
ಬೆಂಗಳೂರು: ಸಮಾಜದ ಮುಖ್ಯ ವಾಹಿನಿಗೆ ಬರಲು ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದ 6 ನಕ್ಸಲರ ಶರಣಾಗತಿಯಲ್ಲಿ ದಿಢೀರ್ ಬದಲಾವಣೆ ಆಗಿದ್ದು, ಬೆಂಗಳೂರಿನಲ್ಲಿ ಸಿಎಂ ಹಾಗೂ ಗೃಹ ಸಚಿವರ ಮುಂದೆ ಮಂಗಳವಾರ ಶರಣಾಗತಿಯಾಗಲಿದ್ದಾರೆಂದು ತಿಳಿದುಬಂದಿದೆ.
ಆರು ಮಂದಿ ನಕ್ಸಲರು ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಗೃಹ ಸಚಿವ ಪರಮೇಶ್ವರ್ ಅವರ ಮುಂದೆ ಶರಣಾಗುವ ಸಾಧ್ಯತೆಯಿದೆ ಎಂದು ವರದಿಗಳು ತಿಳಿಸಿವೆ.
ಮುಂಡಗಾರು ಲತಾ, ಸುಂದರಿ ಕುತ್ಲೂರು, ವನಜಾಕ್ಷಿ ಬಾಳೆಹೊಳೆ, ಕರ್ನಾಟಕದ ಮರೆಪ್ಪ ಅರೋಲಿ, ತಮಿಳುನಾಡಿನ ಕೆ ವಸಂತ್ ಮತ್ತು ಕೇರಳದ ಜೀಶಾ ಶರಣಾಗತಿಯಾಗಲಿದ್ದಾರೆಂದು ಮೂಲಗಳು ತಿಳಿಸಿವೆ.
ಈ ಕುರಿತು ಗೃಹ ಸಚಿವರಾದ ಪರಮೇಶ್ವರ್ ಅವರು ಮಾಹಿತಿ ನೀಡಿದ್ದು, ನಕ್ಸಲರು ಶರಣಾಗುತ್ತಿದ್ದಾರೆ ಎಂಬುದನ್ನು ಮಾತ್ರ ಹೇಳಬಲ್ಲೆ. ಶರಣಾಗುತ್ತಿರುವವರ ಬೇಡಿಕೆ ಹಾಗೂ ಇತರೆ ಮಾಹಿತಿಗಳನ್ನು ಬಹಿರಂಗಪಡಿಸಲು ಸಾಧ್ಯವಿಲ್ಲ ಎಂದು ಹೇಳಿದರು.
ಬಿಜೆಪಿ ವಿರೋಧ ಕುರಿತು ಪ್ರತಿಕ್ರಿಯಿಸಿ, ವಿಕ್ರಂಗೌಡ ಸಾವು ಆದಾಗ, ಶರಣಾಗುವಂತೆ ನಕ್ಸಲರಿಗೆ ಕರೆ ಕೊಡಲಾಗಿತ್ತು. ಜೀವನದಲ್ಲಿ ಯಾಕೆ ಈ ದಾರಿ ಹಿಡಿದಿದ್ದೀರಿ. ಸಮಾಜದ ಮುನ್ನೆಲೆಗೆ ಬನ್ನಿ ಎಂದು ಆಹ್ವಾನ ನೀಡಿದ್ದೆ. ಅದೇ ರೀತಿಯಾಗಿ ಎಎನ್‌ಎಫ್ ಹಿರಿಯ ಅಧಿಕಾರಿಗಳು ಸಮಾಜದ ಮುಖ್ಯವಾಹಿನಿಗೆ ಬರುವಂತೆ ಕರೆ ಕೊಟ್ಟಿದ್ದರು. ಅನೇಕ ಪ್ರಸ್ತುತ ಶರಣಾಗುತ್ತಿರುವ ನಕ್ಸಲರ ವಿರುದ್ಧ ಅನೇಕ ಪ್ರಕರಣಗಳಿರುವುದು ನಿಜ. ಶರಣಾದ ನಂತರ ಯಾವ ರೀತಿ ಚರ್ಚೆ ಮಾಡಬೇಕು, ಕಾನೂನಿನಲ್ಲಿ ಏನು ಅವಕಾಶವಿದೆ ಎಂಬುದನ್ನು ನೋಡುತ್ತೇವೆ ಎಂದು ಹೇಳಿದರು.
ನಿನ್ನೆಯಷ್ಟೇ ಮಾತನಾಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ನಕ್ಸಲ್ ಚಟುವಟಿಕೆಗಳಲ್ಲಿ ಭಾಗಿಯಾಗಿರುವ ಕೆಲವರು ಮುಂದಿನ ದಿನಗಳಲ್ಲಿ ರಾಜ್ಯದ ಮುಂದೆ ಶರಣಾಗುವ ಸಾಧ್ಯತೆಗಳಿವೆ ಎಂದು ಸುಳಿವು ನೀಡಿದ್ದರು.
ಪರಮೇಶ್ವರ್ ಅವರ ಕೂಡ ಹೇಳಿಕೆ ನೀಡಿ, ರಾಜ್ಯವನ್ನು ನಕ್ಸಲ್ ಮುಕ್ತವನ್ನಾಗಿಸಲು ಸರ್ಕಾರ ಬಯಸಿದ್ದು, ಮುಂದಿನ ದಿನಗಳಲ್ಲಿ ಸಕ್ರಿಯವಾಗಿರುವ ಮಾವೋವಾದಿಗಳು ಶರಣಾಗುವಂತೆ ಮಾಡಲು ಪ್ರಯತ್ನಿಸಲಾಗುತ್ತಿದೆ ಎಂದು ಹೇಳಿದ್ದರು.
ಹಿಂಸಾತ್ಮಕ ಚಟುವಟಿಕೆಗಳಲ್ಲಿ ತೊಡಗಿರುವ ನಕ್ಸಲೀಯರು (ಮಾವೋವಾದಿಗಳು) ಶರಣಾಗುವಂತೆ ಮತ್ತು ಪ್ರಜಾಪ್ರಭುತ್ವದ ಮುಖ್ಯವಾಹಿನಿಗೆ ಬರುವಂತೆ ಮನವಿ ಮಾಡಿದ್ದರು.
ನಕ್ಸಲರಿಗಾಗಿ ಸರ್ಕಾರ ಈಗಾಗಲೇ ಶರಣಾಗತಿ ನೀತಿಯನ್ನು ರೂಪಿಸಿದ್ದು, ಈ ನೀತಿಯನ್ನು ಸರಳೀಕರಿಸಿ ಪರಿಣಾಮಕಾರಿಯಾಗಿ ಜಾರಿಗೊಳಿಸಲಾಗುವುದು ಎಂದು ಹೇಳಿದ್ದರು.
ನವೆಂಬರ್ 18, 2024 ರಂದು ಉಡುಪಿ ಜಿಲ್ಲೆಯ ಹೆಬ್ರಿಯ ಪೀತಬೈಲು ಗ್ರಾಮದಲ್ಲಿ ನಕ್ಸಲ್ ನಿಗ್ರಹ ಪಡೆ ಎನ್‌ಕೌಂಟರ್‌ನಲ್ಲಿ ಮಾವೋವಾದಿ ನಾಯಕ ವಿಕ್ರಮ್ ಗೌಡನನ್ನು ಹತ್ಯೆ ಮಾಡಲಾಗಿತ್ತು. ಇದರ ಬೆನ್ನಲ್ಲೇ ನಕ್ಸಲರ ಶರಣಾಗತಿ ಕುರಿತು ಚರ್ಚೆಗಳು ನಡೆಯುತ್ತಿವೆ.
Advertisement