
ಬೆಳಗಾವಿ: ಹಿಂದಿನ ಬಿಜೆಪಿ ಸರ್ಕಾರ ಸೃಷ್ಟಿಸಿದ ಸಮಸ್ಯೆಗಳಿಂದಾಗಿ ರಾಜ್ಯ ಸರ್ಕಾರವು ಗುತ್ತಿಗೆದಾರರ ಬಾಕಿ ಹಣ ನೀಡಲು ಕಠಿಣ ಪರಿಸ್ಥಿತಿಯನ್ನು ಎದುರಿಸುವಂತಾಗಿದೆ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರು ಸೋಮವಾರ ಆರೋಪಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗುತ್ತಿಗೆದಾರರ ಬಿಲ್ ಬಾಕಿ ಸಮಸ್ಯೆ ಪ್ರತಿ ಜಿಲ್ಲೆಗಳಲ್ಲಿಯೂ ಇದೆ. ಅವರು ಕೆಲಸ ಮಾಡಿದ್ದರ ಬಿಲ್ ಪಾವತಿಸಬೇಕಿರುವುದು ನಿಜ. ಈ ಸಮಸ್ಯೆಗೆ ಮೂಲ ಕಾರಣವನ್ನು ಯಾರು ಹೇಳುತ್ತಿಲ್ಲ. ಹಣಕಾಸು ಇಲಾಖೆ ಯಾವ ಇಲಾಖೆಗೆ ಎಷ್ಟು ಹಂಚಿಕೆಯಾಗಿದೆ ಅಷ್ಟನ್ನೇ ನೀಡುತ್ತದೆ. ಆದರೆ, ಬಿಜೆಪಿ ಸರ್ಕಾರ ಇದ್ದಾಗ ಅನುದಾನ ಇಲ್ಲದೆ ಕೆಲಸಗಳನ್ನು ಮಾಡಲಾಗಿದೆ. ಬಿಜೆಪಿ ಮಾಡಿದ ಆ ಎಡವಟ್ಟಿನಿಂದ ಬಿಲ್ ಸಮಸ್ಯೆ ಸೃಷ್ಟಿಯಾಗಿದೆ ಎಂದು ಹೇಳಿದರು.
ಲೋಕೋಪಯೋಗಿ ಇಲಾಖೆಯದ್ದೆ14 ಸಾವಿರ ಕೋಟಿ ರೂ. ವ್ಯತ್ಯಾಸ ಇದ್ದು, ಇದಕ್ಕೆ ಯಾವುದೇ ಅನುದಾನ ಇಲ್ಲ. ಹೀಗಾಗಿ ಮುಂದೆ ಹೆಚ್ಚುವರಿ ಹಣ ಕೇಳುತ್ತಾ ಕೇಳುತ್ತಾ, ಅದನ್ನು ಸರಿದೂಗಿಸಬೇಕಾದ ಅನಿವಾರ್ಯತೆಯಿದೆ. ಗ್ಯಾರಂಟಿ ಯೋಜನೆಗಳಿಗೆ ಬಜೆಟ್ನಲ್ಲಿ ಪ್ರತ್ಯೇಕವಾದ ಅನುದಾನ ಘೋಷಿಸಲಾಗಿದೆ. ಗ್ಯಾರಂಟಿಗೂ ಇದಕ್ಕೂ ಯಾವುದೇ ಸಂಬಂಧವಿಲ್ಲ. ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಬಿಲ್‌ಗಳನ್ನು ತೆರವುಗೊಳಿಸಲು ಕ್ರಮಗಳ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಕೆಪಿಸಿಸಿ ಅಧ್ಯಕ್ಷರ ನೇಮಕಕ್ಕೆ ಸಂಬಂಧಿಸಿದಂತೆ ತಮ್ಮ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನಡುವಿನ ಹಗ್ಗಜಗ್ಗಾಟ ವಿಚಾರ ಕುರಿತು ಪ್ರತಿಕ್ರಿಯಿಸಿ, ಇಲ್ಲಿಯವರೆಗೆ ಅಂತಹ ಪರಿಸ್ಥಿತಿ ಉದ್ಭವಿಸಿಲ್ಲ ಮತ್ತು ಹೊಸ ಕೆಪಿಸಿಸಿ ಅಧ್ಯಕ್ಷರ ನೇಮಕ ಪ್ರಕ್ರಿಯೆ ಆರಂಭವಾದಾಗ ಈ ವಿಷಯದ ಬಗ್ಗೆ ಪ್ರತಿಕ್ರಿಯೆ ನೀಡುವೆ ಎಂದರು.
Advertisement