
ತುಮಕೂರು: ಗ್ರಾಮಸ್ಥರಿಗೆ ಕಾಟ ನೀಡುತ್ತಿದ್ದ ಚಿರತೆಯೊಂದನ್ನು ವ್ಯಕ್ತಿನೋರ್ವ ಬರಿಗೈನಲ್ಲೇ ಅದರ ಬಾಲ ಹಿಡಿದು ಬಂಧಿಸಿರುವ ಘಟನೆ ತುಮಕೂರು ಜಿಲ್ಲೆಯಲ್ಲಿ ನಡೆದಿದೆ.
ತುಮಕೂರು (Tumakuru) ಜಿಲ್ಲೆ ತಿಪಟೂರು (Tiptur) ತಾಲೂಕಿನ ರಂಗಾಪುರ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಆನಂದ್ ಎಂಬಾತ ತಪ್ಪಿಸಿಕೊಳ್ಳುತ್ತಿದ್ದ ಚಿರತೆ (Leopard)ಯ ಬಾಲ ಹಿಡಿದು ಬೋನಿಗೆ ಹಾಕಿದ್ದಾನೆ.
ಚಿರತೆಯೊಂದು ಹಲವು ದಿನಗಳಿಂದ ರಂಗಾಪುರ ಗ್ರಾಮದ ಸುತ್ತಮುತ್ತ ಕಾಣಿಸಿಕೊಳ್ಳುತ್ತಿದ್ದು, ಗ್ರಾಮಸ್ಥರಲ್ಲಿ ಆತಂಕ ಸೃಷ್ಟಿಸಿತ್ತು. ಇತ್ತೀಚೆಗೆ ಪುರಲೇಹಳ್ಳಿ ರಸ್ತೆಯಲ್ಲಿರುವ ಕುಮಾರ್ ಎಂಬವರ ಮನೆ ಬಳಿ ಚಿರತೆ ಕಾಣಿಸಿಕೊಂಡಿತ್ತು. ಈ ಹಿನ್ನೆಲೆ ಅರಣ್ಯ ಇಲಾಖೆ (Forest Department) ಸಿಬ್ಬಂದಿಗೆ ಮಾಹಿತಿ ನೀಡಲಾಗಿತ್ತು.
ಅರಣ್ಯ ಇಲಾಖೆ ಸಿಬ್ಬಂದಿ ಬಲೆ ಬಿಟ್ಟು ಚಿರತೆ ಸೆರೆಹಿಡಿಯುವ ಸಲುವಾಗಿ ಸಕಲ ಸಲಕರಣೆಗಳೊಂದಿಗೆ ಬಂದಿದ್ದರು. ಆದರೆ ಚಿರತೆ ಅವರಿಂದ ತಪ್ಪಿಸಿಕೊಂಡು ಪರಾರಿಯಾಗುತ್ತಿತ್ತು. ಹೀಗಾಗಿ ಅಧಿಕಾರಿಗಳು ಮತ್ತು ಸಿಬ್ಬಂದಿ ಚಿರತೆ ಸೆರೆಹಿಡಿಯಲಾಗದೇ ಕೈಚೆಲ್ಲಿ ಕುಳಿತರು. ಅಲ್ಲದೆ ಚಿರತೆ ಬಂಧನ ಕಾರ್ಯಾಚರಣೆ ಮುಂದುವರೆದಿತ್ತು.
ಈ ವೇಳೆ ಗ್ರಾಮದಲ್ಲಿ ನಡೆಯುತ್ತಿದ್ದ ಚಿರತೆ ಸೆರೆ ಕಾರ್ಯಾಚರಣೆ ವೀಕ್ಷಣೆಗೆ ಬಂದಿದ್ದ ಆನಂದ್ ಎಂಬಾತ ಸಿಬ್ಬಂದಿಗೆ ನೆರವಾಗಿದ್ದಾನೆ. ಅರಣ್ಯಾಧಿಕಾರಿಗಳು ಹಾಕಿದ್ದ ಬಲೆಯಿಂದ ತಪ್ಪಿಸಿಕೊಂಡು ಬಂದ ಚಿರತೆಯನ್ನು ಆನಂದ್ ಬರಿಗೈಯಲ್ಲೇ ಅದರ ಬಾಲ ಹಿಡಿದು ಬಂಧಿಸಿದ್ದಾನೆ. ಕೂಡಲೇ ಅರಣ್ಯ ಸಿಬ್ಬಂದಿ ಬಲೆ ತಂದು ಅದರ ಮೇಲೆ ಹಾಕಿ ಅದನ್ನು ಬಂಧಿಸಿ ಬೋನಿಗೆ ಹಾಕಿದ್ದಾರೆ.
5 ವರ್ಷದ ಮರಿ ಚಿರತೆ
ಇನ್ನು ಪ್ರಸ್ತುತ ಸೆರೆಯಾದ ಚಿರತೆ ಇನ್ನೂ ಮರಿ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದು, ಅದಕ್ಕೆ ಸುಮಾರು 5 ವರ್ಷ ಇರಬಹುದು. ಅದರ ತಾಯಿಯಿಂದ ಬೇರ್ಪಟ್ಟು ಆಹರ ಅರಸಿ ನಾಡಿಗೆ ಬಂದಿದೆ ಎಂದು ಹೇಳಿದ್ದಾರೆ. ಇನ್ನು 5 ವರ್ಷದ ಚಿರತೆಯನ್ನು ಆನಂದ್ ಸೆರೆಹಿಡಿದಿದ್ದನ್ನು ಕಂಡು ಅರಣ್ಯ ಇಲಾಖೆ ಸಿಬ್ಬಂದಿ ಶಾಕ್ ಆಗಿದ್ದಾರೆ. ಆನಂದ್ ಸಾಹಸಕ್ಕೆ ಇಡೀ ಸುತ್ತಮುತ್ತಲಿನ ಗ್ರಾಮಸ್ಥರೆಲ್ಲಾ ಖುಷಿಯಾಗಿದ್ದು, ಅವರ ಧೈರ್ಯ, ಸಾಹಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಕರ್ನಾಟಕದ ಬೆಂಗಳೂರಿನಲ್ಲೂ ಚಿರತೆ ಭೀತಿ ವರದಿಯಾಗಿದೆ. ಕಳೆದ ವರ್ಷ ನವೆಂಬರ್‌ನಲ್ಲಿ 52 ವರ್ಷದ ಮಹಿಳೆಯೊಬ್ಬರನ್ನು ಚಿರತೆ ಕೊಂದು ಹಾಕಿತ್ತು. ಸಂತ್ರಸ್ತ ಮಹಿಳೆ ಕರಿಯಮ್ಮ ನವೆಂಬರ್ 17 ರಂದು ತನ್ನ ಮನೆಯ ಸಮೀಪವಿರುವ ಹೊಲದಲ್ಲಿ ಹುಲ್ಲು ಕತ್ತರಿಸುತ್ತಿದ್ದಾಗ ಚಿರತೆ ಆಕೆಯ ಮೇಲೆ ದಾಳಿ ಮಾಡಿ ಕೊಂದು ಹಾಕಿತ್ತು.
ಚಿರತೆ ಆಕೆಯನ್ನು ಕಾಡಿಗೆ ಎಳೆದೊಯ್ದಿದ್ದು, ಆಕೆಯನ್ನು ಕೊಂದು ದೇಹದ ಭಾಗಗಳನ್ನು ತಿಂದು ಹಾಕಿದೆ ಎಂದು ವರದಿಯಾಗಿದೆ. ಒಂದು ವಾರದ ನಂತರ, ಅರಣ್ಯ ಇಲಾಖೆಯು ಹಳ್ಳಿಯಿಂದ ಎರಡು ಚಿರತೆಗಳನ್ನು ಸೆರೆಹಿಡಿದಿದ್ದರು. ಏಳು ವರ್ಷದ ಗಂಡು ಮತ್ತು ಒಂಬತ್ತು ವರ್ಷದ ಹೆಣ್ಣು ಚಿರತೆಗಳನ್ನು ಸೆರೆ ಹಿಡಿದಿದ್ದರು.
Advertisement