ಭಾರತೀಯ ಸಾರ್ವಜನಿಕ ಆಡಳಿತ ಸಂಸ್ಥೆ ಮತ್ತು ಪಂಚಾಯತ್ ರಾಜ್ ಸಚಿವಾಲಯದ ಅಧ್ಯಯನದ ಪ್ರಕಾರ ಪಂಚಾಯಿತಿಗಳಿಗೆ ಅಧಿಕಾರ ವಿಕೇಂದ್ರೀಕರಣ ಶ್ರೇಯಾಂಕದಲ್ಲಿ ಕರ್ನಾಟಕ ಮೊದಲ ಸ್ಥಾನದಲ್ಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. ರಾಜ್ಯಕ್ಕೆ ಈ ಮನ್ನಣೆ ಸಿಕ್ಕಿರುವುದು ತಳಮಟ್ಟದಲ್ಲಿ ಪ್ರಜಾಪ್ರಭುತ್ವವನ್ನು ಸಶಕ್ತಗೊಳಿಸಲು ತಮ್ಮ ಸರ್ಕಾರದ ಸಮರ್ಪಣೆಯನ್ನು ಎತ್ತಿ ತೋರಿಸುತ್ತದೆ. ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಹಣಕಾಸು ಮತ್ತು ಹೊಣೆಗಾರಿಕೆಯಲ್ಲಿ, ಪರಿಣಾಮಕಾರಿ ಹಣಕಾಸು ಹಂಚಿಕೆ ಮತ್ತು ಸಕಾಲಿಕ ನಿಧಿ ಬಿಡುಗಡೆ, 15ನೇ ಹಣಕಾಸು ಆಯೋಗದ ಅನುದಾನದ ಸಮರ್ಥ ಬಳಕೆ, ಪ್ರಬಲ ಗ್ರಾಮ ಸಭೆಗಳು ಮತ್ತು ಸಾಮಾಜಿಕ ಲೆಕ್ಕಪರಿಶೋಧನೆಗಳಲ್ಲಿ ರಾಜ್ಯವು ಮುಂದಿದೆ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.
ಶಾಸಕ ಎಲ್.ಆರ್ ಶಿವರಾಮೇಗೌಡ ಮತ್ತೆ ಕಾಂಗ್ರೆಸ್ ಗೆ ಸೇರ್ಪಡೆಯಾಗಿದ್ದಾರೆ. ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾಜಿ ಸಂಸದ ಶಿವರಾಮೇಗೌಡ ಮತ್ತು ಪುತ್ರ ಮಂಜೇಗೌಡ, ಬ್ರಿಜೇಶ್ ಕಾಳಪ್ಪ ಮತ್ತು ಎಲ್.ಎಸ್.ಚೇತನ್ ಗೌಡ ಕಾಂಗ್ರೆಸ್ ಗೆ ಸೇರ್ಪಡೆಯಾದರು. ಇದೇ ವೇಳೆ ಎಲ್.ಆರ್. ಶಿವರಾಮೇಗೌಡ ಅವರ ಬೆಂಬಲಿಗರೂ ಕೂಡ ಅಪಾರ ಸಂಖ್ಯೆಯಲ್ಲಿ ಕಾಂಗ್ರೆಸ್ ಸೇರಿದ್ದಾರೆ. ಆಪರೇಷನ್ ಹಸ್ತ ಇದೀಗ ವಿಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್ ನಲ್ಲಿ ತಳಮಳಕ್ಕೆ ಕಾರಣವಾಗಿದೆ.
ಬೈಕ್ ವೀಲಿಂಗ್ ಪುಂಡರ ಹಾವಳಿ ಹೆಚ್ಚುತ್ತಿದ್ದು, ಇಡೀ ರಸ್ತೆಯನ್ನೇ ಬ್ಲಾಕ್ ಮಾಡಿ ನೂರಾರು ಮಂದಿ ಬೈಕ್ ವೀಲಿಂಗ್ ಮಾಡಿರುವ ವಿಡಿಯೋ ವ್ಯಾಪಕ ವೈರಲ್ ಆಗುತ್ತಿದೆ. ತುಮಕೂರಿನ ನೆಲಮಂಗಲ ಬಳಿಯ ತುಮಕೂರು ರಸ್ತೆಯಲ್ಲಿ ಈ ಘಟನೆ ನಡೆದಿದ್ದು, ಶಬ್ ಇ ಬರಾತ್ ಹಬ್ಬದ ನಿಮಿತ್ತ ರಾತ್ರಿ ಸಾಮೂಹಿಕ ಪ್ರಾರ್ಥನೆಗೆ ಬಂದಿದ್ದ ವೇಳೆ ನೂರಾರು ಮಂದಿ ರಸ್ತೆಯಲ್ಲಿ ಬೈಕ್ ವೀಲಿಂಗ್ ಮಾಡಿದ್ದಾರೆ. ಅಷ್ಟು ಮಾತ್ರವಲ್ಲದೇ ಬೈಕ್ ವೀಲಿಂಗ್ ಮಾಡುತ್ತಿರುವುದನ್ನು ಕೆಲವರು ತಮ್ಮ ಮೊಬೈಲ್ ಗಳಲ್ಲಿ ಸೆರೆ ಹಿಡಿದು ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿದ್ದಾರೆ. ಮತ್ತೊಂದೆಡೆ ಚಲಿಸುತ್ತಿದ್ದ ಕಾರಿನ ಮೇಲೆ ನಿಂತು ಸಾಹಸ ಪ್ರದರ್ಶಿಸಿದ ಆರೋಪದ ಮೇರೆಗೆ ಟ್ಯಾಕ್ಸಿ ಚಾಲಕ ಕರಿಯ ಮಾನಪ್ಪ ವಿರುದ್ಧ ಕಾಮಾಕ್ಷಿಪಾಳ್ಯ ಸಂಚಾರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಚಲಿಸುತ್ತಿದ್ದ ಸೆಡಾನ್ ಕಾರಿನ ಹಿಂಭಾಗದ ಕ್ರ್ಯಾಶ್ ಗಾರ್ಡ್ ಮೇಲೆ ನಿಂತು ಇಬ್ಬರು ಸಾಹಸ ಪ್ರದರ್ಶನ ಮಾಡುತ್ತಿದ್ದ ವಿಡಿಯೋ ವೈರಲ್ ಆಗಿತ್ತು.
ಮುದ್ದು ಲಕ್ಷ್ಮಿ ಸೇರಿದಂತೆ ಹಲವು ಧಾರಾವಾಹಿಗಳಲ್ಲಿ ನಟಿಸಿರುವ ನಟ ಧ್ರುವಂತ್ ಅಲಿಯಾಸ್ ಚರಿತ್ ಬಾಳಪ್ಪ ವಿರುದ್ದ ಈಗಾಗಲೇ ಆರ್ಆರ್ ನಗರ ಪೊಲೀಸ್ ಠಾಣೆಯಲ್ಲಿ ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲಾಗಿದ್ದು ಇದೀಗ ಅದೇ ನಟನ ವಿರುದ್ಧ ಮತ್ತೊಂದು ದೂರು ದಾಖಲು ದಾಖಲಾಗಿದೆ. ಸೀರಿಯಲ್ ಶೂಟಿಂಗ್ ನೋಡಲು ಹೋಗಿದ್ದ ಮಹಿಳೆ ಜೊತೆ ಪರಿಚಯ ಬೆಳೆಸಿಕೊಂಡು ಆಕೆಯನ್ನು ಲೈಂಗಿಕ ತೃಷೆ ಬಳಸಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ಖಾಸಗಿ ಫೋಟೋ, ವಿಡಿಯೋವನ್ನು ಬಹಿರಂಗಪಡಿಸುವ ಬೆದರಿಕೆ ಒಡ್ಡಿ ಹಣ ಸುಲಿಗೆ ಮಾಡಿದ್ದಾರೆ ಎಂದು ಸಂತ್ರಸ್ತೆ ದೂರು ನೀಡಿದ್ದು ಈ ಸಂಬಂಧ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ಸ್ಯಾಂಡಲ್ ವುಡ್ ನಟ ಡಾಲಿ ಧನಂಜಯ್ ತಮ್ಮ ಸ್ನೇಹಿತೆ ಡಾ. ಧನ್ಯತಾ ಜೊತೆ ಇಂದು ಮೈಸೂರಿನ ವಸ್ತು ಪ್ರದರ್ಶನ ಮೈದಾನದಲ್ಲಿ ನಡೆದ ಅದ್ಧೂರಿ ಸಮಾರಂಭದಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಮೀನ ಲಗ್ನದಲ್ಲಿ ಮಾಂಗಲ್ಯ ಧಾರಣೆ ನಡೆಯಿತು. ಈ ಅದ್ಧೂರಿ ವಿವಾಹಕ್ಕಾಗಿ ಕಲಾವಿದ ಅರುಣ್ ಸಾಗರ್ ಅವರು ದೇವಸ್ಥಾನದ ಥೀಮ್ನಲ್ಲಿ ದೊಡ್ಡ ಮಂಟಪದ ಸೆಟ್ ನಿರ್ಮಾಣ ಮಾಡಿದ್ದರು. ಮದುವೆ ಸಮಾರಂಭಕ್ಕೆ ನಟ ಶಿವರಾಜಕುಮಾರ್, ಸೇರಿದಂತೆ ಸಿನಿಮಾ ತಾರೆಯರು, ನಿರ್ದೇಶಕರು, ನಿರ್ಮಾಪಕರು, ರಾಜಕಾರಣಿಗಳು ಸೇರಿದಂತೆ ಗಣ್ಯರು ಆಗಮಿಸಿ ದಂಪತಿಗಳಿಗೆ ಶುಭ ಹಾರೈಸಿದರು.
Advertisement