
ಬೆಳಗಾವಿ: ಬೆಳಗಾವಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ಕೆಲ ಸಂಘಟನೆಗಳು ಜಿಲ್ಲೆ ಹಾಗೂ ಸರ್ಕಾರದ ವರ್ಚಸ್ಸಿಗೆ ಧಕ್ಕೆಯುಂಟು ಮಾಡುತ್ತಿವೆ ಎಂದು ಸಚಿವ ಸತೀಶ್ ಜಾರಕಿಹೊಳಿ ಸೋಮವಾರ ಕಿಡಿಕಾರಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿರ್ವಾಹಕನ ಮೇಲಿನ ಹಲ್ಲೆ ಘಟನೆ ಸಂಬಂಧ ಪೊಲೀಸರು ಕ್ರಮ ತೆಗೆದುಕೊಳ್ಳುತ್ತಿದ್ದಾರೆ. ತಪ್ಪಿತಸ್ಥರ ವಿರುದ್ಧ ಕ್ರಮ ಆಗುತ್ತದೆ. ಇಲ್ಲಿಗೆ ಯಾವುದೇ ಸಂಘಟನೆ ಬಂದರೂ ಹೊಡೆತ ಬೀಳುವುದು ನಮಗೆ. ಅದನ್ನು ಗಮನಿಸಬೇಕಾಗುತ್ತದೆ. ಬೆಳಗಾವಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ಕೆಲವು ಸಂಘಟನೆಗಳು ಜಿಲ್ಲೆ ಮತ್ತು ಸರ್ಕಾರದ ವರ್ಚಸ್ಸನ್ನು ಹಾಳು ಮಾಡುತ್ತಿವೆ. ಆದ್ದರಿಂದ, ಪ್ರತಿಭಟನೆಗಾಗಿ ಬೆಳಗಾವಿಗೆ ಬರುತ್ತಿರುವ ಸಂಘಟನೆಗಳನ್ನು ತಡೆಯಬೇಕು ಎಂದು ಹೇಳಿದರು.
ಈ ಪ್ರಕರಣದಲ್ಲಿ ಯಾವುದೇ ರಾಜಕೀಯ ಮಾಡುತ್ತಿಲ್ಲ. ಪೊಲೀಸರು ಅವರ ಕೆಲಸ ಮಾಡಲಿ. ಎರಡು ರಾಜ್ಯಗಳಲ್ಲಿ (ಕರ್ನಾಟಕ ಮತ್ತು ಮಹಾರಾಷ್ಟ್ರ) ಬಸ್‌ಗಳಿಗೆ ಮಸಿ ಬಳಿಯುವುದು ಮತ್ತು ಪ್ರತಿಭಟನೆಗಳಂತಹ ಕೃತ್ಯಗಳು ಬೆಳಗಾವಿ ಮತ್ತು ಸರ್ಕಾರಕ್ಕೆ ಹಾನಿ ಮಾಡುತ್ತವೆ ಎಂದು ತಿಳಿಸಿದರು.
ಬೆಳಗಾವಿ ಜಿಲ್ಲಾಧಿಕಾರಿ ಈಗಾಗಲೇ ಕೊಲ್ಹಾಪುರ ಜಿಲ್ಲಾಧಿಕಾರಿಯೊಂದಿಗೆ ಚರ್ಚೆ ನಡೆಸಿದ್ದಾರೆ ಮತ್ತು ಅಂತರರಾಜ್ಯ ಬಸ್ ಸೇವೆಗಳು ಶೀಘ್ರದಲ್ಲೇ ಪುನರಾರಂಭಗೊಳ್ಳಲಿವೆ. ಯಾವುದೇ ಸಂಘಟನೆಗಳು ಪ್ರತಿಭಟನೆ ನಡೆಸಲು ಬೆಳಗಾವಿಗೆ ಬರಬಾರದು ಎಂದು ಮನವಿ ಮಾಡಿಕೊಂಡರು.
ಮರಾಠಿಗರಿಗೆ ಮರಾಠಿ ಭಾಷೆಯಲ್ಲಿ ದಾಖಲೆ ಕೊಡುವ ಬೆಳಗಾವಿ ಜಿಲ್ಲಾಧಿಕಾರಿ ಕ್ರಮದ ಕುರಿತು ಮಾತನಾಡಿ, ಕೇಂದ್ರ ಉನ್ನತ ಸಮಿತಿಯು ಈ ನಿಟ್ಟಿನಲ್ಲಿ ಆದೇಶಗಳನ್ನು ಹೊರಡಿಸಿದೆ, ಅದನ್ನು ಪಾಲಿಸಬೇಕು. ಈ ವಿಷಯದ ಬಗ್ಗೆ ಸರ್ಕಾರದ ಅನುಮೋದನೆಯ ಕುರಿತು ಚರ್ಚೆಗಳು ನಡೆಯಲಿವೆ ಎಂದು ಹೇಳಿದರು
Advertisement