ಬಗರ್ ಹುಕುಂ ಅಡಿ 5,600 ರೈತರಿಗೆ ಡಿಜಿಟಲ್ ಭೂ ದಾಖಲೆಗಳ ವಿತರಣೆ: ಸಚಿವ ಕೃಷ್ಣ ಬೈರೇಗೌಡ

ಅಕ್ರಮ-ಸಕ್ರಮ ಬಗರ್‌ ಹುಕುಂ ಯೋಜನೆಯ ಅಡಿಯಲ್ಲಿ ಅರ್ಜಿ ಸಲ್ಲಿಸಿದ ಫಲಾನುಭವಿಗಳು ಜಮೀನು ಪಡೆಯಲು ಅರ್ಹರು. ಅಂತವರಿಗೆ ಸಾಗುವಳಿ ಚೀಟಿ ನೀಡುವುದು ಸರ್ಕಾರದ ಕರ್ತವ್ಯ.
ಸಚಿವ ಕೃಷ್ಣ ಬೈರೇಗೌಡ
ಸಚಿವ ಕೃಷ್ಣ ಬೈರೇಗೌಡ
Updated on

ಬೆಂಗಳೂರು: ಬಗರ್ ಹುಕುಂ ಅಡಿಯಲ್ಲಿ ಈ ತಿಂಗಳು 5,600 ರೈತರಿಗೆ ಡಿಜಿಟಲ್ ಭೂ ದಾಖಲೆಗಳ ನೀಡಲಾಗುವುದು ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಶುಕ್ರವಾರ ಹೇಳಿದರು.

ಶುಕ್ರವಾರ ತಹಶೀಲ್ದಾರ್‌ಗಳು ಮತ್ತು ಭೂ ದಾಖಲೆಗಳ ಸಹಾಯಕ ನಿರ್ದೇಶಕರೊಂದಿಗೆ ವಿಡಿಯೋ ಕಾನ್ಫರೆನ್ಸ್ ಸಭೆ ನಡೆಸಿದ ಸಚಿವರು, ಅಕ್ರಮ-ಸಕ್ರಮ ಬಗರ್‌ ಹುಕುಂ ಯೋಜನೆಯ ಅಡಿಯಲ್ಲಿ ಅರ್ಜಿ ಸಲ್ಲಿಸಿದ ಫಲಾನುಭವಿಗಳು ಜಮೀನು ಪಡೆಯಲು ಅರ್ಹರು. ಅಂತವರಿಗೆ ಸಾಗುವಳಿ ಚೀಟಿ ನೀಡುವುದು ಸರ್ಕಾರದ ಕರ್ತವ್ಯ. ಒಂದು ವೇಳೆ ಅರ್ಜಿ ಸಲ್ಲಿಸಿದವರು ಮೃತಪಟ್ಟಿದ್ದರೆ ಅವರಿಗೆ ಸಂಬಂಧಿಸಿದ ಅರ್ಹ ಕುಟುಂಬಸ್ಥರಿಗೆ ಜಮೀನು ಮಂಜೂರುಗೊಳಿಸಬೇಕು ಎಂದು ಹೇಳಿದರು.

ಅನುಕೂಲಸ್ಥರಿಗೆ ಎಲ್ಲಾ ಮಾಹಿತಿ ಇರುತ್ತದೆ. ತಮಗೆ ಬೇಕಾದ ಸರ್ಕಾರಿ ಸವಲತ್ತನ್ನು ತಾವಾಗಿಯೇ ಪಡೆದುಕೊಳ್ಳುತ್ತಾರೆ. ಆದರೆ, ಬಡವರಿಗೆ, ಸಮಾಜದ ಕಟ್ಟಕಡೆಯ ಸ್ತರದಲ್ಲಿ ಬದುಕುತ್ತಿರುವವರಿಗೆ ಮಾಹಿತಿ ಕೊರತೆ ಇರುತ್ತದೆ. ಇಂತವರಿಗೆ ಅಧಿಕಾರಿಗಳೇ ಮಾಹಿತಿ ನೀಡಿ, ಸರ್ಕಾರಿ ಸವಲತ್ತುಗಳನ್ನು ತಲುಪಿಸಬೇಕು. ಬಗರ್‌ ಹುಕುಂ ಅರ್ಜಿ ಅರ್ಹವಾಗಿದ್ದಲ್ಲಿ ಅಧಿಕಾರಿಗಳೇ ಜವಾಬ್ದಾರಿ ವಹಿಸಿಕೊಂಡು ಜಮೀನು ಮಂಜೂರು ಮಾಡಬೇಕು,

ಜನವರಿ 15ರ ಒಳಗೆ 15,000 ಫಲಾನುಭವಿಗಳಿಗೆ ಬಗರ್‌ ಹುಕುಂ ಯೋಜನೆಯ ಅಡಿಯಲ್ಲಿ ಸಾಗುವಳಿ ಚೀಟಿ ನೀಡಬೇಕು ಎಂಬ ಗುರಿಯನ್ನು ಅಧಿಕಾರಿಗಳಿಗೆ ನೀಡಲಾಗಿತ್ತು. ಈ ಗುರಿಯನ್ನು ಸಾಧಿಸಲಾಗದಿದ್ದರೂ ಇದೇ ಅವಧಿಯಲ್ಲಿ ಕನಿಷ್ಟ 5600ಕ್ಕೂ ಅಧಿಕ ಅರ್ಹ ಫಲಾನುಭವಿಗಳನ್ನು ಗುರುತಿಸಿರುವುದು ಹಾಗೂ ಎಲ್ಲಾ ಜಿಲ್ಲೆ-ತಾಲೂಕುಗಳಲ್ಲೂ ಈ ಸಂಬಂಧ ಸಕಾರಾತ್ಮಕ ಬೆಳವಣಿಗೆ ಕಂಡುಬಂದಿರುವುದು ಉತ್ತಮ ಬೆಳವಣಿಗೆ. ಶೀಘ್ರವೇ ಶಾಸಕರ ನೇತೃತ್ವದಲ್ಲಿ ಸಭೆ ನಡೆಸಿ ಅರ್ಹರಿಗೆ ಜಮೀನು ಮಂಜೂರುಗೊಳಿಸಿ ಎಂದು ಸೂಚಿಸಿದರು.

ಸಚಿವ ಕೃಷ್ಣ ಬೈರೇಗೌಡ
ಬಗರ್ ಹುಕುಂ ಅರ್ಜಿ ಸಲ್ಲಿಕೆ ಇನ್ನು ಸುಲಭ: ಆ್ಯಪ್ ಬಿಡುಗಡೆ ಮಾಡಿದ ಸಚಿವ ಕೃಷ್ಣ ಬೈರೇಗೌಡ

ಇದೇ ವೇಳೆ ತಹಶೀಲ್ದಾರ್ ಗಳನ್ನು ತರಾಟೆಗೆ ತೆಗೆದುಕೊಂಡ ಸಚಿವರು, ರೈತರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನೀಡಲು 1-5 ನಮೂನೆ ಪೋಡಿ ದುರಸ್ತಿ ಕೆಲಸಕ್ಕೆ ಚಾಲನೆ ನೀಡಲಾಗಿತ್ತು. ಆದರೆ, ಹಲವಾರು ತಾಲೂಕುಗಳಲ್ಲಿ 1-5 ನಮೂನೆ ಪೋಡಿ ದುರಸ್ತಿ ಕಾರ್ಯ ಮುಗಿದರೂ, 6-10 ನಮೂನೆ ಸರ್ವೇ ಕೆಲಸಕ್ಕಾಗಿ ಭೂ ದಾಖಲೆಯ ಸಹಾಯ ನಿರ್ದೇಶಕರಿಗೆ ಕಳುಹಿಸಲು ಮೀನಮೇಷ ಎಣಿಸುತ್ತಿರುವುದು ಏಕೆ? ಎಂದು ಪ್ರಶ್ನಿಸಿದರು.

ತಹಶೀಲ್ದಾರ್‌ ನ್ಯಾಯಾಲಯಗಳಲ್ಲಿ ವರ್ಷಗಳಿಗಿಂತ ಹೆಚ್ಚುಕಾಲ ಬಾಕಿ ಉಳಿದಿರುವ ತಕರಾರು ಅರ್ಜಿಗಳನ್ನು ವಿಲೇವಾರಿ ಮಾಡದ ತಹಶೀಲ್ದಾರರ ವಿರುದ್ಧವೂ ಅಸಮಾಧಾನ ವ್ಯಕ್ತಪಡಿಸಿದ ಅವರು, 90 ದಿನಗಳಿಗಿಂತ ಹೆಚ್ಚು ಕಾಲ ಯಾವುದೇ ತಕರಾರು ಅರ್ಜಿಗಳನ್ನು ಉಳಿಸಿಕೊಳ್ಳುವಂತಿಲ್ಲ ಎಂದು ತಾಕೀತು ಮಾಡಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Open in App

Advertisement

X
Kannada Prabha
www.kannadaprabha.com