
ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ. ವಿಜಯೇಂದ್ರ ಶುಕ್ರವಾರ ಪಕ್ಷದ ಮಾಜಿ ಶಾಸಕರು, ಮಾಜಿ ವಿಧಾನ ಪರಿಷತ್ ಸದಸ್ಯರು ಹಾಗೂ ಮುಖಂಡರ ವಿಶೇಷ ಸಭೆ ನಡೆಸಿದರು. ಸದ್ಯದಲ್ಲೇ ಎದುರಾಗಲಿರುವ ಜಿಲ್ಲಾ ಪಂಚಾಯತ್ ಹಾಗೂ ತಾಲ್ಲೂಕು ಪಂಚಾಯಿತಿ ಚುನಾವಣೆಗಳನ್ನು ಸಮರ್ಥವಾಗಿ ಎದುರಿಸಲು ಸಜ್ಜಾಗುವುದೂ ಸೇರಿದಂತೆ ಪಕ್ಷ ಬಲ ಪಡಿಸುವ ನಿಟ್ಟಿನಲ್ಲಿ ಚರ್ಚಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಬಿ.ವೈ. ವಿಜಯೇಂದ್ರ, ಎಲ್ಲಾರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಒಗ್ಗಟ್ಟಿನಿಂದ ಪಕ್ಷ ಸಂಘಟಿಸುವುದಾಗಿ ಪ್ರತಿಪಾದಿಸಿದರು. ಈ ಮೂಲಕ ರಾಜ್ಯ ಬಿಜೆಪಿಯಲ್ಲಿನ ಬಣ ರಾಜಕೀಯವನ್ನು ಕಡಿಮೆ ಮಾಡಲು ಪ್ರಯತ್ನಿಸುವುದಾಗಿ ತಿಳಿಸಿದರು. ರಾಜಕೀಯ ಪಕ್ಷವಾಗಿ ಸಣ್ಣ ಪುಟ್ಟ ಭಿನ್ನಾಭಿಪ್ರಾಯ, ಗೊಂದಲ ಇರುವುದು ಸಹಜ. ಅದನ್ನು ಕೇಂದ್ರದ ವರಿಷ್ಠರು ನೋಡಿಕೊಳ್ಳುತ್ತಾರೆ. ಆದರೆ, ಪಕ್ಷ ಬಲಪಡಿಸುವ ನಿಟ್ಟಿನಲ್ಲಿ ಎಲ್ಲರನ್ನೂ ಒಗ್ಗಟ್ಟಿಗೆ ತೆಗೆದುಕೊಂಡು ಹೋಗುವುದು ನಮ್ಮ ಕರ್ತವ್ಯ ಎಂದರು.
ಇದೇ ವೇಳೆ ಸಿಎಂ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ನಡುವಿನ 'ಪವರ್ ಪಾಲಿಟಿಕ್ಸ್ ವಿರುದ್ಧ ವಾಗ್ದಾಳಿ ನಡೆಸಿದ ವಿಜಯೇಂದ್ರ, ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಅಭಿವೃದ್ಧಿ ಶೂನ್ಯವಾಗಿದೆ ಎಂದು ಆರೋಪಿಸಿದರು.
ರಾಜ್ಯದಲ್ಲಿ ಬಾಣಂತಿಯರ ಸಾವು, ಭ್ರಷ್ಟಾಚಾರ , ಆತ್ಮಹತ್ಯೆ ಪ್ರಕರಣ ಮತ್ತಿತರ ಸಮಸ್ಯೆಗಳ ಕುರಿತು ಸಭೆಯಲ್ಲಿ ಚರ್ಚಿಸಲಾಗಿದ್ದು, ಜನರು ಮತ್ತು ಆಡಳಿತಾರೂಢ ಪಕ್ಷದ ಕಾಂಗ್ರೆಸ್ ಶಾಸಕರು ಕೂಡಾ ಈ ಸರ್ಕಾರದಿಂದ ಬೇಸತ್ತಿದ್ದಾರೆ ಎಂದರು.
ಮಾರ್ಚ್ ನೊಳಗೆ ಸಿಎಂ ಬದಲಾವಣೆ ಊಹಾಪೋಹ ಕುರಿತು ಪ್ರತಿಕ್ರಿಯಿಸಿದ ವಿಜಯೇಂದ್ರ, ಅಧಿಕಾರ ಹಂಚಿಕೆ ಸೂತ್ರವನ್ನು ಸಿಎಂ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಬಹಿರಂಗಪಡಿಸಬೇಕು ಎಂದು ಒತ್ತಾಯಿಸಿದರು. ಸಿದ್ದರಾಮಯ್ಯ ಅಧಿಕಾರ ಅವಧಿ ಮುಗಿಯುತ್ತಾ ಬಂದಿದ್ದು, ಡಿನ್ನರ್ ಮೀಟಿಂಗ್ ಗೇಮ್ ಆರಂಭಿಸಿದ್ದಾರೆ. ಅವರ ಪರವಾಗಿರುವ ಸಚಿವರು ಬೇರೆ ಬೇರೆ ಹೇಳಿಕೆ ನೀಡುತ್ತಿದ್ದಾರೆ. ಮತ್ತೊಂದೆಡೆ ಡಿಕೆ ಶಿವಕುಮಾರ್ ಜ್ಯೋತಿಷಿಗಳ ಮೊರೆ ಹೋಗಿದ್ದಾರೆ.ಮುಂದಿನ ದಿನಗಳಲ್ಲಿ ಮತ್ತಷ್ಟು ರಾಜಕೀಯ ಆಟ ನಡೆಯಲಿದೆ ಎಂದು ಹೇಳಿದರು.
ಸಭೆ ಬಳಿಕ ಮಾತನಾಡಿದ ಯಡಿಯೂರಪ್ಪ, ಮುಂಬರುವ ಜಿಲ್ಲಾ ಮತ್ತು ತಾಲ್ಲೂಕ್ ಪಂಚಾಯಿತಿ ಚುನಾವಣೆ ಹಿನ್ನೆಲೆಯಲ್ಲಿ ಮುಂದಿನ ವಾರದಿಂದ ರಾಜ್ಯಾದ್ಯಂತ ಪ್ರವಾಸ ಕೈಗೊಂಡು ಪ್ರತಿಯೊಂದು ಜಿಲ್ಲೆಯಲ್ಲಿ ಪಕ್ಷದ ಕಾರ್ಯಕರ್ತರೊಂದಿಗೆ ಸಭೆ ನಡೆಸಲಾಗುವುದು ಎಂದು ತಿಳಿಸಿದರು.
Advertisement