ಬೆಂಗಳೂರು: 'ಚಿತ್ರ ಸಂತೆ'ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ; ಕಲಾಸಕ್ತರಿಗೆ ವಿಶೇಷ ಮನವಿ

ಕಲಾಸಕ್ತರು ಚಿತ್ರಸಂತೆಗೆ ಭೇಟಿ ನೀಡಿ ಕಲಾಕೃತಿಯನ್ನು ಕೊಂಡು ಕಲಾವಿದರಿಗೆ ಬೆಂಬಲ ನೀಡಬೇಕು. ಮನೆಯಲ್ಲಿ ಕಲಾಕೃತಿಯಿದ್ದರೆ ಚಿತ್ರ ಸಂತೆ ಏರ್ಪಾಡು ಮಾಡಿದ್ದಕ್ಕೂ ಸಾರ್ಥಕವಾಗುತ್ತದೆ.
CM Siddaramaiah
ಚಿತ್ರಸಂತೆ ಉದ್ಘಾಟಿಸಿದ ಸಿಎಂ ಸಿದ್ದರಾಮಯ್ಯ
Updated on

ಬೆಂಗಳೂರು: ಚಿತ್ರಕಲಾ ಪರಿಷತ್ತು ಕುಮಾರಕೃಪಾ ರಸ್ತೆಯಲ್ಲಿ ಆಯೋಜಿಸಿದ್ದ 22ನೇ ಚಿತ್ರಸಂತೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಭಾನುವಾರ ಉದ್ಘಾಟಿಸಿದರು. ಈ ಬಾರಿಯ ಚಿತ್ರಸಂತೆಯನ್ನು ಹೆಣ್ಣುಮಕ್ಕಳಿಗೆ ಸಮರ್ಪಣೆ ಮಾಡಿರುವುದು ವಿಶೇಷವಾಗಿದೆ.

ಬಳಿಕ ಮಾತನಾಡಿದ ಮುಖ್ಯಮಂತ್ರಿ, ಕಲಾಸಕ್ತರು ಚಿತ್ರಸಂತೆಗೆ ಭೇಟಿ ನೀಡಿ ಕಲಾಕೃತಿಯನ್ನು ಕೊಂಡು ಕಲಾವಿದರಿಗೆ ಬೆಂಬಲ ನೀಡಬೇಕು. ಮನೆಯಲ್ಲಿ ಕಲಾಕೃತಿಯಿದ್ದರೆ ಚಿತ್ರ ಸಂತೆ ಏರ್ಪಾಡು ಮಾಡಿದ್ದಕ್ಕೂ ಸಾರ್ಥಕವಾಗುತ್ತದೆ ಎಂದರು.

ಏಳನೇ ಬಾರಿ ಚಿತ್ರಸಂತೆ ಉದ್ಘಾಟಿಸುತ್ತಿದ್ದು, ರಾಜ್ಯದ ಸಂಸ್ಕೃತಿ, ಪರಂಪರೆ, ಸಂಪ್ರದಾಯವನ್ನು ಚಿತ್ರದ ಮೂಲಕ ದೇಶ ಮತ್ತು ಜಗತ್ತಿಗೆ ತಿಳಿಸಬೇಕೆಂಬ ಪ್ರಯತ್ನವನ್ನು ಚಿತ್ರಕಲಾ ಪರಿಷತ್ತು ಮಾಡುತ್ತಿದೆ. ಚಿತ್ರಸಂತೆಯಲ್ಲಿ 22 ರಾಜ್ಯಗಳ ಕಲಾವಿದರು ಪಾಲ್ಗೊಳ್ಳುತ್ತಿರುವುದು ಶ್ಲಾಘನೀಯ. ಜಗತ್ತಿನ ಯಾವ ಭಾಗದಲ್ಲಿಯೂ ಚಿತ್ರಸಂತೆ ನಡೆಯುವುದನ್ನು ನಾನು ನೋಡಿಲ್ಲ. ಕರ್ನಾಟಕದಲ್ಲಿ ಅದರಲ್ಲೂ ಬೆಂಗಳೂರಿನಲ್ಲಿ ಚಿತ್ರಸಂತೆ ನಡೆಯುವುದು ಹೆಮ್ಮೆಯ ಸಂಗತಿ ಎಂದು ಶ್ಲಾಘಿಸಿದರು.

ಬೆಂಗಳೂರಿಗರಿಗೆ ಇದೊಂದು ಸುವರ್ಣಾವಕಾಶವಾಗಿದೆ. ಹೆಣ್ಣುಮಕ್ಕಳ ಪರವಾಗಿ ಕೆಲಸ ಮಾಡಿದ ಮಹಾತ್ಮ ಗಾಂಧಿ, ಅಂಬೇಡ್ಕರ್, ಸಾವಿತ್ರಿಬಾಯಿ ಫುಲೆ, ಫಾತಿಮಾ ಶೇಖ್, ಕಮಲಾ ಬಾಯಿ ಚಟ್ಟೋಪಾಧ್ಯಾಯ, ಯಶೋಧರಮ್ಮ ದಾಸಪ್ಪ, ದತ್ತಮ್ಮ ಮೊದಲಾದವರ ಚಿತ್ರಗಳನ್ನು ಪ್ರದರ್ಶಿಸಿದ್ದಾರೆ. ಒಬ್ಬ ಪುರುಷನಿಗೆ ಶಿಕ್ಷಣ ನೀಡಿದರೆ ಒಬ್ಬ ವ್ಯಕ್ತಿಗೆ ಶಿಕ್ಷಣ ನೀಡಿದಂತಾಗುತ್ತದೆ. ಒಬ್ಬ ಮಹಿಳೆಗೆ ಶಿಕ್ಷಣ ನೀಡಿದರೆ ಒಂದು ಕುಟುಂಬವೇ ಕಲಿತಂತಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ಸಂವಿಧಾನದ ಪೀಠಿಕೆಯನ್ನು ಕೂಡ ಇಲ್ಲಿ ಪ್ರದರ್ಶಿಸಲಾಗಿದ್ದು, ಸಮಾಜದ ಎಲ್ಲಾ ವರ್ಗದ ಜನರನ್ನೂ ಪ್ರತಿನಿಧಿಸುತ್ತಿದೆ. ಒಂದು ಚಿತ್ರ ಸಾವಿರ ಪದಗಳಿಗಿಂತಲೂ ಪ್ರಭಾವಶಾಲಿಯಾಗಿದೆ. ಚಿತ್ರದ ಮೂಲಕ ಜನಜೀವನ, ಸಂಸ್ಕೃತಿ, ಪರಂಪರೆಯನ್ನು ಬಿಂಬಿಸಬಹುದಾಗಿದೆ. ಚಿತ್ರಕಲಾ ಪರಿಷತ್ತು ಉತ್ತಮ ಕೆಲಸ ಮಾಡುತ್ತಿದೆ ಎಂದು ಶ್ಲಾಘಿಸಿದರು.

ಸಚಿವರಾದ ಬೈರತಿ ಸುರೇಶ್, ಡಾ. ಎಂ.ಸಿ. ಸುಧಾಕರ್, ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಹೆಚ್.ಎಂ. ರೇವಣ್ಣ, ಚಿತ್ರಕಲಾ ಪರಿಷತ್ ಅಧ್ಯಕ್ಷ ಬಿ.ಲ್. ಶಂಕರ್ ಸಮಾರಂಭದಲ್ಲಿ ಉಪಸ್ಥಿತರಿದ್ದರು.

ಚಿತ್ರಸಂತೆಗೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸುವ ಹಿನ್ನೆಲೆಯಲ್ಲಿ ಜನಸಂದಣಿಯನ್ನು ಸಮರ್ಥವಾಗಿ ನಿರ್ವಹಿಸಲು ಬೆಂಗಳೂರು ಸಂಚಾರ ಪೊಲೀಸರು ಚಿತ್ರಕಲಾ ಪರಿಷತ್ತು ಮತ್ತು ಕುಮಾರ ಕೃಪಾ ರಸ್ತೆಯ ಸುತ್ತ ಸಂಚಾರ ಮತ್ತು ಪಾರ್ಕಿಂಗ್ ನ್ನು ನಿರ್ಬಂಧಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com