
ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವರುಣಾ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಶ್ರೀನಿವಾಸಪುರ ಗ್ರಾಮದಲ್ಲಿ ಪಂಚಾಯಿತಿಯ ಆದೇಶವನ್ನು ಉಲ್ಲಂಘಿಸಿದ ಆರೋಪದ ಮೇಲೆ ದಲಿತ ಕುಟುಂಬವೊಂದಕ್ಕೆ ಗ್ರಾಮದ ಮುಖಂಡರು ಸಾಮಾಜಿಕ ಬಹಿಷ್ಕಾರ ಹಾಕಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜನ್ಮಸ್ಥಳ ಸಿದ್ದರಾಮನಹುಂಡಿ ಗ್ರಾಮದ ಬಳಿ ಇರುವ ಶ್ರೀನಿವಾಸಪುರ ಇದೀಗ ವಿವಾದದ ಕೇಂದ್ರವಾಗಿದೆ.
ಗ್ರಾಮದ ಮುಖಂಡರಾದ ಚಿಕ್ಕಂದಯ್ಯ, ಬಸವಯ್ಯ, ಮೋಟ ಮಹದೇವಯ್ಯ, ಮಾಜಿ ಗ್ರಾಮ ಪಂಚಾಯಿತಿ ಸದಸ್ಯ ಮಹದೇವಯ್ಯ ಅವರು ತಮ್ಮ ಕುಟುಂಬಕ್ಕೆ ಬಹಿಷ್ಕಾರ ಹಾಕುವಂತೆ ಆದೇಶ ಹೊರಡಿಸಿದ್ದಾರೆ ಎಂದು ದಲಿತ ಕುಟುಂಬ ಆರೋಪಿಸಿದೆ.
ಕುಟುಂಬದವರ ಪ್ರಕಾರ, ಪಂಚಾಯತಿ ವಿಧಿಸಿದ 15,000 ರೂ. ಗಳ ದಂಡ ಪಾವತಿಸಲು ನಿರಾಕರಿಸಿದ ನಂತರ ಸುರೇಶ್ ಅವರ ಕುಟುಂಬಕ್ಕೆ ಬಹಿಷ್ಕಾರ ವಿಧಿಸಲಾಗಿದೆ.
ಪ್ರಮೋದ್ ಮತ್ತು ಸುರೇಶ್ ನಡುವೆ ಜಗಳ ನಡೆದಿತ್ತು. ಇದೇ ವಿಚಾರವಾಗಿ ಗ್ರಾಮದ ಹಿರಿಯ ಮುಖಂಡರು ಸಭೆ ನಡೆಸಿದ್ದರು ಎಂದು ಕುಟುಂಬದವರು ತಿಳಿಸಿದ್ದಾರೆ.
ಬಳಿಕ ಪ್ರಮೋದ್ ಸಹಚರರು ಸುರೇಶ್ ಅವರ ಮನೆಗೆ ನುಗ್ಗಿ ಅಪಾರ ಹಾನಿ ಮಾಡಿದ್ದಾರೆ ಎನ್ನಲಾಗಿದೆ. ಈ ಬೆಳವಣಿಗೆಯ ಹಿನ್ನೆಲೆಯಲ್ಲಿ ಗ್ರಾಮದ ಮುಖಂಡರು ಮತ್ತೊಂದು ಸಭೆ ನಡೆಸಿ ಎರಡೂ ಕಡೆಯವರಿಗೆ ದಂಡ ವಿಧಿಸಿದ್ದಾರೆ. ಪ್ರಮೋದ್ ಅವರಿಗೆ 25 ಸಾವಿರ ದಂಡ, ಸುರೇಶ್ ಅವರಿಗೆ 15 ಸಾವಿರ ದಂಡ ವಿಧಿಸಿದ್ದಾರೆ. ಆದರೆ, ಈ ನಿರ್ಧಾರಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಸುರೇಶ್, ದಂಡ ಪಾವತಿಸಲು ನಿರಾಕರಿಸಿದ್ದಾರೆ.
ಇದರಿಂದ ಕುಪಿತಗೊಂಡ ಗ್ರಾಮದ ಮುಖಂಡರು, ಸುರೇಶ್ ಅವರು ನಮ್ಮನ್ನು ಅವಮಾನಿಸಿದ್ದಾರೆ ಮತ್ತು ದಂಡ ಪಾವತಿಸುವವರೆಗೆ ಗ್ರಾಮದ ಯಾವುದೇ ಕುಟುಂಬವು ಸುರೇಶ್ ಅವರ ಕುಟುಂಬದೊಂದಿಗೆ ಮಾತುಕತೆ ನಡೆಸಬಾರದು ಎಂದು ಆದೇಶ ನೀಡಿದ್ದಾರೆ.
ಸದ್ಯ ಸುರೇಶ್ ಮತ್ತು ಆತನ ತಾಯಿ ಮಹದೇವಮ್ಮ ಅವರೊಂದಿಗೆ ಗ್ರಾಮದ ಯಾರೊಬ್ಬರೂ ಮಾತನಾಡುತ್ತಿಲ್ಲ. ಹಳ್ಳಿಯಲ್ಲಿ ನಡೆಯುವ ಹಬ್ಬಗಳು, ಆಚರಣೆಗಳು ಮತ್ತು ಅಂತ್ಯಕ್ರಿಯೆಗಳಿಂದ ಅವರ ಕುಟುಂಬವನ್ನು ಹೊರಗಿಡಲಾಗಿದೆ. ಈ ಆದೇಶವನ್ನು ಉಲ್ಲಂಘಿಸಿ ಬಹಿಷ್ಕರಿಸಿದ ಕುಟುಂಬದೊಂದಿಗೆ ಮಾತುಕತೆ ನಡೆಸಿದರೆ 5,000 ರೂ. ದಂಡ ವಿಧಿಸಲಾಗುವುದು ಎಂದು ಗ್ರಾಮದ ಮುಖಂಡರು ಎಚ್ಚರಿಸಿದ್ದಾರೆ.
ಈ ಕುರಿತು ಜಿಲ್ಲಾಧಿಕಾರಿ, ತಹಸೀಲ್ದಾರ್ ಹಾಗೂ ಪೊಲೀಸ್ ಇಲಾಖೆಗೆ ಸುರೇಶ್ ಹಾಗೂ ಮಹದೇವಮ್ಮ ದೂರು ಸಲ್ಲಿಸಿದ್ದಾರೆ.
Advertisement