ನೀರಾವರಿ ಸಚಿವರುಗಳ ಸಭೆ: ಮೇಕೆದಾಟು, ಮಹದಾಯಿ, ನವಲಿ ಹಾಗೂ ಅಣೆಕಟ್ಟು ದುರಸ್ತಿ ಯೋಜನೆಗಳ ಬಗ್ಗೆ ಚರ್ಚೆ- ಡಿ.ಕೆ ಶಿವಕುಮಾರ್

ರಾಜಸ್ಥಾನದಲ್ಲಿ ಅಖಿಲ ಭಾರತ ನೀರಾವರಿ ಸಚಿವರುಗಳ ಸಮ್ಮೇಳನ ನಡೆಯುತ್ತಿದ್ದು, ಎಲ್ಲಾ ರಾಜ್ಯಗಳ ನೀರಾವರಿ ಸಚಿವರ ಸಭೆ ಕರೆಯಲಾಗಿದೆ
DCM DK Shivakumar
ಡಿಸಿಎಂ ಡಿಕೆ ಶಿವಕುಮಾರ್
Updated on

ಬೆಂಗಳೂರು: ರಾಜಸ್ಥಾನದ ಉದಯಪುರದಲ್ಲಿ ನಡೆಯಲಿರುವ ದೇಶದ ಎಲ್ಲಾ ನೀರಾವರಿ ಸಚಿವರುಗಳ ಸಭೆಯಲ್ಲಿ ಮೇಕೆದಾಟು, ಮಹದಾಯಿ, ನವಲಿ ಹಾಗೂ ಅಣೆಕಟ್ಟು ದುರಸ್ತಿ ಸೇರಿದಂತೆ ರಾಜ್ಯದ ಪ್ರಮುಖ ನೀರಾವರಿ ಯೋಜನೆಗಳ ಬಗ್ಗೆ ಚರ್ಚೆ ಮಾಡಲಾಗುವುದು" ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.

ರಾಜಸ್ಥಾನಕ್ಕೆ ಪ್ರಯಾಣ ಬೆಳೆಸುವ ಮುನ್ನ ಮಂಗಳವಾರ ಬೆಳಗಿನ ಜಾವ ಮಾಧ್ಯಮದವರೊಂದಿಗೆ ಮಾತನಾಡಿದ ಡಿಕೆ ಶಿವಕುಮಾರ್, ರಾಜಸ್ಥಾನದಲ್ಲಿ ಅಖಿಲ ಭಾರತ ನೀರಾವರಿ ಸಚಿವರುಗಳ ಸಮ್ಮೇಳನ ನಡೆಯುತ್ತಿದ್ದು, ಎಲ್ಲಾ ರಾಜ್ಯಗಳ ನೀರಾವರಿ ಸಚಿವರ ಸಭೆ ಕರೆಯಲಾಗಿದೆ. ಈ ಸಭೆಯಲ್ಲಿ ನಮ್ಮ ರಾಜ್ಯಕ್ಕೆ ನೀರಾವರಿ ವಿಚಾರದಲ್ಲಿ ಆಗಿರುವ ಅನ್ಯಾಯದ ಬಗ್ಗೆ ಪ್ರಸ್ತಾಪ ಮಾಡುತ್ತೇನೆ ಎಂದು ತಿಳಿಸಿದರು.

"ಮೇಕೆದಾಟು, ಮಹದಾಯಿ ಯೋಜನೆ ಅನುಮತಿ, ಭದ್ರಾ ಮೇಲ್ದಂಡೆ ಯೋಜನೆಯಲ್ಲಿ ಆಗಿರುವ ಅನ್ಯಾಯಗಳ ಬಗ್ಗೆ ಚರ್ಚೆ ಮಾಡುತ್ತೇನೆ. ಇದರ ಜತೆಗೆ ಈ ವರ್ಷ ನಾವು ಅನೇಕ ಇತರೆ ನೀರಾವರಿ ಯೋಜನೆಗಳನ್ನು ತಯಾರು ಮಾಡಿ ಕೇಂದ್ರಕ್ಕೆ ಕಳುಹಿಸಿದ್ದೇವೆ. ತುಂಗ ಭದ್ರಾ ಅಣೆಕಟ್ಟು ಕ್ರೆಸ್ಟ್ ಗೇಟ್ ದುರಸ್ತಿ ಬಳಿಕ ರಾಜ್ಯದ ಎಲ್ಲಾ ಅಣೆಕಟ್ಟುಗಳ ಸುರಕ್ಷತೆಗಾಗಿ ಅವುಗಳ ರಿಪೇರಿಗೆ ಯೋಜನೆಯನ್ನು ಸಿದ್ಧಪಡಿಸಿ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದೇವೆ ಎಂದರು.

ಇನ್ನು ತುಂಗ ಭದ್ರಾ ಜಲಾಶಯಕ್ಕೆ ನವಲಿಯಲ್ಲಿ ಸಮಾನಾಂತರ ಜಲಾಶಯ ನಿರ್ಮಾಣ ಮಾಡುವ ವಿಚಾರವಾಗಿ ತೆಲಂಗಾಣ ಹಾಗೂ ಆಂಧ್ರ ಪ್ರದೇಶ ರಾಜ್ಯಗಳ ಸಚಿವರ ಜೊತೆ ಚರ್ಚೆ ಮಾಡಲಾಗುವುದು. ಈ ವಿಚಾರವಾಗಿ ಪ್ರತ್ಯೇಕ ಸಭೆ ಮಾಡಲು ಈಗಾಗಲೇ ಎರಡೂ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದೇನೆ" ಎಂದರು.

ಜನರಿಗೆ ಸರ್ಕಾರದ ಮೇಲೆ ನಂಬಿಕೆ ಇದೆ: ಅನ್ನಭಾಗ್ಯ ಹಾಗೂ ಗೃಹಲಕ್ಷ್ಮಿ ಹಣ ಫಲಾನುಭವಿಗಳಿಗೆ ತಲುಪಿಲ್ಲ, ಸರ್ಕಾರದ ಬೊಕ್ಕಸ ಖಾಲಿಯಾಗಿದೆ ಎಂಬ ಬಿಜೆಪಿ ಟೀಕೆ ಬಗ್ಗೆ ಕೇಳಿದಾಗ, "ಇದೆಲ್ಲವೂ ಸುಳ್ಳು, ಸರ್ಕಾರಕ್ಕೆ ಸಂಪನ್ಮೂಲ ಕ್ರೂಢೀಕರಣ ಒಂದೇ ದಿನಕ್ಕೆ ಆಗುವುದಿಲ್ಲ. ಹಂತ ಹಂತವಾಗಿ ಬರುತ್ತದೆ. ಆರ್ಥಿಕ ವರ್ಷಾಂತ್ಯದ ವೇಳೆಗೆ ಎಲ್ಲವೂ ಸರಿಯಾಗುತ್ತದೆ ಎಂದು ಅವರು ಹೇಳಿದರು.

DCM DK Shivakumar
ಗೋದಾವರಿ-ಕೃಷ್ಣಾ-ಕಾವೇರಿ ನೀರಾವರಿ ಯೋಜನೆಯಡಿ ಕರ್ನಾಟಕಕ್ಕೆ 25 ಟಿಎಂಸಿ ನೀರು ಬೇಕು: ಎಚ್‌ಡಿ ದೇವೇಗೌಡ ಆಗ್ರಹ

ಸರ್ಕಾರಕ್ಕೆ ಹಣದ ಸಮಸ್ಯೆ ಇಲ್ಲ: ಆರ್ಥಿಕವಾಗಿ ನಾವು ಬಲಿಷ್ಠವಾಗಿದ್ದೇವೆ. ಅನ್ನಭಾಗ್ಯದಲ್ಲಿ ಜನರಿಗೆ ತಲುಪಬೇಕಾದ ಅಕ್ಕಿ ತಲುಪುತ್ತಿದೆ. ಮಾಧ್ಯಮಗಳು ಹಾಗೂ ವಿರೋಧ ಪಕ್ಷಗಳ ಹೊರತಾಗಿ, ಈ ವಿಚಾರದಲ್ಲಿ ಜನಸಾಮಾನ್ಯರಿಗೆ ಅಸಮಾಧಾನ ಇಲ್ಲ. ಜನರು ಈ ವಿಚಾರದಲ್ಲಿ ಸಂತೋಷವಾಗಿದ್ದಾರೆ. ಜನರಿಗೆ ನಮ್ಮ ಮೇಲೆ ನಂಬಿಕೆ ಇದೆ. ಎರಡು, ಮೂರು ತಿಂಗಳು ಹಣ ಬಾಕಿ ಇದ್ದು, ಈ ತಿಂಗಳು ಬಿಡುಗಡೆಯಾಗಲಿದೆ ಎಂದು ತಿಳಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com