ಕೇಂದ್ರ ಸಚಿವ ನಿತಿನ್ ಗಡ್ಕರಿ ಭೇಟಿಯಾದ HD ಕುಮಾರಸ್ವಾಮಿ: STRR ಯೋಜನೆ ತ್ವರಿತ ಅನುಷ್ಠಾನಕ್ಕೆ ಮನವಿ
ಬೆಂಗಳೂರು: ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಸಚಿವ ಎಚ್‌ಡಿ ಕುಮಾರಸ್ವಾಮಿ ಅವರು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರನ್ನು ಬುಧವಾರ ಭೇಟಿ ಮಾಡಿದ್ದು, ಬೆಂಗಳೂರಿನ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡುವ ಗುರಿಯನ್ನು ಹೊಂದಿರುವ ಸ್ಯಾಟಲೈಟ್ ಟೌನ್ ರಿಂಗ್ ರಸ್ತೆ (ಎಸ್‌ಟಿಆರ್‌ಆರ್) ಯೋಜನೆಯನ್ನು ತ್ವರಿತ ಅನುಷ್ಠಾನಗೊಳಿಸುವಂತೆ ಮನವಿ ಮಾಡಿದರು.
ನವದೆಹಲಿಯಲ್ಲಿ ನಿತಿನ್ ಗಡ್ಕರಿ ಅವರನ್ನು ಭೇಟಿಯಾದ ಕುಮಾರಸ್ವಾಮಿ ಅವರು, ಮಂಡ್ಯದ ವರ್ತುಲ ರಸ್ತೆ ಯೋಜನೆ (ಬಾಕಿ ಉಳಿದಿರುವ ಕಾಮಗಾರಿ) ಸೇರಿ ರಾಜ್ಯದ ಕೆಲ ಮಹತ್ವಪೂರ್ಣ ರಾಷ್ಟ್ರೀಯ ಹೆದ್ದಾರಿ ಯೋಜನೆಗಳ ಬಗ್ಗೆ ಚರ್ಚಿಸಿದರು.
ಕುಮಾರಸ್ವಾಮಿಯವರ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಸಚಿವ ನಿತಿನ್ ಖಡ್ಕರಿ ಅವರು, ಯೋಜನೆಗಳ ಬಗ್ಗೆ ತಕ್ಷಣವೇ ಖುದ್ದಾಗಿ ಗಮನ ಹರಿಸುವುದಾಗಿ ಭರವಸೆ ನೀಡಿದರು.
ಮಂಡ್ಯ ಹೆದ್ದಾರಿಯ ಬೈಪಾಸ್ ರಸ್ತೆ ಅಗಲೀಕರಣ, ವೈಟ್ ಟ್ಯಾಪಿಂಗ್ ಹಾಗೂ ಎನ್ಎಚ್-275ರಲ್ಲಿರುವ ಮಂಡ್ಯ ನಗರದ ಎಲ್ಲಾ ಜಂಕ್ಷನ್ ಗಳು, ಪಾದಚಾರಿ ಮಾರ್ಗಗಳನ್ನೂ ಅಭಿವೃದ್ಧಿ ಮಾಡಬೇಕು. ಜೇವರ್ಗಿ- ಚಾಮರಾಜನಗರ ರಾಷ್ಟ್ರೀಯ ಹೆದ್ದಾರಿ (ಎನ್ಎಚ್-150A)ಯಲ್ಲಿನ ಪಾಂಡವಪುರ ಪಟ್ಟಣ, ಕಿರಂಗೂರು ಬಳಿಯ ಹೆದ್ದಾರಿ ಅಭಿವೃದ್ಧಿ ಮಾಡುವ ಬಗ್ಗೆಯೂ ಚರ್ಚಿಸಿದರು. ಆಂಧ್ರ ಪ್ರದೇಶದ ಕುಪ್ಪಂ- ಬಂಗಾರಪೇಟೆ- ಕೋಲಾರ -ಚಿಂತಾಮಣಿ, ಚಿಂತಾಮಣಿಯ ಗಜಾನನ ಸರ್ಕಲ್- ಚೇಳೂರು, ರಾಷ್ಟ್ರೀಯ ಹೆದ್ದಾರಿ ಎನ್ಎಚ್-75ರಿಂದ ಹೊಸಕೋಟೆ -ಹೆಚ್.ಕ್ರಾಸ್- ಚಿಂತಾಮಣಿ ನಡುವೆ ಸಂಪರ್ಕ ಕಲ್ಪಿಸುವ ಎನ್ಎಚ್-69, ಎನ್ಎಚ್-42ರಿಂದ ಹೊಸಕೋಟೆ -ಗೌನಿಪಲ್ಲಿ - ಶ್ರೀನಿವಾಸಪುರ ಮೂಲಕ ಎನ್ಎಚ್-75ಕ್ಕೆ ಸಂಪರ್ಕ ಕಲ್ಪಿಸುವ ಹೆದ್ದಾರಿ ಯೋಜನೆಗಳ ಕುರಿತು ಕುಮಾರಸ್ವಾಮಿಯವರು ಸಚಿವರ ಗಮನ ಸೆಳೆದರು.
ಬೆಂಗಳೂರು ಮಹಾನಗರದ ವಾಹನ ದಟ್ಟಣೆ ತಗ್ಗಿಸುವ ಉಪ ನಗರ ವರ್ತುಲ ರಸ್ತೆ ಯೋಜನೆ (Satellite Town Ring Road-STRR) ಶೀಘ್ರ ಅನುಷ್ಠಾನದ ಬಗ್ಗೆಯೂ ಮನವಿ ಮಾಡಿದರು.
ಈ ವೇಳೆ ಗಡ್ಕರಿಯವರು ಆದಷ್ಟು ಬೇಗ 'ಸಾರ್ವಜನಿಕ ಖಾಸಗಿ ಸಹಭಾಗಿತ್ವದ ಮೌಲ್ಯಮಾಪನ ಸಮಿತಿ' (Public Private Partnership Appraisal Committee - PPPAC) ಮುಂದೆ ಯೋಜನೆಯನ್ನು ತಂದು ತ್ವರಿತವಾಗಿ ಅನುಷ್ಠಾನಗೊಳಿಸುವ ಭರವಸೆ ನೀಡಿದರು.
ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ತುಮಕೂರು, ರಾಮನಗರ ಜಿಲ್ಲೆಗಳಿಗೆ ಈ ಯೋಜನೆ ವರದಾನವಾಗಿದ್ದು, ಬೆಂಗಳೂರು ನಗರ ಸಂಚಾರ ದಟ್ಟಣೆ ತಗ್ಗಿಸಲು ರಾಮಬಾಣವಾಗಿದೆ.
ಮಂಗಳವಾರ (ಜ. 7) ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರನ್ನು ಭೇಟಿಯಾಗಿದ್ದ ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಹೆಚ್ ಡಿ ಕುಮಾರಸ್ವಾಮಿ ಅವರು, ಮೈಸೂರಿನಲ್ಲಿ ರೈಲ್ವೆ ರಕ್ಷಣಾ ತರಬೇತಿ ಸಂಸ್ಥೆ ಸ್ಥಾಪಿಸುವಂತೆ ಮನವಿ ಮಾಡಿದ್ದರು.
ಈ ಮನವಿಗೆ ರೈಲ್ವೆ ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಇದು ಅತ್ಯಂತ ಮಹತ್ವದ ಪ್ರಸ್ತಾವನೆ. ಈ ಬಗ್ಗೆ ಖುದ್ದು ತಾವೇ ಗಮನ ಹರಿಸುವುದಾಗಿ ತಿಳಿಸಿದರು ಎಂದು ಕುಮಾರಸ್ವಾಮಿಯವಕು ಮಾಹಿತಿ ಹಂಚಿಕೊಂಡಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ