
ಬೆಂಗಳೂರು: ಅತ್ಯಾಚಾರ ಪ್ರಕರಣದಲ್ಲಿ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ದೋಷಾರೋಪಣೆ ನಿಗದಿಪಡಿಸುವ ಪ್ರಕ್ರಿಯೆಗೆ ಜ.16ರವರಗೆ ತಡೆಯಾಜ್ಞೆ ನೀಡಿ ಹೈಕೋರ್ಟ್ ಗುರುವಾದ ಮಧ್ಯಂತರ ಆದೇಶ ಮಾಡಿದೆ.
ಪ್ರಜ್ವಲ್ ಕಾರು ಚಾಲಕನ ಸ್ಯಾಮ್‌ಸಂಗ್ ಫೋನ್‌ನಿಂದ ಪಡೆದಿರುವ ಫೋಟೊ ಮತ್ತು ಎಲ್ಲಾ ವಿಡಿಯೊಗಳನ್ನು ಒದಗಿಸಲು ಪ್ರಾಸಿಕ್ಯೂಷನ್‌ಗೆ ನಿರ್ದೇಶಿಸಬೇಕು ಎಂದು ಕೋರಿ ಪ್ರಜ್ವಲ್ ರೇವಣ್ಣ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.
ಅರ್ಜಿದಾರರ ಪರ ವಾದ ಮಂಡಿಸಿದ ವಕೀಲರು, ಪ್ರಾಸಿಕ್ಯೂಷನ್ ಸಂಗ್ರಹಿಸಿದ ದಾಖಲೆಗಳ ಕುರಿತು ತಮಗೆ ಸಂಪೂರ್ಣ ವರದಿ ನೀಡಿಲ್ಲ. ವಿಚಾರಣಾಧೀನ ನ್ಯಾಯಾಲಯದಲ್ಲಿ ಅರ್ಜಿದಾರರನ್ನು ಸಮರ್ಥಿಸಿಕೊಳ್ಳಲು ಅವುಗಳ ಅಗತ್ಯವಿದೆ ಎಂದು ಹೇಳಿದರು.
ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸರ್ಕಾರಿ ಪರ ವಕೀಲರು, ಅರ್ಜಿದಾರರಿಗೆ ಈಗಾಗಲೇ ಪೆನ್ ಡ್ರೈವ್ ಗಳು ಮತ್ತು ಡಿವಿಡಿಗಳನ್ನು ಒದಗಿಸಲಾಗಿದೆ. ಫೋನ್ ನಲ್ಲಿ ಕಂಡು ಬಂದ ಸಂಪೂರ್ಣ ಡೇಟಾ ಮತ್ತು ವಿಷಯಗಳನ್ನು ಅವರು ಕೋರುತ್ತಿದ್ದಾರೆ. ಕಾಲು ಚಾಲಕನ ಮೊಬೈಲ್ ಫೋನ್ ನಲ್ಲಿ ಪಡೆದಿರುವ ಎಲ್ಲಾ 2,000 ವಿಡಿಯೋ ಮತ್ತು 15,000 ಫೋಟೋವನ್ನು ಅವರಿಗೆ ಒದಗಿಸಲಾಗದು. ಏಕೆಂದರೆ ಅಲ್ಲಿ ಹಲವು ಮಹಿಳೆಯರ ಖಾಸಗಿತನಕ್ಕೆ ಸಮಸ್ಯೆಯಾಗುತ್ತದೆ ಎಂದು ತಿಳಿಸಿದರು.
ಈ ವೇಳೆ ಪೀಠವು ದೂರುದಾರರನ್ನು ಹೊರತುಪಡಿಸಿ ಉಳಿದ ಸಂಸ್ತ್ರಸ್ತರ ಗುರುತು ಬಹಿರಂಗವಾಗುವುದಕ್ಕೆ ಹಾಗೂ ಅವರ ಬದುಕಿಗೆ ತೊಂದರೆಯಾಗುವುದಕ್ಕೆ ನ್ಯಾಯಾಲಯ ಅವಕಾಶ ನೀಡುವುದಿಲ್ಲ. ಆದರೆ, ಅರ್ಜಿದಾರರು ಕೇಳುತ್ತಿರುವ ದಾಖಲೆ ಸಾವಿರಾರು ಪುಟಗಳಷ್ಟಿವೆ ಎಂದು ಪ್ರಾಸಿಕ್ಯೂಷನ್ ಹೇಳುತ್ತಿದೆ. ಅದರ ಅವಶ್ಯಕತೆ ನಿಮಗೆ ಏನಿದೆ ಎಂದು ಪ್ರಶ್ನಿಸಿತು. ಬಳಿಕ ಅರ್ಜಿಯ ವಿಚಾರಣೆಯನ್ನು ಜನವರಿ 16 ಕ್ಕೆ ಮುಂದೂಡಿತು.
Advertisement