
ಮೈಸೂರು: ಮರಾಠಿಯಲ್ಲಿ ಮಾತನಾಡದ ಕಾರಣ ಸಾರಿಗೆ ಬಸ್ ನಿರ್ವಾಹಕನ ಮೇಲೆ ಹಲ್ಲೆ ನಡೆಸಿದ ದುಷ್ಕರ್ಮಿಗಳ ವಿರುದ್ಧ ತಕ್ಷಣವೇ ಕ್ರಮ ಕೈಗೊಳ್ಳುವಂತೆ ರಾಜ್ಯ ಸರ್ಕಾರಕ್ಕೆ ಬಿಜೆಪಿ ಸೋಮವಾರ ಒತ್ತಾಯಿಸಿದೆ.
ಮೈಸೂರಿನಲ್ಲಿ ಸೋಮವಾರ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು, ಬೆಳಗಾವಿಯಲ್ಲಿ ಸಾರಿಗೆ ಬಸ್ ನಿರ್ವಾಹಕ ಕನ್ನಡ ಮಾತನಾಡಿ ಎಂದಿದ್ದಕ್ಕೆ ಅವರ ಮೇಲೆ ಮರಾಠಿಗರು ಹಲ್ಲೆ ನಡೆಸಿದ್ದಾರೆ. ದುಷ್ಕರ್ಮಿಗಳ ವಿರುದ್ಧ ಕೂಡಲೇ ಸರ್ಕಾರ ಕ್ರಮ ಕೈಗೊಳ್ಳಬೇಕು. ಕಾನೂನನ್ನು ಕೈಗೆತ್ತಿಕೊಂಡು ಕನ್ನಡಿಗರ ಭಾವನೆಗಳಿಗೆ ನೋವುಂಟು ಮಾಡಿದವರಿಗೆ ಸರ್ಕಾರ ಕ್ರಮ ಪಾಠ ಕಲಿಸಬೇಕೆಂದು ಹೇಳಿದರು.
ರಾಜ್ಯ ಸರ್ಕಾರವು ಕೂಡಲೇ ಮರಾಠಿಗರ ಪುಂಡಾಟವನ್ನು ನಿಲ್ಲಿಸಬೇಕು. ಕನ್ನಡಿಗರು ಗಲಾಟೆ ಮಾಡಿದರೆ ಅವರಿಗಿಂತ ಜೋರಾಗಿ ಇರುತ್ತದೆ. ನಮಗೆ ಪುಂಡಾಟಿಕೆ ಇಷ್ಟ ಇಲ್ಲ. ಕನ್ನಡಿಗರ ವಿಚಾರದಲ್ಲಿ ಈ ಭಂಡ ಸರಕಾರ ರಾಜಕಾರಣ ಮಾಡುತ್ತದೆ ಎಂದು ಅನಿಸುತ್ತಿಲ್ಲ. ಪ್ರಚೋದನಕಾರಿ ಹೇಳಿಕೆ ಕೊಡುವುದು ಮತ್ತು ಪುಂಡಾಟಿಕೆ ಮಾಡುವವರಿಂದ ಎರಡೂ ರಾಜ್ಯಗಳಲ್ಲಿ ಕಾನೂನು- ಸುವ್ಯವಸ್ಥೆ ಹದಗೆಡುವ ಪರಿಸ್ಥಿತಿ ನಿರ್ಮಾಣವಾಗಲಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಇದೇ ವೇಳೆ ಗ್ಯಾರಂಟಿ ಯೋಜನೆ ಕುರಿತು ಮಾತನಾಡಿದ ಅವರು, ರಾಜ್ಯ ಸರ್ಕಾರವು ಗ್ಯಾರಂಟಿ ಹೆಸರಿನಲ್ಲಿ ಜನರ ಕಿವಿಗೆ ಹೂ ಮುಡಿಸುತ್ತಿದೆ. ಒಂದು ಗ್ಯಾರೆಂಟಿ ಯೋಜನೆಯೂ ಫಲಾನುಭವಿಗಳಿಗೆ ಸರಿಯಾಗಿ ತಲುಪಿಲ್ಲ. ಸುಮ್ಮನೆ ಗ್ಯಾರೆಂಟಿ ಎಂದು ಓಡಾಡುತ್ತಿದ್ದಾರೆ. ಕೆಎಸ್ಆರ್'ಟಿಸಿಯನ್ನು ಹಾಳು ಮಾಡಿದ್ದಾಯಿತು. ಈಗ ವಿದ್ಯುತ್ ನಿಗಮವನ್ನೂ ಹಾಳು ಮಾಡುತ್ತಿದ್ದಾರೆಂದು ಟೀಕಿಸಿದರು.
ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಲೆಲ್ಲಾ ಕಾನೂನು ಸುವ್ಯವಸ್ಥೆ ಕುಸಿಯುತ್ತದೆ ಎಂದು ಆರೋಪಿಸಿದರು.
ಮಾಜಿ ಸಂಸದ ಪ್ರತಾಪ್ ಸಿಂಹ ವಿರುದ್ಧ ಎಫ್‌ಐಆರ್ ದಾಖಲಿಸಿರುವ ಕುರಿತು ಮಾತನಾಡಿ, ಬಿಜೆಪಿ ನಾಯಕರಿಗೆ ಇದು ಹೊಸದಲ್ಲ. ಪತ್ರಿಕೆಯಲ್ಲಿನ ಅಂಕಣ ಬರೆದ ಹಿನ್ನೆಲೆಯಲ್ಲಿ ಪ್ರತಾಪ್ ಸಿಂಹ ಅವರಿಗೆ ಜೀವ ಬೆದರಿಕೆ ಇದೆ ಎಂದು ಇದೇ ವೇಳೆ ತಿಳಿಸಿದರು. ಈ ನಡುವೆ ಪ್ರತಾಪ್ ಸಿಂಹ ಅವರು ವಿಜಯೇಂದ್ರ ಅವರನ್ನು ಭೇಟಿ ಮಾಡಿದ್ದು, ಮಾತುಕತೆ ನಡೆಸಿದ್ದಾರೆ.
Advertisement