
ಬೆಂಗಳೂರು ಗ್ರಾಮಾಂತರ: ಬೈಕ್ ವೀಲಿಂಗ್ ಪುಂಡರ ಹಾವಳಿ ಹೆಚ್ಚುತ್ತಿದ್ದು, ಇಡೀ ರಸ್ತೆಯನ್ನೇ ಬ್ಲಾಕ್ ಮಾಡಿ ನೂರಾರು ಮಂದಿ ಬೈಕ್ ವೀಲಿಂಗ್ ಮಾಡಿರುವ ವಿಡಿಯೋ ವ್ಯಾಪಕ ವೈರಲ್ ಆಗುತ್ತಿದೆ.
ಇತ್ತೀಚೆಗಷ್ಟೇ ದೆಹಲಿ ಮೆಟ್ರೋ ನಿಲ್ದಾಣದಲ್ಲಿ ನೂರಾರು ಮಂದಿ ಏಕಾಏಕಿ ನುಗ್ಗಿದ್ದ ವಿಡಿಯೋ ವೈರಲ್ ಆದ ಬೆನ್ನಲ್ಲೇ ಇದೀಗ ಕರ್ನಾಟಕದಲ್ಲೂ ಅಂತಹುದೇ ಘಟನೆ ವರದಿಯಾಗಿದೆ.
ನೆಲಮಂಗಲ ಬಳಿಯ ತುಮಕೂರು ರಸ್ತೆಯಲ್ಲಿ ಶುಕ್ರವಾರ ಈ ಘಟನೆ ನಡೆದಿದ್ದು, ಶಬ್ ಇ ಬರಾತ್ ಹಬ್ಬದ ನಿಮಿತ್ತ ರಾತ್ರಿ ಸಾಮೂಹಿಕ ಪ್ರಾರ್ಥನೆಗೆ ಬಂದಿದ್ದ ವೇಳೆ ನೂರಾರು ಮಂದಿ ರಸ್ತೆಯಲ್ಲಿ ಬೈಕ್ ವೀಲಿಂಗ್ ಮಾಡಿದ್ದಾರೆ ಎಂದು ಹೇಳಲಾಗುತ್ತಿರುವ ವಿಡಿಯೋ ವೈರಲ್ ಆಗುತ್ತಿದೆ. ಬೈಕ್ ವೀಲಿಂಗ್ ಮಾಡುತ್ತಿರುವುದನ್ನು ಕೆಲವರು ತಮ್ಮ ಮೊಬೈಲ್ ಗಳಲ್ಲಿ ಸೆರೆ ಹಿಡಿದು ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿದ್ದಾರೆ.
ಏಕಾಏಕಿ ಹತ್ತಾರು ಬೈಕ್ ಗಳು ರಸ್ತೆ ಮೇಲೆ ಬಂದು ವೀಲಿಂಗ್ ಮಾಡುತ್ತಾ.. ಕಿರುಚಾಡುತ್ತಾ ಸಾಗುತ್ತಿರುವುದು ವಿಡಿಯೋದಲ್ಲಿ ದಾಖಲಾಗಿದೆ. sahil_sona0__ ಎಂಬ ಖಾತೆದಾರ ಈ ವಿಡಿಯೋವನ್ನು ಇನ್ ಸ್ಟಾಗ್ರಾಂ ನಲ್ಲಿ ಅಪ್ಲೋಡ್ ಮಾಡಿದ್ದು, ಈ ವಿಡಿಯೋ ಇದೀಗ ವ್ಯಾಪಕ ವೈರಲ್ ಆಗುತ್ತಿದೆ.
ವ್ಯಾಪಕ ಆಕ್ರೋಶ
ಕಾರು, ಬೈಕ್ ಗಳಲ್ಲಿ ಒಮ್ಮೆಲೆ ನೂರಾರು ಮಂದಿ ರಸ್ತೆಗೆ ಬಂದು ವೀಲಿಂಗ್ ಮಾಡುತ್ತಿದ್ದರೂ ಸಮೀಪದ ಪೊಲೀಸರು ಏನು ಮಾಡುತ್ತಿದ್ದರು ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ವೀಲಿಂಗ್ ನಿಂದಾಗಿ ಕೇವಲ ವೀಲಿಂಗ್ ಮಾಡುವವರು ಮಾತ್ರವಲ್ಲ.. ಆ ರಸ್ತೆಯಲ್ಲಿ ಸಂಚರಿಸುವವರಿಗೂ ಅಪಾಯವಾಗುತ್ತದೆ. ಹೆಲ್ಮೆಟ್ ಇಲ್ಲದೇ ಈ ರೀತಿ ವರ್ತಿಸಿದರೆ ಅವರ ಜೀವಕ್ಕೂ ಅಪಾಯ.. ಹೀಗಿದ್ದೂ ಏಕೆ ಈ ರೀತಿ ವರ್ತಿಸುತ್ತಿದ್ದಾರೆ ಎಂದು ಕೆಲವರು ಟೀಕಿಸಿ ಪೋಸ್ಟ್ ಮಾಡಿದ್ದಾರೆ.
ಮತ್ತೆ ಕೆಲ ಖಾತೆದಾರರು ಪ್ರತೀ ವರ್ಷ ರಾಮನಗರ, ತುಮಕೂರು, ದಾವಣಗೆರೆ, ಕೋಲಾರ ಸೇರಿದಂತೆ ಈ ಹಬ್ಬದ ರಾತ್ರಿ ಇದೇ ರೀತಿ ವೀಲಿಂಗ್ ಮಾಡುತ್ತಾ ಕಿರುಚಾಡುತ್ತಾರೆ ಎಂದು ಟೀಕಿಸಿದ್ದಾರೆ.
ಇದೇ ಮೊದಲೇನಲ್ಲ..
ಈ ಹಿಂದೆ ಇದೇ ತುಮಕೂರು ರಸ್ತೆಯಲ್ಲಿ ಹಾಡಹಗಲೇ ಇಬ್ಬರು ಪುಂಡರು ವೀಲಿಂಗ್ ಮಾಡುತ್ತಿದ್ದರು ಎಂಬ ಕಾರಣಕ್ಕೆ ರೊಚ್ಚಿಗೆದ್ದಿದ್ದ ಸ್ಥಳೀಯರು ಪುಂಡರಿಂದ ಬೈಕ್ ಕಸಿದು ಅದನ್ನು ಮೇಲ್ಸೇತುವೆಯಿಂದ ಕೆಳಗೆ ಎಸೆದು ಆಕ್ರೋಶ ವ್ಯಕ್ತಪಡಿಸಿದ್ದರು. 2024ರ ಆಗಸ್ಟ್ ನಲ್ಲಿ ನಡೆದಿದ್ದ ಈ ವಿಚಾರ ವ್ಯಾಪಕ ವೈರಲ್ ಆಗಿತ್ತು.
Advertisement