
ಹುಬ್ಬಳ್ಳಿ: 500 ರೂ. ಮುಖಬೆಲೆಯ ನೋಟುಗಳ ಮೇಲೆ ಬಾಬಾಸಾಹೇಬ್ ಬಿ ಆರ್ ಅಂಬೇಡ್ಕರ್ ಅವರ ಚಿತ್ರ ಮುದ್ರಿಸುವಂತೆ ಕೇಂದ್ರ ಸರ್ಕಾರಕ್ಕೆ ಬಿಜೆಪಿ ಒತ್ತಾಯಿಸಿದೆ.
ನಗರದ ಸಿಟಿಜನ್ಸ್ ಫಾರ್ ಸೋಷಿಯಲ್ ಜಸ್ಟೀಸ್ ಸಂಘಟನೆ ಇಲ್ಲಿಯ ಇಂದಿರಾ ಗಾಜಿನಮನೆ ಆವರಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ‘ಸಂವಿಧಾನ ಸನ್ಮಾನ ಮತ್ತು ಪುಸ್ತಕ ಲೋಕಾರ್ಪಣೆ’ ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಮಾತನಾಡಿದರು.
500 ಮುಖಬೆಲೆಯ ನೋಟಿನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರ ಹಾಕಬೇಕು ಎನ್ನುವುದು ಮೊದಲಿನಿಂದಲೂ ಆಗ್ರಹವಿದೆ. ಇದೇ ಏಪ್ರಿಲ್ 14ರ ಅಂಬೇಡ್ಕರ್ ಅವರ ಜನ್ಮದಿನದ ಒಳಗೆ ಆ ಕಾರ್ಯವನ್ನು ಕೇಂದ್ರ ಸರ್ಕಾರ ಮಾಡಬೇಕು ಎಂದು ವೇದಿಕೆಯಲ್ಲಿದ್ದ ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ ಮತ್ತು ಅರ್ಜುನ್ ರಾಮ್ ಮೇಘವಾಲ್ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಏಪ್ರಿಲ್ 14 ರಂದು ಅಂಬೇಡ್ಕರ್ ಅವರ ಜನ್ಮ ದಿನಾಚರಣೆಯ ಮೊದಲು ಈ ನಿರ್ಧಾರ ಕೈಗೊಳ್ಳುವಂತೆ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಮತ್ತು ಹಣಕಾಸು ಸಚಿವೆ ನೃಮಲಾ ಸೀತಾರಾಮನ್ ಅವರ ಗಮನಕ್ಕೆ ತರುವಂತೆ ಮನವಿ ಮಾಡಿದರು.
ನೋಟುಗಳ ಮೇಲೆ ಅಂಬೇಡ್ಕರ್ ಅವರ ಚಿತ್ರವನ್ನು ನೋಡುವುದು ದಲಿತ ಸಮುದಾಯಗಳಿಗಷ್ಟೇ ಅಲ್ಲ, ಇಡೀ ದೇಶಕ್ಕೆ ಅಂಬೇಡ್ಕರ್ ನೀಡಿದ ಕೊಡುಗೆಗಳನ್ನು ಸ್ಮರಿಸುವ ಇತರರ ಬಹುದಿನಗಳ ಕನಸಾಗಿದೆ. ಇದಲ್ಲದೆ, ಅಂಬೇಡ್ಕರ್ ಅವರನ್ನು ಭಾರತದಲ್ಲಿ ಮಾತ್ರವಲ್ಲದೆ 150 ದೇಶಗಳ ಜನರೂ ಗೌರವಿಸುತ್ತಿದ್ದಾರೆಂದು ಹೇಳಿದರು.
ಸಂಸತ್ತಿನಲ್ಲಿ ಅಮಿತ್ ಶಾ ಮಾತನಾಡಿದ್ದು ಹಿಂದಿಯಲ್ಲಿ. ಆ ಭಾಷೆ ಅರ್ಥವಾಗದವರು ಬೀದಿಗೆ ಇಳಿದಿದ್ದಾರೆ. ಮೊದಲಿನಂತಹ ಸಂಘಟನೆಗಳು ಈಗ ಇಲ್ಲ. ಈಗಿರುವುದೆಲ್ಲಾ ಹೊಟ್ಟೆಪಾಡಿನ ಸಂಘಟನೆಗಳು. ಅವರೆಲ್ಲ ಅಂಬೇಡ್ಕರ್ ಅವರ ಗುರುತಿನ ಚೀಟಿಯಷ್ಟೇ ಆಗಿದ್ದಾರೆ. ಕಾಂಗ್ರೆಸ್ ಲೂಟಿ ಮಾಡಿದ ಹಣದಲ್ಲಿ ಹೋರಾಟ ಮಾಡಬೇಕಾ? ಕೃಪಾಪೋಷಿತ ನಾಟಕ ಮಂಡಳಿಯಿಂದ ಬಂದ್ ಆಗುತ್ತಿದೆ. ಸತ್ಯದ ಅರಿವು ಆಗುವವರೆಗೆ ಹೋರಾಡುತ್ತಾರೆ. ನಂತರ ತೆಪ್ಪಗಾಗುತ್ತಾರೆ ಎಂದು ವ್ಯಂಗ್ಯವಾಡಿದರು.
ಡಾ. ಬಿ.ಆರ್. ಅಂಬೇಡ್ಕರ್ ಅವರನ್ನು ಕೆಲವರು ನಮ್ಮ ಜಾತಿಯವರು ಎಂದು ಖುಷಿಪಡುತ್ತಾರೆ. ಇದು ಕ್ಷುಲ್ಲಕ ಸಂಗತಿ. ಎತ್ತರದ ವ್ಯಕ್ತಿಯನ್ನು ಜಾತಿಗೆ ಅಂಟಿಸದೆ, ದೇಶಕ್ಕೆ ಅಂಟಿಸಬೇಕು. ಅಂಬೇಡ್ಕರ್ ಅವರಿಗೆ ತಾವು ಯಾವ ಜಾತಿಯಲ್ಲಿ ಹುಟ್ಟುತ್ತೇನೆ ಎನ್ನುವುದು ಗೊತ್ತಿರಲಿಲ್ಲ. ನನಗೂ ಸಹ. ಗೊತ್ತಿದ್ದರೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರ ಜಾತಿಯಲ್ಲಿ ಹುಟ್ಟುತ್ತಿದ್ದೆ. ಕಾಂಗ್ರೆಸ್‌ನ ಸುಳ್ಳಿನ ಹಿಂದೆ ಬೀಳುವ ಮೊದಲು ಯೋಚಿಸಬೇಕು ಎಂದು ಹೇಳಿದರು.
‘ಸಂವಿಧಾನ ಬದಲಾಯಿಸುವ ತಾಕತ್ತು ಇರುವುದು ಕಾಂಗ್ರೆಸ್‌ಗೆ ಮಾತ್ರ. ಉಳಿದವರ‍್ಯಾರಿಗೂ ಅದನ್ನು ಬದಲಿಸಲು ಸಾಧ್ಯವಿಲ್ಲ. ಕಾಂಗ್ರೆಸ್ ಮತ್ತು ಅಂದಿನ ಪ್ರಧಾನಿ ಇಂದಿರಾ ಗಾಂಧಿಯವರು ದೇಶದಲ್ಲಿ ಸಂವಿಧಾನವನ್ನು ಎರಡು ವರ್ಷಗಳ ಕಾಲ ಅಮಾನತುಗೊಳಿಸಿದ್ದರು. ತಮ್ಮ ಅಧಿಕಾರದ ಹಸಿವಿಗಾಗಿ ಇದನ್ನು ಮಾಡಿದ್ದರು. ಅಂಬೇಡ್ಕರ್ ಅಧಿಕಾರದ ಹಸಿವುಳ್ಳವರಾಗಿರಲಿಲ್ಲ. ಸಂವಿಧಾನ ಬರೆಯಲು ಅವಕಾಶ ಸಿಕ್ಕಾಗ ಅಂಬೇಡ್ಕರ್ ಅವರು ತಮಗಾದ ಅವಮಾನ ತೀರಿಸಿಕೊಳ್ಳಬಹುದಿತ್ತು. ಅವರು ಎಲ್ಲಿಯೂ ಹಗೆತನ ಮಾಡಲಿಲ್ಲ, ಇದ್ದರೆ ಅವರಂಥ ದೇಶಭಕ್ತ ಇರಬೇಕು. ದೇಶದಲ್ಲಿ ಅತಿಹೆಚ್ಚು ವರ್ಷ ಆಡಳಿತ ನಡೆಸಿದ್ದ ಕಾಂಗ್ರೆಸ್, ಈಗ ವೋಟ್ ಬ್ಯಾಂಕ್‌ಗಾಗಿ ಜಾತಿ ರಾಜಕಾರಣ ಮಾಡುತ್ತಿದೆ ಎಂದು ಕಿಡಿಕಾರಿದರು.
ಅಧಿಕಾರವಿಲ್ಲದೆ ಕಾಂಗ್ರೆಸ್ ಉಳಿಸುವ ಸುಲಭವಿಲ್ಲ. ಗೃಹ ಸಚಿವ ಅಮಿತ್ ಶಾ ಅವರು ಕಾಂಗ್ರೆಸ್ ಪಕ್ಷವು ಅಂಬೇಡ್ಕರ್ ಅವರನ್ನು ಹೇಗೆ ಅವಮಾನಿಸಿತು ಎಂಬುದನ್ನು ವಿವರಿಸಿದ್ದರು. ಇದೇ ಅವರ ಕಣ್ಣುಕೆಂಪಗಾಗುವಂತೆ ಮಾಡಿದೆ. ದಲಿತರೇಕೆ ಇದಕ್ಕೆ ಪ್ರತಿಕ್ರಿಯಿಸಬೇಕು. ಕಾಂಗ್ರೆಸ್ ಸುಳ್ಳು ಸುದ್ದಿಗಳನ್ನು ಹರಡುತ್ತಿದ್ದು ಸಮಾಜದಲ್ಲಿ ಒಡಕು ಮೂಡಿಸುತ್ತಿದೆ. ಆದ್ದರಿಂದ ದಲಿತರು ಇಂತಹ ಪ್ರಯತ್ನಗಳಿಗೆ ಬಲಿಯಾಗಬಾರದು ಎಂದು ಮನವಿ ಮಾಡಿದರು.
ಬಳಿಕ ಮಾತಾಡಿದ ಕೇಂದ್ರ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ರಾಜ್ಯ ಸಚಿವ ಅರ್ಜುನ್ ರಾಮ್ ಮೇಘವಾಲ್ ಅವರು, ಕಾಂಗ್ರೆಸ್ ವಿರುದ್ಧ ಕಿಡಿಕಾರಿದರು.
ಎಲ್ಲಾ ಹಂತದಲ್ಲಿಯೂ ಕಾಂಗ್ರೆಸ್ ಅಂಬೇಡ್ಕರ್ ಅವರಿಗ ಅನ್ಯಾಯ ಮಾಡುತ್ತಲೇ ಬಂದಿದೆ. ಜನ ಸಂಘ ಮತ್ತು ಬಿಜೆಪಿ ಮೊದಲಿನಿಂದಲೂ ಅಂಬೇಡ್ಕರ್ ಅವರನ್ನು ಅನುಸರಿಸಿಕೊಂಡು, ಅವತ ತತ್ವ ಸಿದ್ಧಾಂತವನ್ನು ಪಾಲಿಸಿಕೊಂಡು ಬರುತ್ತಿದೆ ಎಂದರು.
1946 ರಲ್ಲಿ ರಚನೆಯಾದ ಮಧ್ಯಂತರ ಸರ್ಕಾರದಲ್ಲಿ ಜವಾಹರಲಾಲ್ ನೆಹರು ಅವರು ಅಂಬೇಡ್ಕರ್ ಅವರನ್ನು ತಮ್ಮ ಸಂಪುಟಕ್ಕೆ ಆಯ್ಕೆ ಮಾಡಲಿಲ್ಲ. ಆದರೆ ಸಾರ್ವಜನಿಕ ಒತ್ತಡವೇ ಅವರನ್ನು ಸಚಿವರನ್ನಾಗಿ ಮಾಡಿತು. ಸಂಪುಟಕ್ಕೆ ಸೇರಿಸಿಕೊಂಡ ನಂತರವೂ ಅವರಿಗೆ ಭರವಸೆ ನೀಡಿದಂತೆ ಸೂಕ್ತವಾದ ಖಾತೆಯನ್ನು ನೀಡಲಿಲ್ಲ ಮತ್ತು ನೆಹರು ಅವರು ರಾಜೀನಾಮೆ ನೀಡುವಂತೆ ಒತ್ತಾಯಿಸಿದ್ದರು,
ಕಾಂಗ್ರೆಸ್ ಪಕ್ಷ ಮತ್ತು ನೆಹರು ಅವರು ಮೊದಲ ಲೋಕಸಭಾ ಚುನಾವಣೆಯಲ್ಲಿ ಅಂಬೇಡ್ಕರ್ ಅವರನ್ನು ಸೋಲಿಸಲು ಹೇಗೆ ಸಂಚು ರೂಪಿಸಿದರು, ಅಂಬೇಡ್ಕರ್ ಅವರ ಸಾವಿನ ವೇಳೆ ಯಾವ ರೀತಿ ಕಾಂಗ್ರೆಸ್ ಪಕ್ಷ ಅವಮಾನಿಸಿತು ಎಂಬುದನ್ನು ವಿವರಿಸಿದರು.
ಈ ಸಂದರ್ಭದಲ್ಲಿ ವಿಕಾಸ್ ಕುಮಾರ್ ಪುತ್ತೂರು ಬರೆದ 'ಸಂವಿಧಾನ್ ಸನ್ಮಾನ್ ಪುಸ್ತಕವನ್ನು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರು ಬಿಡುಗಡೆ ಮಾಡಿದರು.
ಈ ಸಂದರ್ಭದಲ್ಲಿ ಶಾಸಕರಾದ ಅರವಿಂದ್ ಬೆಲ್ಲದ್, ಮಹೇಶ್ ಟೆಂಗಿನಕಾಯಿ ಮತ್ತು ಎಂ ಆರ್ ಪಾಟೀಲ್, ಎಂಎಲ್ಸಿ ಎಸ್ ವಿ ಸಂಕನೂರ್ ಮತ್ತು ಇತರರು ಉಪಸ್ಥಿತರಿದ್ದರು.
Advertisement