

ಕೋಲಾರ: ಜರ್ಮನಿ ಮೂಲದ ಪ್ರತಿಷ್ಠಿತ ಪ್ಯಾಕೇಜಿಂಗ್ ಮತ್ತು ಬಾಟ್ಲಿಂಗ್ ಯಂತ್ರಗಳ ಉತ್ಪಾದನಾ ಸಂಸ್ಥೆ ಕ್ರೋನ್ಸ್ ಕೋಲಾರ ಜಿಲ್ಲೆಯ ವೇಮಗಲ್ ನಲ್ಲಿ ರೂ.315 ಕೋಟಿ ವೆಚ್ಚದಲ್ಲಿ ತನ್ನ ಉತ್ಪಾದನಾ ಘಟಕ ನಿರ್ಮಿಸುತ್ತಿದ್ದು, ಭಾರಿ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ. ಬಿ. ಪಾಟೀಲ್ ಇಂದು ಭೂಮಿಪೂಜೆ ನೆರವೇರಿಸಿದರು.
ಈ ವೇಳೆ ಮಾತನಾಡಿದ ಸಚಿವರು, ಕಳೆದವಾರ ಬೆಂಗಳೂರಿನಲ್ಲಿ ಜರುಗಿದ ಜಾಗಕಿತ ಹೂಡಿಕೆದಾರರ ಸಮಾವೇಶದಲ್ಲಿ ಈ ಯೋಜನೆಗೆ ಪರಸ್ಪರ ಒಪ್ಪಂದ ಮಾಡಿಕೊಳ್ಳಲಾಗಿತ್ತು. ಇದೀಗ ತಯಾರಿಕಾ ಘಟಕ ನಿರ್ಮಾಣ ಪ್ರಕ್ರಿಯೆ ಆರಂಭವಾಗಿರುವುದು ಸಂತಸ ತರಿಸಿದೆ ಎಂದರು.
ಉತ್ಪಾದನಾ ಘಟಕ ನಿರ್ಮಾಣದಿಂದ ಸಹಸ್ರಾರು ಉದ್ಯೋಗ ಸೃಷ್ಟಿಯಾಗಲಿದೆ. ನಮ್ಮ ಸರಕಾರ ಅತ್ಯಂತ ತ್ವರಿತವಾಗಿ ಈ ಒಡಂಬಡಿಕೆಯನ್ನು ಅನುಷ್ಠಾನಗೊಳಿಸಿ, ದೇಶಕ್ಕೇ ಮಾದರಿಯಾಗಿದೆ. ನುಡಿದಂತೆ ನಡೆಯುತ್ತಿದ್ದೇವೆ ಎಂದು ತಿಳಿಸಿದರು.
315 ಕೋಟಿ ರೂಪಾಯಿ ಹಣ ಹಂತ ಹಂತವಾಗಿ ಹೂಡಿಕೆ ಆಗಲಿದೆ. ಇದರಿಂದ 550 ಮಂದಿಗೆ ಉದ್ಯೋಗ ಸಿಗಲಿದೆ. ನಿಮಿಷಕ್ಕೆ ನೂರಾರು ಬಾಟಲಿ ಉತ್ಪಾದಿಸುವ ಯಂತ್ರಗಳನ್ನು ಇಲ್ಲಿ ಉತ್ಪಾದಿಸಲಾಗುತ್ತದೆ. ಸ್ಥಳೀಯ ಹಾಗೂ ಭೂಮಿ ಕಳೆದುಕೊಂಡ ರೈತರ ಮಕ್ಕಳಿಗೆ ಉದ್ಯೋಗ ನೀಡಬೇಕೆಂದು ಸಚಿವರು ಕ್ರೋನ್ಸ್ ಪ್ರತಿನಿಧಿಗಳಲ್ಲಿ ಮನವಿ ಮಾಡಿದರು.
Advertisement