
ಮೈಸೂರು: ಉದಯಗಿರಿ ಪೊಲೀಸ್ ಠಾಣೆ ಮೇಲಿನ ಕಲ್ಲು ತೂರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಗೃಹ ಸಚಿವ ಡಾ. ಜಿ ಪರಮೇಶ್ವರ್ ಖಡಕ್ ಎಚ್ಚರಿಕೆ ನೀಡಿದ್ದಾರೆ. ಘಟನೆಯಲ್ಲಿ ಯಾರಿದ್ದಾರೆ ಅದೆಲ್ಲ ಹೇಳೋಕೆ ಆಗಲ್ಲ. ಆದರೆ ಅದರ ಹಿಂದೆ ಎಷ್ಟೇ ಪ್ರಭಾವಿ ಇದ್ದರೂ ಅವರ ವಿರುದ್ಧ ನಿರ್ದಯ ಕ್ರಮ ಕೈಗೊಳ್ಳಲಾಗುವುದು ಮತ್ತು ಹೆಚ್ಚಿನ ಬಂಧನಗಳನ್ನು ಮಾಡಲಾಗುತ್ತದೆ ಎಂದರು.
ಮೈಸೂರಿನಲ್ಲಿ ಮಾತನಾಡಿದ ಗೃಹ ಸಚಿವ ಪರಮೇಶ್ವರ್, ಈ ಘಟನೆ ಯಾವ ಕಾರಣಕ್ಕಾಗಿ ಆಯಿತು. ಯಾರಿಂದ ಆಯ್ತು ಅಂತ ತನಿಖೆ ಮಾಡಲು ಹೇಳಿದ್ದೆ. ಪ್ರಾಥಮಿಕ ಮಾಹಿತಿ ಪಡೆಯಲು ಇಲ್ಲಿಗೆ ಬಂದಿದ್ದೇನೆ. ಅಧಿಕಾರಿಗಳು ನನಗೆ ಎಲ್ಲಾ ವಿಚಾರವನ್ನು ತಿಳಿಸಿದ್ದಾರೆ. ತನಿಖೆಗೆ ಈಗಾಗಲೇ ಆದೇಶ ಮಾಡಿರುವುದರಿಂದ ಏನೆಲ್ಲಾ ಚರ್ಚೆ ಆಗಿದೆ. ಘಟನೆಯಲ್ಲಿ ಯಾರಿದ್ದಾರೆ ಅದೆಲ್ಲವನ್ನು ಹೇಳುವುದಕ್ಕೆ ಆಗುವುದಿಲ್ಲ ಎಂದರು. ಅಲ್ಲದೆ ರಾಜ್ಯದಲ್ಲಿ ಉತ್ತರಪ್ರದೇಶದಂತ ಪರಿಸ್ಥಿತಿ ನಿರ್ಮಾಣವಾಗಿಲ್ಲ. ನಮ್ಮ ಜನರು ಆ ಮಟ್ಟಕ್ಕೆ ಹೋಗಿಲ್ಲ. ಹೀಗಾಗಿ ಗಲಭೆಕೋರರ ಮನೆಗಳ ಮೇಲೆ ಬುಲ್ಡೋಜರ್ ಹತ್ತಿಸುವುದಿಲ್ಲ ಎಂದರು.
ಇದುವರೆಗೆ 16 ಜನರ ಬಂಧನ, 1,000 ಕೇಸ್
ಉದಯಗಿರಿ ಪೊಲೀಸ್ ಠಾಣೆ ಮೇಲೆ ದಾಳಿ ಪ್ರಕರಣದಲ್ಲಿ ಶುಕ್ರವಾರ ಬಂಧನಗಳ ಸಂಖ್ಯೆ 16ಕ್ಕೆ ಏರಿದ್ದು, ಈ ಸಂಬಂಧ 1,000 ಜನರ ಮೇಲೆ ಪ್ರಕರಣ ದಾಖಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಆರೋಪಿಗಳ ಗುರುತು ಮತ್ತು ಸ್ಥಳಗಳನ್ನು ಪತ್ತೆಹಚ್ಚಲಾಗುತ್ತಿರುವುದರಿಂದ ಇನ್ನೂ ಅನೇಕರನ್ನು ಬಂಧಿಸುವ ಸಾಧ್ಯತೆಯಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಆರೋಪಿಗಳು ತಮ್ಮ ಮೊಬೈಲ್ ಫೋನ್‌ಗಳನ್ನು ತಮ್ಮ ಮನೆಗಳಲ್ಲಿಯೇ ಬಿಟ್ಟು ಹೋಗಿದ್ದಾರೆ. ಆದರೆ ಸದ್ಯ ಬಂಧನವಾಗಿರುವ ಆರೋಪಿಗಳು ನ್ಯಾಯಾಂಗ ಬಂಧನದಲ್ಲಿದ್ದಾರೆ ಎಂದರು.
ಸಿಸಿಟಿವಿ ದೃಶ್ಯಗಳ ಮೂಲಕ ಪೊಲೀಸರು 100ಕ್ಕೂ ಹೆಚ್ಚು ಆರೋಪಿಗಳನ್ನು ಗುರುತಿಸಿ ಅವರಿಗಾಗಿ ಹುಡುಕಾಟ ನಡೆಸಿದ್ದಾರೆ. ಏತನ್ಮಧ್ಯೆ, ಹಿಂಸಾಚಾರ ಮತ್ತು ಗಲಭೆಗೆ ಕಾರಣವಾದ ವಿವಾದಾತ್ಮಕ ಸಾಮಾಜಿಕ ಮಾಧ್ಯಮ ಪೋಸ್ಟ್ ಅನ್ನು ಪೋಸ್ಟ್ ಮಾಡಿದ ಸತೀಶ್ ಅಕಾ ಪಾಂಡುರಂಗ ಸಲ್ಲಿಸಿದ ಜಾಮೀನು ಅರ್ಜಿಯನ್ನು ಸ್ಥಳೀಯ ನ್ಯಾಯಾಲಯವು ಶುಕ್ರವಾರ ವಿಚಾರಣೆಗೆ ಕೈಗೆತ್ತಿಕೊಂಡಿತ್ತು. ಇಂದು ಪೊಲೀಸರು ಸತೀಶ್ ನನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದು ಕೋರ್ಟ್ ಪೊಲೀಸ್ ಕಸ್ಟಡಿಗೆ ನೀಡಿದೆ.
ವೈರಲ್ ಆಗಿರುವ ವಿಡಿಯೋದಲ್ಲೇನಿದೆ...?
ಧರ್ಮ ರಕ್ಷಣೆಗೆ ಬದ್ಧತೆ ನಿನ್ನೆಯೂ ಇತ್ತು, ಇವತ್ತು ಇದೆ. ಎಲ್ಲರೂ ಘೋಷಣೆ ಕೂಗಿ, ನಾವು ಪ್ರಾಣ ಬೇಕಾದರೂ ಕೊಡುತ್ತೇವೆ. ಸದಾ ಮುಸ್ಲಿಮನ್ನು ಗುರಿ ಮಾಡಲಾಗುತ್ತಿದೆ. ಸುರೇಶ್ ಹೆಸರಿನ ನಾಯಿ, ಸುರೇಶ್ ಹೆಸರಿನ ಹರಾಮಿ ನನ್ನ ಮಾಲೀಕನ ಬಗ್ಗೆ ಕೆಟ್ಟದಾಗಿ ಪೋಸ್ಟ್ ಮಾಡಿದ್ದಾನೆ. ಆತನನ್ನು ಕೂಡಲೇ ಬಂಧಿಸಿ. ಆತನನ್ನು ನೇಣಿಗೆ ಹಾಕಬೇಕು ಮರಣದಂಡನೆ ವಿಧಿಸಬೇಕು. ನಿಮ್ಮ ಇಚ್ಛೆ ಏನು? ಆತನಿಗೆ ಮರಣದಂಡನೆಯಾಗಬೇಕು ಎಂಬುವುದು. ಮೈಸೂರಿನ ಎಲ್ಲ ಮುಸ್ಲಿಂರು ಒಂದಾಗಿ. ಇದಕ್ಕೆ ತಕ್ಕ ಉತ್ತರ ಕೊಡಬೇಕಾಗಿದೆ. ಈ ವಿಡಿಯೋವನ್ನು ಎಲ್ಲ ಕಡೆ ಶೇರ್ ಮಾಡಿ” ಎಂದು ಭಾಷಣ ಮಾಡಿದ್ದು ಈ ವಿಡಿಯೋ ವೈರಲ್ ಆಗಿತ್ತು.
ಏನಿದು ಘಟನೆ?
ಸೋಷಿಯಲ್ ಮಿಡೀಯಾದಲ್ಲಿ ವ್ಯಕ್ತಿಯೊಬ್ಬ ಮಾಡಿದ್ದ ಪೋಸ್ಟ್ ವೊಂದು ಒಂದು ಸಮುದಾಯವನ್ನು ಕೆರಳಿಸಿತ್ತು. ಪೋಸ್ಟ್ ಮಾಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಆತನನ್ನು ವಶಕ್ಕೆ ನೀಡುವಂತೆ ಇನ್ನೂರು ಜನ ಠಾಣೆ ಬಳಿ ಬಂದು ಆರೋಪಿಗಳು ಗಲಾಟೆ ಮಾಡಿ, ಕಲ್ಲು ತೂರಿದ್ದಾರೆ. ಆಗ ಪೊಲೀಸರು ಅಶ್ರುವಾಯು ಸಿಡಿಸಿ, ನಿಯಂತ್ರಣಕ್ಕೆ ತೆಗೆದುಕೊಂಡಿದ್ದಾರೆ.
ಪೋಸ್ಟ್ ನಲ್ಲೇನಿತ್ತು?
ದೆಹಲಿಯಲ್ಲಿ ಬಿಜೆಪಿ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಯುವಕನೋರ್ವ ಸಂಸದ ರಾಹುಲ್ ಗಾಂಧಿ, ಉತ್ತರಪ್ರದೇಶದ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಹಾಗೂ ದೆಹಲಿ ಮಾಜಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ವಿವಸ್ತ್ರಗೊಳಿಸಿ, ಭಾವಚಿತ್ರಕ್ಕೆ ತಲೆ ಮೇಲೆ ಮುಸ್ಲಿಮರು ಬಳಸುವ ಟೊಪ್ಪಿ ಇಟ್ಟು, ದೇಹದ ಮೇಲೆಲ್ಲಾ ಉರ್ದು ಭಾಷೆಯ ಕೆಲ ಪದ ಬರೆದು ಪೋಸ್ಟ್ ಮಾಡಿದ್ದ. ಇದು ಮುಸ್ಲಿಂ ಸಮುದಾಯದವರು ಕೆರಳುವಂತೆ ಮಾಡಿತ್ತು.
Advertisement