
ಪ್ರಧಾನಿ ಮೋದಿಯವರ ದೂರದೃಷ್ಟಿಯ ನಾಯಕತ್ವದಲ್ಲಿ, ಕಳೆದ 10 ವರ್ಷಗಳಲ್ಲಿ ರೈಲ್ವೆ ಇಲಾಖೆ ರೂಪಾಂತರಗೊಂಡಿವೆ. 'ರೈಲ್ವೆಯನ್ನು ರಾಷ್ಟ್ರದ ಬೆಳವಣಿಗೆಯ ಎಂಜಿನ್' ಎಂದು ಪ್ರಧಾನಿ ಕರೆದಿದ್ದಾರೆ. ಪ್ರಧಾನಮಂತ್ರಿಯವರ ನೇತೃತ್ವದಲ್ಲಿ, ಕರ್ನಾಟಕದ ರೈಲ್ವೆ ಯೋಜನೆಗಳ ಸರಾಸರಿ ವೆಚ್ಚವು ಸುಮಾರು 9 ಪಟ್ಟು ಹೆಚ್ಚಾಗಿದೆ ಎಂದು ಕೊಂಡಾಡಿದ್ದಾರೆ.
Advertisement