
ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗ ಡಿಸೆಂಬರ್ ನಲ್ಲಿ ನಡೆಸಿದ 384 ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳ ಪರೀಕ್ಷೆಯಲ್ಲಿ ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಗೆ ಅನ್ಯಾಯವಾಗಿದ್ದು, ಪರೀಕ್ಷೆ ಫಲಿತಾಂಶ ತಡೆ ಹಿಡಿದು ಮರುಪರೀಕ್ಷೆ ಮಾಡಬೇಕೆಂದು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಮಂಗಳವಾರ ಪ್ರತಿಭಟನೆ ನಡೆಸಿತು.
ಮಂಗಳವಾರ ಕರವೇ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ ಅವರ ನೇತೃತ್ವದಲ್ಲಿ ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಸಂಘಟನೆಯ ನೂರಾರು ಕಾರ್ಯಕರ್ತರು, ಕೆಎಎಸ್ ಬರೆದಿರುವ ಕೆಲ ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಈ ವೇಳೆ ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿದ ನಾರಾಯಣಗೌಡ ಅವರು, ಪ್ರಶ್ನೆ ಪತ್ರಿಕೆಯಲ್ಲಿ ಕನ್ನಡ ಅನುವಾದದಲ್ಲಿ ಸಮಸ್ಯೆಗಳಿರುವುದರಿಂದ ವಿದ್ಯಾರ್ಥಿಗಳು ಸಮಸ್ಯೆಗಳನ್ನು ಎದುರಿಸಿದ್ದರು. ಹೀಗಾಗಿ ಕನ್ನಡ ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ಮರು ಪರೀಕ್ಷೆ ನಡೆಸುವಂತೆ ನಾವು ಸರ್ಕಾರಕ್ಕೆ ಮನವಿ ಮಾಡಿದ್ದೆವು. ಆದಾಗ್ಯೂ, ಮರು ಪರೀಕ್ಷೆಯಲ್ಲಿಯೂ ಕೂಡ ತಪ್ಪುಗಳನ್ನು ಮಾಡಿದ್ದಾರೆ. ಅನುವಾದಕ್ಕೆ ಸಂಬಂಧಿಸಿದ ಸಮಸ್ಯೆಗಳು ಕಂಡು ಬಂದಿವೆ.
ಕನ್ನಡ ಕರ್ನಾಟಕದ ಆಡಳಿತ ಭಾಷೆಯಾಗಿರುವುದರಿಂದ ಮೊದಲು ಪ್ರಶ್ನೆ ಪತ್ರಿಕೆಯನ್ನು ಕನ್ನಡ ಭಾಷೆಯಲ್ಲಿ ಹೊಂದಿಸಬೇಕು. ನಂತರ ಅದನ್ನು ಇಂಗ್ಲಿಷ್‌ಗೆ ಅನುವಾದಿಸಬೇಕು. ಆದರೆ, ಅದನ್ನು ಅನುಸರಿಸಲಾಗಿಲ್ಲ. ಇದರಿಂದ ಅನೇಕ ಕನ್ನಡಿಗ ಆಕಾಂಕ್ಷಿಗಳಿಗೆ ಅನಾನುಕೂಲತೆಯಾಗಿದೆ. ಗ್ರಾಮೀಣ ಕರ್ನಾಟಕದ ಅನೇಕರ ಮೇಲೆ ಪರಿಣಾಮ ಬೀರಿದೆ ಎಂದು ಹೇಳಿದರು.
ಸರ್ಕಾರ ತನ್ನ ನಿರ್ಧಾರವನ್ನು ಹೀಗೆಯೇ ಮುಂದೂಡುತ್ತಲೇ ಇದ್ದರೆ, ವಯಸ್ಸಿನ ಕಾರಣದಿಂದಾಗಿ ಪರೀಕ್ಷೆಗೆ ಹಾಜರಾಗಲು ಸಾಧ್ಯವಾಗದ ಅನೇಕ ಅಭ್ಯರ್ಥಿಗಳು ಇರುತ್ತಾರೆ. ಅವರಿಗೆ ಪರೀಕ್ಷೆಗೆ ಹಾಜರಾಗಲು ಅವಕಾಶವಿರುವುದಿಲ್ಲ. ಅವರ ಭವಿಷ್ಯವು ಅಪಾಯದಲ್ಲಿದೆ. ಕನ್ನಡ ಮಾಧ್ಯಮದ ಅಭ್ಯರ್ಥಿಗಳು ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸಲು ನಮ್ಮ ವೇದಿಕೆಯ ಮೂಲಕ ನಾವು ರಾಜ್ಯ ಸರ್ಕಾರವನ್ನು ಒತ್ತಾಯಿಸುತ್ತಿದ್ದೇವೆಂದು ತಿಳಿಸಿದರು.
ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಆಕಾಂಕ್ಷಿಗಳು ಮಾತನಾಡಿ, ಕನ್ನಡ ಭಾಷಾಂತರದಲ್ಲಿ ಹಲವು ದೋಷಗಳು ಕಂಡು ಬಂದ ಹಿನ್ನೆಲೆಯಲ್ಲಿ ಉತ್ತಮ ಅಂಕಗಳನ್ನು ಗಳಿಸಲು ಸಾಧ್ಯವಾಗಿಲ್ಲ ಎಂದು ಹೇಳಿದರು
Advertisement