Mandya: ಚಾಲಕನ ನಿಯಂತ್ರಣ ತಪ್ಪಿ KSRTC ಬಸ್ ಮರಕ್ಕೆ ಡಿಕ್ಕಿ; 20ಕ್ಕೂ ಹೆಚ್ಚು ಜನರಿಗೆ ಗಾಯ

ಬಸ್ ಆಲೇನಹಳ್ಳಿಯಿಂದ ಕೃಷ್ಣರಾಜಪೇಟೆಗೆ ಹಿಂತಿರುಗುತ್ತಿತ್ತು.
ಮರಕ್ಕೆ ಡಿಕ್ಕಿಯಾದ ಬಸ್
ಮರಕ್ಕೆ ಡಿಕ್ಕಿಯಾದ ಬಸ್
Updated on

ಮಂಡ್ಯ: ಚಾಲಕನ ನಿಯಂತ್ರಣ ತಪ್ಪಿ ರಾಜ್ಯ ಸಾರಿಗೆ ಬಸ್ (ಕೆಎಸ್ಆರ್‌ಟಿಸಿ) ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ 20ಕ್ಕೂ ಅಧಿಕ ಜನರು ಗಾಯಗೊಂಡಿರುವ ಘಟನೆ ಮಂಡ್ಯ ಜಿಲ್ಲೆಯ ಕೃಷ್ಣರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಎಲ್ಲ ಗಾಯಾಳುಗಳನ್ನು ಕೆ.ಆರ್. ಪೇಟೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಐವರ ಸ್ಥಿತಿ ಗಂಭೀರವಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿಗೆ ಸ್ಥಳಾಂತರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಬೆಳಗ್ಗೆ ಆಲೇನಹಳ್ಳಿಯಿಂದ ಕೆ.ಆರ್.ಪೇಟೆ ಕಡೆಗೆ ಕೆಎಸ್‌ಆರ್‌ಟಿಸಿ ಬಸ್ ಬರುತ್ತಿದ್ದ ವೇಳೆ ಕೆಆರ್ ಪೇಟೆ ತಾಲೂಕಿನ ಕುಂದಹಳ್ಳಿ ಬಳಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಪಕ್ಕದಲ್ಲಿದ್ದ ಬೃಹತ್ ಮರಕ್ಕೆ ಡಿಕ್ಕಿಯಾಗಿದೆ.

ಈ ಪೈಕಿ ಹೆಚ್ಚು ಶಾಲಾ-ಕಾಲೇಜಿನ ವಿದ್ಯಾರ್ಥಿಗಳೇ ಇದ್ದು, ಹಲವರ ಕೈ ಕಾಲು ಮುರಿದು ಗಂಭೀರವಾಗಿ ಗಾಯಗೊಂಡಿದ್ದಾರೆ ಎನ್ನಲಾಗಿದೆ.

'ಕೃಷ್ಣರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ರಾಜ್ಯ ಸಾರಿಗೆ ಬಸ್ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಐವರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ' ಎಂದು ಮಂಡ್ಯ ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ.

ಸೂಕ್ತ ಚಿಕಿತ್ಸೆ ನೀಡುವಂತೆ ಎಚ್‌ಡಿಕೆ ಸೂಚನೆ

ಮಂಡ್ಯ ಜಿಲ್ಲೆಯ ಕೆಆರ್ ಪೇಟೆ ತಾಲೂಕಿನ ಕುಂದನಹಳ್ಳಿ ಗೇಟ್ ಬಳಿ ಸಂಭವಿಸಿರುವ ರಾಜ್ಯ ಸಾರಿಗೆ ಬಸ್ ಅಪಘಾತದಲ್ಲಿ ಶಾಲಾ ಮಕ್ಕಳು ಸೇರಿ ಇಪ್ಪತ್ತೈದಕ್ಕೂ ಹೆಚ್ಚು ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿರುವ ಸುದ್ದಿ ತಿಳಿದು ತೀವ್ರ ಆಘಾತ ಉಂಟಾಯಿತು. ಈ ಬಗ್ಗೆ ತಕ್ಷಣವೇ ಸ್ಪಂದಿಸಿ ಜಿಲ್ಲಾ ವೈದ್ಯಾಧಿಕಾರಿಗಳ ಜತೆ ಮಾತನಾಡಿ ಸಮಗ್ರ ಮಾಹಿತಿ ಪಡೆದುಕೊಂಡಿದ್ದೇನೆ ಹಾಗೂ ಗಾಯಾಳುಗಳಿಗೆ ಅಗತ್ಯವಾದ ತುರ್ತುಚಿಕಿತ್ಸೆ ನೀಡಬೇಕು ಎಂದು ಸೂಚಿಸಿದ್ದೇನೆ ಎಂದಿದ್ದಾರೆ.

ತೀವ್ರವಾಗಿ ಗಾಯಗೊಂಡಿರುವವರನ್ನು ಮೈಸೂರು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರೆಲ್ಲರಿಗೂ ಉಚಿತ ಮತ್ತು ಗುಣಮಟ್ಟದ ಚಿಕಿತ್ಸೆ ನೀಡಬೇಕೆಂದು ಸ್ಪಷ್ಟವಾಗಿ ನಿರ್ದೇಶನ ನೀಡಿದ್ದೇನೆ. ಗಾಯಾಳುಗಳೆಲ್ಲರೂ ಆದಷ್ಟು ಶೀಘ್ರವಾಗಿ ಚೇತರಿಸಿಕೊಂಡು ಕ್ಷೇಮವಾಗಿ ಮನೆಗೆ ಮರಳಲಿ ಹಾರೈಸುತ್ತೇನೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com