
ಮಂಗಳೂರು: ಜಾರಿ ನಿರ್ದೇಶನಾಲಯದ(ಇಡಿ) ಅಧಿಕಾರಿಗಳ ಸೋಗಿನಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ಪಟ್ಟಣದ ಉದ್ಯಮಿಯೊಬ್ಬರ ಮನೆಯ ಮೇಲೆ ದಾಳಿ ಮಾಡಿದ ಆರು ಅಪರಿಚಿತ ವ್ಯಕ್ತಿಗಳ ತಂಡ, ಸುಮಾರು 30 ಲಕ್ಷ ರೂಪಾಯಿ ನಗದು ದೋಚಿ, ಐದು ಮೊಬೈಲ್ ಫೋನ್‌ಗಳೊಂದಿಗೆ ಪರಾರಿಯಾಗಿದ್ದಾರೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.
ಜನವರಿ 3ರ ರಾತ್ರಿ ಈ ಘಟನೆ ನಡೆದಿದೆ. ಕೊಳ್ನಾಡು ನಿವಾಸಿ ಹಾಗೂ ಕೃಷಿಕ, ಬೀಡಿ ಉದ್ಯಮಿ ಮೊಹಮ್ಮದ್ ಇಕ್ಬಾಲ್(27) ನೀಡಿದ ದೂರಿನ ಪ್ರಕಾರ ಆರೋಪಿಗಳು ತಮಿಳುನಾಡು ನೋಂದಣಿಯ ವಾಹನದಲ್ಲಿ ರಾತ್ರಿ 8.10ರ ಸುಮಾರಿಗೆ ಅವರ ನಿವಾಸಕ್ಕೆ ಬಂದಿದ್ದಾರೆ.
ತಮ್ಮನ್ನು ತಾವು ಇಡಿ ಅಧಿಕಾರಿಗಳು ಎಂದು ಪರಿಚಯಿಸಿಕೊಂಡಿದ್ದು, ಮನೆಯನ್ನು ಶೋಧಿಸಲು ಆದೇಶವಿದೆ ಎಂದು ಹೇಳಿದ್ದಾರೆ. ಮನೆ ಪ್ರವೇಶಿಸಿದ ನಂತರ, ಅವರು ಶೋಧ ನಡೆಸುವ ಮೊದಲು ಕುಟುಂಬ ಸದಸ್ಯರಿಂದ ಐದು ಮೊಬೈಲ್ ಫೋನ್‌ಗಳನ್ನು ಕಿತ್ತುಕೊಂಡಿದ್ದಾರೆ.
''ತಪಾಸಣೆ ವೇಳೆ, ವ್ಯವಹಾರದ ಉದ್ದೇಶದಿಂದ ಬೀರುದಲ್ಲಿಟ್ಟಿದ್ದ 25-30 ಲಕ್ಷ ರೂ. ನಗದನ್ನು ತೆಗೆದುಕೊಂಡು ಹೋಗಿದ್ದಾರೆ. ಇಷ್ಟು ದೊಡ್ಡ ಮೊತ್ತದ ಹಣವನ್ನು ಮನೆಯಲ್ಲಿ ಇಡಲು ಅನುಮತಿ ಇಲ್ಲ. ಹೀಗಾಗಿ ಬಂಧಿಸುವುದಾಗಿ ಬೆದರಿಕೆ ಹಾಕಿದರು ಎಂದು ಇಕ್ಬಾಲ್ ಹೇಳಿರುವುದಾಗಿ" ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಸರಿಸುಮಾರು ರಾತ್ರಿ 10.30ಕ್ಕೆ, ವಶಪಡಿಸಿಕೊಂಡ ನಗದುಗೆ ಸೂಕ್ತ ದಾಖಲೆಗಳನ್ನು ಒದಗಿಸಿ, ಬೆಂಗಳೂರಿನ ಕಚೇರಿಯಿಂದ ಹಣವನ್ನು ಸಂಗ್ರಹಿಸಬಹುದು ಎಂದು ಕುಟುಂಬಕ್ಕೆ ಭರವಸೆ ನೀಡಿ ನಿವಾಸದಿಂದ ತೆರಳಿದರು ಎಂದು ಅಧಿಕಾರಿ ಹೇಳಿದ್ದಾರೆ.
ಘಟನೆಯ ಬಗ್ಗೆ ಕುಟುಂಬ ಸದಸ್ಯರೊಂದಿಗೆ ಚರ್ಚಿಸಿದ ನಂತರ, ಇಡಿ ಅಧಿಕಾರಿಗಳಂತೆ ಸೋಗಿನಲ್ಲಿ ಬಂದವರು ವಂಚಕರು ಎಂದು ಅರಿತುಕೊಂಡ ನಂತರ ಇಕ್ಬಾಲ್ ಪೊಲೀಸರಿಗೆ ದೂರು ನೀಡಿದ್ದಾರೆ.
ಈ ಸಂಬಂಧ ವಿಟ್ಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಭಾರತೀಯ ನ್ಯಾಯ ಸಂಹಿತೆ(ಬಿಎನ್‌ಎಸ್) 2023ರ ಕಲಂ 319(2) ಮತ್ತು 318(4)ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಗಳನ್ನು ಬಂಧಿಸಲು ಪ್ರಯತ್ನ ನಡೆಸಲಾಗುತ್ತಿದ್ದು, ಸದ್ಯ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.
Advertisement