
ಮೈಸೂರು: ಸಂಸತ್ತಿನಲ್ಲಿ ಡಾ ಬಿಆರ್ ಅಂಬೇಡ್ಕರ್ ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ನೀಡಿದ್ದ ವಿವಾದಾತ್ಮಕ ಹೇಳಿಕೆ ವಿರೋಧಿಸಿ ಚಾಮರಾಜನಗರದಲ್ಲಿ ಮಂಗಳವಾರ ಬಂದ್ ಆಚರಿಸಲಾಯಿತು.
ದಲಿತ ಮಹಾಸಭಾ ಮತ್ತು ಇತರ ದಲಿತ ಸಂಘಟನೆಗಳ ನೇತೃತ್ವದಲ್ಲಿ ಪ್ರತಿಭಟನಾಕಾರರು ನಗರದ ಪಚ್ಚಪ್ಪ ವೃತ್ತದಲ್ಲಿ ಜಮಾಯಿಸಿ ಕೆಲಕಾಲ ಪ್ರತಿಭಟನೆ ನಡೆಸಿದರು. ಅಂಬೇಡ್ಕರ್ ಪ್ರತಿಮೆ, ಭಾವಚಿತ್ರ ಇರಿಸಿ ಧರಣಿ ನಡೆಸಿದರು. ಬೈಕ್ ರ್ಯಾಲಿ, ಪಾದಯಾತ್ರೆ, ರಸ್ತೆ ತಡೆ ನಡೆಸಿ ಟೈರ್‌ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು. ಇದೇ ವೇಳೆ ಅಮಿತ್ ಶಾ ರಾಜೀನಾಮೆಗೆ ಆಗ್ರಹಿಸಿದರು.
ಬಂದ್ ಹಿನ್ನೆಲೆ ದೊಡ್ಡ ಅಂಗಡಿ ಬೀದಿ, ಚಿಕ್ಕ ಅಂಗಡಿ ಬೀದಿ ಮುಂತಾದ ಪ್ರಮುಖ ವಾಣಿಜ್ಯ ಪ್ರದೇಶಗಳು ಮತ್ತು ಮಾರುಕಟ್ಟೆ ವಲಯಗಳು ಸಂಪೂರ್ಣ ಸ್ಥಗಿತಗೊಂಡಿದ್ದರೆ, ಕೆಎಸ್‌ಆರ್‌ಟಿಸಿ ಬಸ್‌ಗಳು ಮತ್ತು ಆಟೋರಿಕ್ಷಾಗಳು ಸೇರಿದಂತೆ ಸಾರ್ವಜನಿಕ ಸಾರಿಗೆ ಸೇವೆಗಳು ಎಂದಿನಂತೆ ಕಾರ್ಯಾಚರಣೆ ನಡೆಸಿದವು.
ಇನ್ನು ಶಾಲಾ-ಕಾಲೇಜುಗಳ ರಜೆ ನಿರ್ಧಾರವನ್ನು ಆಯಾ ಶಾಲೆ ಮತ್ತು ಕಾಲೇಜುಗಳಿಗೆ ಬಿಡಲಾಗಿತ್ತು. ಕೆಲ ಶಾಲೆಗಳು ರಜೆ ಘೋಷಿಸಿದ್ದು ಕಂಡು ಬಂದಿತ್ತು.
ಪಚ್ಚಪ್ಪ ಸರ್ಕಲ್‌ನಿಂದ ಆರಂಭವಾದ ಪ್ರತಿಭಟನಾ ಮೆರವಣಿಗೆ ಡಿವಿಯೇಷನ್ ರಸ್ತೆ, ಕೆಎಸ್ಸಾರ್ಟಿಸಿ ಬಸ್ ನಿಲ್ದಾಣ, ಗುಂಡ್ಲುಪೇಟೆ ಸರ್ಕಲ್, ದೊಡ್ಡಂಗಡಿ ಬೀದಿ, ಚಿಕ್ಕಂಗಡಿ ಬೀದಿ, ಸಂತೇಮರಹಳ್ಳಿ ಸರ್ಕಲ್, ಡಿವಿಯೇಷನ್ ರಸ್ತೆ ಮೂಲಕ ಪಚ್ಚಪ್ಪ ಸರ್ಕಲ್‌ನಲ್ಲಿ ಅಂತ್ಯಗೊಂಡಿತು. ಕೆಲ ಅಡೆತಡೆಗಳ ಹೊರತು ಪಡಿಸಿದರೆ, ಬಂದ್ ಬಹುತೇಕ ಶಾಂತಿಯುತವಾಗಿತ್ತು, ಯಾವುದೇ ಹಿಂಸಾಚಾರದ ಘಟನೆಗಳು ಕಂಡು ಬರಲಿಲ್ಲ.
Advertisement